ದೇಶದ ಹೆಸರು ಬದಲಿಸಿ ಬಿಜೆಪಿ ಮೋದಿ ದೇಶ ಮಾಡೀತು ಹುಷಾರ್: ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮಾರ್ಚ್ 09: ಪ್ರಧಾನಿ ನರೇಂದ್ರ ಮೋದಿಯನ್ನು ಹೀಗೆ ಬಿಟ್ಟರೆ ದೇಶದ ಹೆಸರನ್ನು ಬದಲಿಸಿ ಮೋದಿಮಯ ಮಾಡುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮನ್ನು ತಾವೇ ಜಪಿಸಿಕೊಳ್ಳಲು ಆರಂಭಿಸಿದ್ದಾರೆ, ಪರಿಣಾಮವಾಗಿ ಕಾಲೇಜು, ಮೈದಾನಕ್ಕೆ ಮೋದಿ ಹೆಸರು ಇರಿಸಿಕೊಳ್ಳುತ್ತಿದ್ದಾರೆ.
ಈಗ ಕೊರೊನಾ ಲಸಿಕೆಗೂ ಮೋದಿ ವ್ಯಾಕ್ಸಿನ್ ಎಂದು ನಾಮಕರಣ ಮಾಡಿ ಚಿತ್ರ ಹಾಕಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಹೆಸರನ್ನೂ ಬದಲಿಸಿ, ಅಲ್ಲಿ ತನ್ನ ಹೆಸರನ್ನೇ ದೇಶಕ್ಕಿಟ್ಟರೂ ಆಶ್ಚರ್ಯವೇನಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಟೀಕೆಗಳಿಗೆ ಮಮತಾ ಉತ್ತರ
ಪ್ರಧಾನಿ ಮೋದಿ ಟೀಕೆಗಳಿಗೆ ಉತ್ತರಿಸಿರುವ ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರ ಉಚಿತವಾಗಿ ಬಡವರಿಗೆ ಪಡಿತರವನ್ನು ನೀಡುತ್ತಿದೆ ಆದರೆ ಕೇಂದ್ರ ಸರ್ಕಾರ ಒಂದು ಸಿಲಿಂಡರ್‌ಗೆ 900 ರೂ.ಗೆ ದರ ಸೇರಿಸಿದೆ. ಬಡವರ ಬಗ್ಗೆ ಕಾಳಜಿ ಇದ್ದರೆ ಉಚಿತವಾಗಿ ಸಿಲಿಂಡರ್ ನೀಡಲಿ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿಲ್ಲ
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಮಹಿಳೆಯರಿಗೆ ಸುರಕ್ಷೆಯಿಲ್ಲ ಎಂಬ ಟೀಕೆಗೆ ಉತ್ತರಿಸಿದ ಮಮತಾ, ಪ್ರಧಾನಿ ಹಾಗೂ ಗೃಹಸಚಿವರ ತವರು ರಾಜ್ಯ ಗುಜರಾತ್ ಹಾಗೂ ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶದಲ್ಲಿ ಪ್ರತಿದಿನ ನೂರಾರು ಅತ್ಯಾಚಾರ, ಕೊಲೆಗಳಾಗುತ್ತಿವೆ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮಹಿಳೆಯರ ರಕ್ಷಣೆಯಲ್ಲಿ ಸಾಕಷ್ಟು ಮುಂದಿದೆ. ಸರ್ಕಾರಿ ದಾಖಲೆಗಳೇ ಈ ಮಾಹಿತಿಯನ್ನು ನೀಡುತ್ತಿವೆ. ರಾಜಕೀಯ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡುತ್ತಿದ್ದಾರೆ.

ಮೋದಿ ಜತೆ ಮುಖಾಮುಖಿ ಚರ್ಚೆಗೆ ನಾನು ಸಿದ್ಧ
ಪಶ್ಚಿಮ ಬಂಗಾಳ ಅಭಿವೃದ್ಧಿ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಜತೆ ಮುಖಾಮುಖಿ ಚರ್ಚೆಗೆ ನಾನು ಸಿದ್ಧನಿದ್ದೇನೆ. ಸ್ಥಳ ಹಾಗೂ ಸಮಯವನ್ನು ಪ್ರಧಾನಿ ಮೋದಿ ನಿರ್ಧರಿಸಲಿ, ನಾನು ಅಲ್ಲಿಗೆ ಹಾಜರಾಗುತ್ತೇನೆ ಎಂದರು.

ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲೂ ಮೋದಿ ಚಿತ್ರ
ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿ ಭಾವಚಿತ್ರವಿರುವುದೇಕೆ, ಎಲ್ಲದರಲ್ಲೂ ತಮ್ಮ ಹೆಸರನ್ನು ನಮೂದಿಸಿ, ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಹಾಗೆಯೇ ಬಿಟ್ಟರೆ ಇಡೀ ದೇಶದ ಹೆಸರನ್ನೇ ಮೋದಿ ಎಂದು ಮಾಡಿಬಿಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.












Click it and Unblock the Notifications