ಹೌದು ಬಿಜೆಪಿ ನಾಯಕನಿಗೆ ಕರೆ ಮಾಡಿದ್ದೆ, ತಪ್ಪೇನಿದೆ: ಮಮತಾ ಬ್ಯಾನರ್ಜಿ
ನಂದಿಗ್ರಾಮ, ಮಾರ್ಚ್ 31: ಬಿಜೆಪಿ ನಾಯಕರೊಬ್ಬರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಒಂದು ವಿವಾದ ಸೃಷ್ಟಿಸಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಹೌದು ಬಿಜೆಪಿ ನಾಯಕನಿಗೆ ಕರೆ ಮಾಡಿದ್ದೆ, ಆದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 2 ನೇ ಹಂತದ ಮತದಾನಕ್ಕೆ ಪ್ರಚಾರ ಮುಕ್ತಾಯಗೊಳ್ಳುತ್ತಿದ್ದು, ಮಮತಾ ಬ್ಯಾನರ್ಜಿ ಬಿಜೆಪಿ ನಾಯಕನಿಗೆ ಕರೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ತಮ್ಮೊಂದಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಪ್ರೋಲೋಯ್ ಪಾಲ್ ಮಾತನಾಡಬೇಕೆಂಬ ಪ್ರತಿಕ್ರಿಯೆ ಬಂದಿತ್ತು. ಆದ್ದರಿಂದ ಮಾತನಾಡಿದ್ದೇನೆ. ನಾನು ಸ್ಪರ್ಧಿಸುತ್ತಿರುವ ಕ್ಷೇತ್ರ ನಂದಿಗ್ರಾಮದ ಮತದಾರನೊಂದಿಗೆ ಕರೆ ಮಾಡಿ ಮಾತನಾಡಿದರೆ ಅದರಲ್ಲಿ ತಪ್ಪೇನಿದೆ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕನಿಗೆ ಕರೆ ಮಾಡಿದ್ದು ನಿಜ, ಆರೋಗ್ಯ ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಹೇಳಿದೆ. ಇದರಲ್ಲಿ ಅಪರಾಧ ಏನು? ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಯಾವುದೇ ಮತದಾರರಿಗೆ ಕರೆ ಮಾಡಬಹುದಾಗಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಈ ಕರೆಯ ಆಡಿಯೋವನ್ನು ವೈರಲ್ ಮಾಡುತ್ತಿರುವವರದ್ದು ತಪ್ಪಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಬ್ಯಾನರ್ಜಿ ತನ್ನಗೆ ಕರೆ ಮಾಡಿ, ಚುನಾವಣೆಯಲ್ಲಿ ನೆರವಿಗಾಗಿ ಯಾಚಿಸಿದರು ಎಂದು ನಂದಿಗ್ರಾಮದ ಬಿಜೆಪಿ ಜಿಲ್ಲಾ ಅಧ್ಯಕ್ಷ ಪ್ರೋಲೋಯ್ ಪಾಲ್ ಶನಿವಾರ ಹೇಳಿಕೆ ನೀಡಿದ್ದರು.
ತದನಂತರ ಪಾಲ್ ಮತ್ತು ಬ್ಯಾನರ್ಜಿ ನಡುವಣ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಈ ಆಡಿಯೋ ವಿಚಾರವಾಗಿ ಮಮತಾ ಬ್ಯಾನರ್ಜಿ ಈಗ ಮಾತನಾಡಿದ್ದು, ತಾವು ಬಿಜೆಪಿ ನಾಯಕನಿಗೆ ಕರೆ ಮಾಡಿದ್ದು ನಿಜ ಎಂದು ಹೇಳಿದ್ದಾರೆ.












Click it and Unblock the Notifications