ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ: ಗರ್ಭಿಣಿಯಂತೆ ಬಂದು ಆತ್ಮಾಹುತಿ ದಾಳಿ!
ಕೋಲ್ಕತ್ತಾ, ಮೇ 11: ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಕೆಲ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಮೇ 18 ರಂದು ಬುದ್ಧ ಪೂರ್ಣಿಮೆ ಆಚರಣೆಯ ಸಮಯದಲ್ಲಿ ಮಹಿಳೆಯೊಬ್ಬರು ಗರ್ಭಿಣಿಯಂತೆ ವೇಷ ಧರಿಸಿ ಬಂದು ಹಿಂದು ಅಥವಾ ಬೌದ್ಧ ಮಂದಿರಗಳನ್ನು ಹೊಕ್ಕಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದ್ದು, ಈ ಕುರಿತು ಎಚ್ಚರಿಕೆ ವಹಿಸುವಂತೆ ಅದು ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ಸ್ ಮತ್ತು ಜಾಮತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆಗಳು ಈ ದಾಳಿ ನಡೆಸಲು ಸಂಚು ರೂಪಿಸಿವೆ ಎನ್ನಲಾಗಿದೆ.

ಮೇ 19 ರಂದು ಪಶ್ಚಿಮ ಬಂಗಾಳದಲ್ಲಿ ಕೊನೆಯೇ ಹಂತದ ಮತದಾನವೂ ಇದ್ದು, ಮೇ 18 ರಂದು ಬುದ್ಧ ಪೂರ್ಣಿಮೆ ಆಚರಣೆಗೊಳ್ಳಲಿದೆ. ಈ ಸಮಯದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅವರನ್ನು ಗುರಿಯಾಗಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಗರ್ಭಿಣಿ ವೇಶದಲ್ಲಿ ಬಂದರೆ ಹೆಚ್ಚಿನ ತಪಾಸಣೆ ನಡೆಸುವುದಿಲ್ಲ ಎಂಬ ಕಾರಣಕ್ಕೆ ಈ ಯೋಜನೆ ರೂಪಿಸಿರುವ ಸಾಧ್ಯತೆ ಇದೆ.
ಏಪ್ರಿಲ್ 21 ರಂದು ಶ್ರೀಲಂಕಾದಲ್ಲಿ ಈಸ್ಟರ್ ಆಚರಣೆ ವೇಳೆ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಈ ದಾಳಿಯನ್ನು ಚರ್ಚ್ ಮತ್ತು ಹೊಟೇಲ್ ಗಳನ್ನು ಗುರಿಯಾಗಿಸಿಕೊಂಡು ಮಾಡಲಾಗಿತ್ತು.












Click it and Unblock the Notifications