ಕೋಲಾರ; ಕೋವಿಡ್ ಲಸಿಕೆ ಹಂಚಿಕೆಗೆ ಹೇಗಿದೆ ಸಿದ್ಧತೆ?
ಕೋಲಾರ, ಜನವರಿ 04: " ಕೋಲಾರ ಹಾಗೂ ರಾಮನಗರ ಜಿಲ್ಲೆಗಳು ಸೇರಿ ಒಟ್ಟು 35 ಸಾವಿರ ಕೋವಿಡ್ ಲಸಿಕೆ ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ ಜಿಲ್ಲೆಗೆ ಲಸಿಕೆ ಬರಲಿದೆ. ಈಗಾಗಲೇ 3,700 ಜನರನ್ನು ಲಸಿಕೆ ನೀಡಲು ಗುರುತಿಸಿದ್ದೇವೆ" ಎಂದು ಕೋಲಾರ ಸಂಸದ ಮುನಿಸ್ವಾಮಿ ಹೇಳಿದರು.
ಕೋಲಾರದಲ್ಲಿ ಕೋವಿಡ್ ಲಸಿಕೆ ಹಂಚಿಕೆಗೆ ತಯಾರಿ ನಡೆಯುತ್ತಿದೆ. ಸೋಮವಾರ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಸಂಸದ ಎಸ್. ಮುನಿಸ್ವಾಮಿ ಸಭೆ ನಡೆಸಿದರು. ಸಭೆಯಲ್ಲಿ ಆರೋಗ್ಯ ಸಹಾಯಕಿಯರಿಗೆ ಆತ್ಮಸ್ಥೈರ್ಯ ತುಂಬಿದರು.
"ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ದೇಸಿ ವ್ಯಾಕ್ಸಿನ್ ಕಂಡು ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಬೇರೆ ದೇಶಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದೆ. ಕೋಲಾರ ಹಾಗೂ ರಾಮನಗರ ಸೇರಿ ಒಟ್ಟು 35 ಸಾವಿರ ಲಸಿಕೆ ಹಂಚಿಕೆಗೆ ತೀರ್ಮಾನವಾಗಿದೆ" ಎಂದು ಸಂಸದರು ತಿಳಿಸಿದರು.

"ಎರಡು ಡೋಸ್‌ಗಳನ್ನು ನಾಲ್ಕು ವಾರಗಳ ಅಂತರದಲ್ಲಿ ನೀಡಲಾಗುತ್ತದೆ. ಈಗಾಗಲೇ ನಾವು ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಒಂದೇ ಒಂದು ಕೋವಿಡ್ ಕೇಸ್ ಇಲ್ಲದಹಾಗೆ ವ್ಯವಸ್ಥೆ ಮಾಡಿಕೊಳ್ಳುತಿದ್ದೇವೆ. ವೈದ್ಯರು, ನರ್ಸ್, ಆಂಬ್ಯುಲೆನ್ಸ್, ವ್ಯಾಕ್ಸಿನ್ ಕ್ಯಾರಿಯರ್‌ಗಳನ್ನು ಸಿದ್ಧಮಾಡಿಕೊಂಡಿದ್ದೇವೆ" ಎಂದು ಸಂಸದರು ವಿವರಣೆ ನೀಡಿದರು.
ಭಾನುವಾರದ ವರದಿಯಂತೆ ಕೋಲಾರದಲ್ಲಿ 4 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9735. ಸಕ್ರಿಯ ಪ್ರಕರಣಗಳ ಸಂಖ್ಯೆ 108.












Click it and Unblock the Notifications