ಕೊಪ್ಪಳ ಲೋಕಸಭಾ ಕ್ಷೇತ್ರ; ವಿಧಾನಸಭಾ ಕ್ಷೇತ್ರಗಳು, ಮತದಾರರ ವಿವರ
ಕೊಪ್ಪಳ, ಮಾರ್ಚ್ 18: ಕೊಪ್ಪಳ ಲೋಕಸಭಾ ಕ್ಷೇತ್ರ 2024ರ ಚುನಾವಣೆಗೆ ತಯಾರಾಗುತ್ತಿದೆ. ಈಗಾಗಲೇ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದ್ದು, ಮೇ 7ರಂದು ಕೊಪ್ಪಳದಲ್ಲಿ ಮತದಾನ ನಡೆಯಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 70.67ರಷ್ಟು ಮತದಾನವಾಗಿತ್ತು. ಈ ಬಾರಿ ಸಹ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಈಗಾಗಲೇ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡಿದ್ದು, ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದರು.

ಲೋಕಸಭಾ ಚುನಾವಣೆ-2024ಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಎಲ್ಲಾ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,51,700 ಮತದಾರರು ಮತದಾನ ಮಾಡಲಿದ್ದಾರೆ ಎಂದು ಹೇಳಿದರು. ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನ. ಏಪ್ರಿಲ್ 20ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 22 ಕೊನೆಯ ದಿನ. ಮೇ 7ರಂದು ಮತದಾನ ಹಾಗೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಸಹಾಯಕ ಚುನಾವಣಾಧಿಕಾರಿಗಳು: ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳಿಗೆ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ, ಸಿಂಧನೂರು, ಮಸ್ಕಿ, ಸಿರಗುಪ್ಪಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯ ಅನುಷ್ಠಾನಕ್ಕಾಗಿ ಒಟ್ಟು 47 ಫ್ಲೈಯಿಂಗ್ ಸ್ಕ್ವಾಡ್, ಒಟ್ಟು 32 ಚೆಕ್‌ಪೋಸ್ಟ್, ಒಟ್ಟು 27 ವಿಡಿಯೋ ಸರ್ವೆಲೆನ್ಸ್ ತಂಡ ಹಾಗೂ ಒಟ್ಟು 168 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೂನ್ 6ರ ತನಕ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಕೊಪ್ಪಳ ಲೋಕಸಭಾ ಕ್ಷೇತ್ರವು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಗಳು. ಸಿಂಧನೂರು, ಮಸ್ಕಿ ಹಾಗೂ ಸಿರಗುಪ್ಪಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಚ್ 16ರಂತೆ ಒಟ್ಟು 1317 ಮತಗಟ್ಟೆಗಳು, 5,79,404 ಪುರುಷ ಮತದಾರರು, 5,89,690 ಮಹಿಳಾ ಮತದಾರರು ಮತ್ತು 57 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 11,69,151 ಮತದಾರರಿದ್ದಾರೆ.
ಸಿಂಧನೂರು, ಮಸ್ಕಿ ಹಾಗೂ ಸಿರಗುಪ್ಪಿ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 2045 ಮತಗಟ್ಟೆಗಳಿದ್ದು, ಮತದಾರರ ಪಟ್ಟಿಯಂತೆ 9,12,818 ಪುರುಷ ಮತದಾರರು, 9,38,750 ಮಹಿಳಾ ಮತದಾರರು ಹಾಗೂ 132 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 18,51,700 ಮತದಾರರು ಇದ್ದಾರೆ. ಒಟ್ಟಾರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 18,51,700 ಮತದಾರರಲ್ಲಿ 46162 ಯುವ ಮತದಾರರು, 25,619 ವಿಕಲಚೇತನ ಮತದಾರರು, 12,900 ಮತದಾರರು 85 ವರ್ಷ ಮೇಲ್ಪಟ್ಟವರು ಹಾಗೂ 609 ಸೇವಾ ಮತದಾರರಿದ್ದಾರೆ.
ಹಣ, ಸುಳ್ಳು ಮಾಹಿತಿ, ನೀತಿ ಸಂಹಿತೆ ಉಲ್ಲಂಘನೆ ಮುಂತಾದವುಗಳನ್ನು ಎದುರಿಸು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಶೇ.50 ರಷ್ಟು ಮತಗಟ್ಟೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ವೆಬ್‌ಕಾಸ್ಟಿಂಗ್ ಕೈಗೊಳ್ಳಲಾಗುವುದು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣಾ ಆಯೊಗದಿಂದ C-vigil App ಅನ್ನು ಪರಿಚಯಿಸಿದ್ದು, ಯಾವುದೇ ಸಾರ್ವಜನಿಕರು ಅನಾಮಧೇಯವಾಗಿ ಅಥವಾ ತಮ್ಮ ವಿವರಗಳನ್ನು ಸಲ್ಲಿಸುವ ಮೂಲಕ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ದೂರು ಸಲ್ಲಿಸಬಹುದು. ದೂರು ಸಲ್ಲಿಸಿದ ಒಟ್ಟು 100 ನಿಮಿಷಗಳಲ್ಲಿ ಪ್ರಕರಣವನ್ನು ವಿಲೇವಾರಿಗೊಳಿಸಲಾಗುತ್ತದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಸ್ಪರ್ಧಿಸುವ ಅಭ್ಯರ್ಥಿಗಳು ರಾಜಕೀಯ ಸಭೆ, ಸಮಾರಂಭಗಳು, ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಂದ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
ಪ್ರಚಾರ ಕಾರ್ಯಕ್ರಮಗಳಿಗೆ ಉಪಯೋಗಿಸುವ ವಾಹನಗಳಿಗೆ, ಪಕ್ಷದ ಕಛೇರಿ ತೆರೆಯಲು ಸೇರಿದಂತೆ ಎಲ್ಲಾ ಪರವಾನಗಿಗಳಿಗೆ 48 ಗಂಟೆ ಮುಂಚಿತವಾಗಿ SUVIDHA App ಮೂಲಕ ಅಥವಾ ಲಿಖಿತ ರೂಪದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅನುಮತಿಗಳಿಗಾಗಿ Single Window System ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳು ಇದರಿಂದ ಉಪಯೋಗ ಪಡೆದುಕೊಳ್ಳಬಹುದು.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, "ಲೋಕಸಭಾ ಚುನಾವಣೆಯನ್ನು ಸಂಪೂರ್ಣ ಶಾಂತಿ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ. ರೌಡಿಶೀಟರ್, ಕಮ್ಯುನಲ್ ಗೂಂಡಾ ಸೇರಿದಂತೆ ಪ್ರಕರಣಗಳಲ್ಲಿ ಗುರುತಿಸಲಾದ ರೌಡಿಶೀಟರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಕರ್ತವ್ಯಕ್ಕೆ ವಿವಿಧ ಹಂತದಲ್ಲಿನ ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 2200 ಸಿಬ್ಬಂದಿಗಳ ಅವಶ್ಯಕತೆಯಿದ್ದು, ಸದ್ಯ ಜಿಲ್ಲೆಯಲ್ಲಿ 715 ಜನ ಸಿಬ್ಬಂದಿಗಳಿದ್ದಾರೆ. ಉಳಿದ ಸಿಬ್ಬಂದಿಗಳನ್ನು ಹೊರಗಡೆಯಿಂದ ಕರೆಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.












Click it and Unblock the Notifications