ಫೈಜರ್ ಲಸಿಕೆ; "ಅಲರ್ಜಿ" ಹಿನ್ನೆಲೆಯವರಿಗೆ ಎಚ್ಚರಿಕೆ ಕೊಟ್ಟ ಲಂಡನ್
ಲಂಡನ್, ಡಿಸೆಂಬರ್ 09: ಔಷಧಿ, ಆಹಾರ ಅಥವಾ ಲಸಿಕೆ ತೆಗೆದುಕೊಂಡರೆ ಅಲರ್ಜಿಗೆ ಒಳಗಾಗುವ ಜನರಿಗೆ, ಕೊರೊನಾ ವೈರಸ್ ಗೆ ನೀಡಲಾಗುತ್ತಿರುವ ಫೈಜರ್ ಲಸಿಕೆ ತೆಗೆದುಕೊಳ್ಳದಂತೆ ಬ್ರಿಟನ್ ಔಷಧ ನಿಯಂತ್ರಕ ಬುಧವಾರ ಎಚ್ಚರಿಕೆಯನ್ನು ನೀಡಿದೆ.
ಬ್ರಿಟನ್ ನಲ್ಲಿ ಮೊದಲ ಹಂತದಲ್ಲಿ ರೋಗಿಗಳಿಗೆ ಎರಡು ಡೋಸ್ ಗಳ ಲಸಿಕೆ ನೀಡಿದ ನಂತರ ಈ ಎಚ್ಚರಿಕೆಯನ್ನು ರವಾನಿಸಲಾಗಿದೆ. ಇಬ್ಬರು ರಾಷ್ಟ್ರೀಯ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ತೆಗೆದುಕೊಂಡ ನಂತರ "ಅನಾಫಿಲ್ಯಾಕ್ಟಾಯ್ಡ್" ಅಲರ್ಜಿ (ಉಸಿರಾಟದಲ್ಲಿ ತೊಂದರೆ, ಚರ್ಮದ ಸಮಸ್ಯೆ, ರಕ್ತದೊತ್ತಡ) ಕಾಣಿಸಿಕೊಂಡಿದೆ. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆಯ ನಂತರ, ಲಸಿಕೆಯ ಪ್ರತಿಕೂಲ ಪರಿಣಾಮವನ್ನರಿತು ಇಂಗ್ಲೆಂಡ್ ನ ಆರೋಗ್ಯ ಸೇವಾ ಇಲಾಖೆಯು ಸಮೂಹ ಲಸಿಕಾ ಕಾರ್ಯಕ್ರಮದ ಪಟ್ಟಿಯಲ್ಲಿರುವವರಿಗೆ ಅಲರ್ಜಿಯ ಹಿನ್ನೆಲೆಯಿದೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಿದೆ.

ಹೊಸ ಲಸಿಕೆ ನೀಡಿದಾಗ ಈ ರೀತಿ ಆಗುವುದು ಸಹಜವೇ ಆಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಅಲರ್ಜಿಯ ಹಿನ್ನೆಲೆಯಿರುವ ಜನರಿಗೆ ಲಸಿಕೆ ತೆಗೆದುಕೊಳ್ಳದೇ ಇರುವುದು ಉತ್ತಮ ಎಂದು ವೈದ್ಯಕೀಯ ನಿರ್ದೇಶಕ ಸ್ಟೀಫನ್ ಪೋವಿಸ್ ತಿಳಿಸಿದ್ದಾರೆ. ಯಾವುದೇ ಲಸಿಕೆ ತೆಗೆದುಕೊಂಡಾಗಲೂ ಅಲರ್ಜಿ ಹಿನ್ನೆಲೆವುಳ್ಳ ವ್ಯಕ್ತಿಗಳಿಗೆ ಈ ರೀತಿಯಾಗುವುದು ನಿರೀಕ್ಷಿತವೇ. ಹಾಗಾಗಿ ಈ ಕುರಿತು ಮತ್ತಷ್ಟು ಸ್ಪಷ್ಟತೆ ದೊರೆತ ನಂತರ ಮುಂದುವರೆಯಲಾಗುವುದು ಎಂದರು.
ಎಂಎಚ್ ಆರ್ ಎ (ಮೆಡಿಸಿನ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ) ಇಂದಲೂ ಸೂಚನೆ ನೀಡಲಾಗಿದ್ದು, ತಾತ್ಕಾಲಿಕವಾಗಿ ಲಸಿಕೆ ಬಳಕೆಗೆ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಈ ಪ್ರತಿಕೂಲ ಪರಿಣಾಮದ ಕುರಿತು ವೈದ್ಯಕೀಯ ಕಾರಣಗಳನ್ನು ಪತ್ತೆಹಚ್ಚಿದ ನಂತರ ಲಸಿಕೆ ಕುರಿತು ಸ್ಪಷ್ಟತೆಯನ್ನು ನೀಡಲಾಗುವುದು.
ಇದಾಗಲೇ ಇಂಗ್ಲೆಂಡ್ ನ 70 ಆಸ್ಪತ್ರೆಗಳಲ್ಲಿ 8,00,000 ಡೋಸ್ ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ. ಮುಂದಿನ ವಾರದಲ್ಲಿ ಒಂದು ಮಿಲಿಯನ್ ಡೋಸ್ ನಷ್ಟು ಲಸಿಕೆ ದೊರೆಯಲಿದೆ. ಈ ವರ್ಷದ ಕೊನೆಯಲ್ಲಿ 2.5 ಮಂದಿಗೆ ಲಸಿಕೆ ನೀಡುವ ಭರವಸೆಯನ್ನು ಸರ್ಕಾರ ಹೊಂದಿದೆ.












Click it and Unblock the Notifications