ಕೊರೊನಾ ಎಫೆಕ್ಟ್: ಕೋಲಾರದಲ್ಲಿ ಕೋಳಿಗಳ ಮಾರಣಹೋಮ
ಕೋಲಾರ, ಮಾರ್ಚ್ 10: ಕೊರೊನಾ ವೈರಸ್ ವಿಶ್ವವ್ಯಾಪಿ ತನ್ನ ಅಟ್ಟಹಾಸ ಮುಂದುವರೆಸುತ್ತಿದ್ದು, ಕೊರೊನಾ ಹೆಸರು ಕೇಳಿದರೆ ಸಾಕು ನಿದ್ದೆಯಲ್ಲೂ ಜನರು ಬೆಚ್ಚಿ ಬೀಳುವ ಪರಿಸ್ಥಿತಿ ನಿಮಾ೯ಣವಾಗಿದೆ. ಅದರಲ್ಲೂ ಕುಕ್ಕುಟೋದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ.
ಕೊರೊನಾ ವೈರಸ್ ಅಂದ್ರೆ ಸಾಕು ಎಲ್ಲರ ಕಿವಿಯೂ ಒಂದು ಕ್ಷಣ ನೆಟ್ಟಗಾಗುತ್ತೆ. ಚಿಕನ್, ಮಟನ್ ಪ್ರಿಯರು ಸಹ ನಾನ್ ವೆಜ್ ಸಹವಾಸ ಬೇಡವೇ ಬೇಡ ಅಂತ ಕಿಲೋಮೀಟರ್ ಗಟ್ಟಲೇ ದೂರ ಓಡಿ ಹೋಗುತ್ತಿದ್ದಾರೆ.
ಇದೀಗ ಕೊರೊನಾ ಎಫೆಕ್ಟ್ ಚಿನ್ನದ ನಾಡು ಕೋಲಾರಕ್ಕೂ ಹೊರತಾಗಿಲ್ಲ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿಕನ್ ತಿಂದರೆ ಕೊರೊನಾ ಬರುತ್ತೆ ಎಂಬ ವದಂತಿ ಹಬ್ಬಿದ್ದೇ ತಡ ಕುಕ್ಕುಟೋದ್ಯಮ ನೆಲಕಚ್ಚಿದೆ. ಎರಡು ತಿಂಗಳ ಹಿಂದಷ್ಟೇ 180 ರುಪಾಯಿಗೆ ಮಾರಾಟವಾಗುತ್ತಿದ್ದ ಕೆ.ಜಿ ಚಿಕನ್, ಈಗ ಕೇವಲ 70-80 ರುಪಾಯಿಗೆ ಕುಸಿದಿದೆ.

ಎಷ್ಟೋ ಜನ ಚಿಕನ್ ತಿನ್ನೋದನ್ನೇ ಬಿಟ್ಟಿದ್ದರ ಪರಿಣಾಮ, ಕೋಲಾರದಲ್ಲೂ ಚಿಕನ್, ಮಟನ್ ವ್ಯಾಪಾರ ಕುಸಿದು ಬಿದ್ದಿದೆ. ಅದನ್ನೇ ನಂಬಿರುವ ಜನರಂತೂ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ.
ಇದರ ನಡುವೆಯೇ ಕೋಳಿ ಮಾಂಸ ಫಾರಂನವರು, ಸ್ವತಃ ಕಂಪನಿ ಮಾಲೀಕರೇ ಬರೋಬ್ಬರಿ ೯೫೦೦ ಕೋಳಿಗಳನ್ನು ಮಾರಣ ಹೋಮ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ. ಇನ್ನು ಚಿಕನ್ ಅಂಗಡಿಯವರ ಪಾಡು, ಹಾಕಿದ ಬಂಡವಾಳ ಬರದಂತಾಗಿದೆ. ಸ್ವತಃ ವೈದ್ಯರೇ ಇದೊಂದು ಸುಳ್ಳು ವದಂತಿ ಅಂತ ಹೇಳಿದರೂ ಜನರು ಮಾತ್ರ ಚಿಕನ್ ನಿಂದ ದೂರ ಉಳಿದಿದ್ದಾರೆ.

ಇದು ಕುಕ್ಕುಟೋದ್ಯಮದ ಕಥೆಯಾದರೆ, ಏಷಿಯಾದಲ್ಲೇ ೨ ನೇ ಅತೀ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಇರುವ ಕೋಲಾರಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ. ದೇಶ ವಿದೇಶಗಳಿಗೆ ತರಕಾರಿಗಳನ್ನು ರಫ್ತು ಮಾಡುತ್ತಿರೋ ಈ ಮಾರುಕಟ್ಟೆಯಲ್ಲಿ ಕೊರೊನೊ ಭೀತಿಯಿಂದ ವ್ಯಾಪಾರವೇ ಇಳಿಮುಖವಾಗಿದೆ.
ಪ್ರತಿದಿನಕ್ಕೆ ೩ ಸಾವಿರಕ್ಕೂ ಅಧಿಕ ಜನರು ಹೊರ ರಾಜ್ಯದಿಂದ ಬರುವ ವ್ಯಾಪಾರಸ್ಥರು ಹಾಗೂ ವಾಹನಗಳ ಸಂಖ್ಯೆ ಇಳಿಮುಖವಾಗಿ ಬಿಕೋ ಎನ್ನುತ್ತಿದೆ. ಒಂದೇ ದಿನದಲ್ಲಿ ಆಗುವ ವ್ಯಾಪಾರ ಮೂರು ದಿನಗಳಾದರೂ ಆಗುತ್ತಿಲ್ಲ. ಆದರೆ ಇಷ್ಟಿದ್ದರೂ ಜಿಲ್ಲೆಯ ಆರೋಗ್ಯ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಭೇಟಿ ಕೊಡದೇ ಇರುವುದು ಮಂಡಿ ಮಾಲೀಕರು ಹಾಗೂ ಹಮಾಲರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

ಒಟ್ಟಿನಲ್ಲಿ ಈಗ ಜನಕ್ಕಂತೂ ಕೊರೊನಾ ಅಂದರೆ ಸಾವು ಎನ್ನುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಾಗೃತಿ ಮೂಡಿಸುವ ಮೂಲಕ ವ್ಯಾಪಾರಸ್ಥರಿಗೆ ಧೈಯ೯ ತುಂಬಬೇಕಾಗಿದೆ.












Click it and Unblock the Notifications