ಬಂಗಾಳದಲ್ಲಿ ಮೂವರು ಸಂಸದರನ್ನು ವಿಧಾನಸಭಾ ಕಣಕ್ಕಿಳಿಸಿದ ಬಿಜೆಪಿ!
ಕೋಲ್ಕತ್ತಾ, ಮಾರ್ಚ್ 14: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪೈಕಿ ಮೂವರು ಹಾಲಿ ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸುವುದು ಅಚ್ಚರಿ ಮೂಡಿಸಿದೆ.
ದಕ್ಷಿಣ ಕೋಲ್ಕತ್ತಾದ ಟೋಲಿಗುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅರೂಪ್ ಬಿಸ್ವಾಸ್ ವಿರುದ್ಧ ಹಾಲಿ ಕೇಂದ್ರ ಸಚಿವ ಬಬುುಲ್ ಸುಪ್ರಿಯೋ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಹೂಗ್ಲಿ ಜಿಲ್ಲೆಯ ತಾರಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಸ್ವಪನ್ ದಾಸ್ ಗುಪ್ತಾರನ್ನು ಬಿಜೆಪಿ ಕಣಕ್ಕಿಳಿಸಿದೆ. ತೃಣಮೂಲ ಕಾಂಗ್ರೆಸ್ಸಿನ ಮಾಜಿ ಧನೇಕಾಲಿ ಬ್ಲಾಕ್ ಅಧ್ಯಕ್ಷ ರಾಮೆಂಡು ಸಿಂಘಾ ರಾಯ್ ವಿರುದ್ಧ ಸ್ವಪನ್ ದಾಸ್ ಗುಪ್ತಾ ಸ್ಪರ್ಧೆಗೆ ಇಳಿದಿದ್ದಾರೆ.

ಸಂಸದರಿಗೆ ವಿಧಾನಸಭಾ ಕ್ಷೇತ್ರದ ಟಿಕೆಟ್:
ಹೂಗ್ಲಿ ಲೋಕಸಭಾ ಕ್ಷೇತ್ರದ ಸಂಸದ ಲಾಕೆಟ್ ಚಟರ್ಜಿ ಅವರು ಅದೇ ಜಿಲ್ಲೆಯ ಚುಂಚುರಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಘೋಷಿಸಿದೆ. ಲಾಕೆಟ್ ಚಟರ್ಜಿ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಅಸಿತ್ ಮಜುಂದಾರ್ ಅಖಾಡಕ್ಕೆ ಇಳಿದಿದ್ದಾರೆ. ಕೂಚ್ ಬೆಹರ್ ಕ್ಷೇತ್ರದ ಸಂಸದರಾಗಿರುವ ನಿಶಿತ್ ಪ್ರಮಾಣಿಕ್ ಅವರನ್ನು ಜಿಲ್ಲೆಯ ದಿನ್ಹತಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಘೋಷಿಸಿದೆ. ಈ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಉದಯನ್ ಗುಹಾ ಸ್ಪರ್ಧಿಸಿದ್ದಾರೆ.
BJP releases a list of 27 candidates for 3rd phase and a list of 36 candidates for 4th phase of elections in West Bengal pic.twitter.com/jDkI2bcAJ6
— ANI (@ANI) March 14, 2021
ಬಂಗಾಳದಲ್ಲಿ ಬಿಜೆಪಿಗೆ ಬಲವಿಲ್ಲ ಎಂದ ಟಿಎಂಸಿ:
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಪ್ರಬಲ ನಾಯಕರನ್ನು ಹೊಂದಿಲ್ಲ ಎನ್ನುವುದು ಮೂರನೇ ಹಂತದ ಚುನಾವಣೆಗೆ ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟಿಎಂಸಿ ಮುಖಂಡ ಪಾರ್ಥಾ ಚಟರ್ಜಿ ಹೇಳಿದ್ದಾರೆ. ಬಿಜೆಪಿಯು ಹಾಲಿ ಕೇಂದ್ರ ಸಚಿವರು ಮತ್ತು ಸಂಸದರಿಗೆ ಏಕೆ ಟಿಕೆಟ್ ನೀಡುತ್ತಿದೆ. ಅಂದರೆ ರಾಜ್ಯದಲ್ಲಿ ಅವರು ಉತ್ತಮ ನಾಯಕರನ್ನು ಹೊಂದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
8 ಹಂತಗಳಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಮತದಾನ
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ.2ರಂದು ಹೊರ ಬೀಳಲಿದೆ.











Click it and Unblock the Notifications