ಅಕಾಲಿಕ ಮಳೆಗೆ ಕೈ ಸುಟ್ಟುಕ್ಕೊಂಡ ಅಡಿಕೆ ಬೆಳೆಗಾರರು: ಹವಾಮಾನ ವೈಪರೀತ್ಯ ಎದುರಾಯ್ತು ಮತ್ತೊಂದು ಸಂಕಷ್ಟ
ಕಾರವಾರ, ಜನವರಿ 13: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಅಡಿಕೆ ಕೊಯ್ಲು ಭರದಿಂದ ನಡೆಯುವ ವೇಳೆಗೆ ಮೋಡದ ವಾತಾವರಣ ಹಾಗೂ ಮಳೆ ಸುರಿದಿರುವುದು ಇದೀಗ ಅಡಕೆ ಬೆಳೆ ಮುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಘಟ್ಟದ ಮೇಲ್ಬಾಗದ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ನಡೆಸಲಾಗುತ್ತಿದೆ. ಕಳೆದೊಂದು ತಿಂಗಳಿಂದ ಕೊಯ್ಲು ನಡೆಸುತ್ತಿದ್ದರು ಕೊನೆಗೌಡರು, ಕೆಲಸಗಾರರು ಸಮಯಕ್ಕೆ ಸರಿಯಾಗಿ ಸಿಗದ ಕಾರಣಕ್ಕೆ ಹಿಂದೆ ಬಿದ್ದಿದ್ದ ಅಡಿಕೆ ಬೆಳೆಗಾರರು ಇದೀಗ ಜಿಲ್ಲೆಯ ವಿವಿದೆಡೆ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆಗೆ ಮತ್ತಷ್ಟು ಹೈರಾಣಾಗುವಂತಾಗಿದೆ.

ಹವಾಮಾನ ವೈಪರಿತ್ಯದಿಂದಾಗಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಕವಿದು, ಮಳೆಯಾಗಿರುವುದು ಜೋರು ಅಡಿಕೆ ಕೋಯ್ಲು ಮಾಡುತ್ತಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸುಲಿದ ಅಡಿಕೆ ಒಣಗಿಸಲಾಗದೆ ಹಾಗೆಯೇ ಅಡಿಕೆಯನ್ನು ಹುಬ್ಬೆಹಾಕುವಂತಾಗಿದೆ. ಅಲ್ಲದೆ ಕೆಲವೆಡೆ ಹುಬ್ಬೆ ಹಾಕಿದ ಅಡಿಕೆಗಳು ಸರಿಯಾಗಿ ಬಿಸಿಲು ಬೀಳದ ಕಾರಣ ಮುಗ್ಗುತ್ತಿದ್ದು, ಇದೀಗ ರೈತರು ಆತಂಕ ಎದುರಿಸುವಂತಾಗಿದೆ.
ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಇನ್ನು ಕೂಡ ಸಾಕಷ್ಟು ಬೆಳೆಗಾರರು ಕೊನೆ ಕೊಯ್ಲಿಗಾಗಿ ಕಾಯ್ದು ಕುಳಿತಿದ್ದಾರೆ. ಆದರೆ ಕಣ್ಣಾಮುಚ್ಚಾಲೆಯಾಡುತ್ತಿರುವ ಮಳೆಯಿಂದಾಗಿ ಆಕಾಶ ನೋಡುವ ಪರಿಸ್ಥಿತಿ ಇದೀಗ ರೈತರಿಗೆ ಎದುರಾಗಿದೆ. ಈಗಾಗಲೇ ಕೋಯ್ಲು ಮಾಡಿ ಕೈ ಸುಟ್ಟುಕ್ಕೊಂಡಿರುವ ರೈತರು ಮತ್ತೆ ಕೋಯ್ಲು ಮಾಡುವುದಕ್ಕೂ ಹೆದರುವ ಪರಿಸ್ಥಿತಿ ಇದೆ. ಆದರೆ ಗುರುವಾರ ಜಿಲ್ಲೆಯಲ್ಲಿ ಸ್ವಲ್ಪ ಬಿಸಿಲಿನ ವಾತಾವರಣ ಕಂಡುಬಂದಿರುವುದು ಕೊನೆ ಕೊಯ್ಲಿಗೆ ಆಶಾವಾದ ಮೂಡಿದಂತಾಗಿದೆ.
ಇನ್ನು ಶಿರಸಿ, ಸಿದ್ದಾಪುರ ಭಾಗದ ಕೆಲವೆಡೆ ಇನ್ನು ಕೂಡ ಭತ್ತದ ಬೆಳೆ ಜೋಪಾನವಾಗಿಲ್ಲ. ಕಣಗಳಲ್ಲಿ ಭತ್ತದ ಕುತ್ತರಿಗಳನ್ನು ರಾಶಿ ಹಾಕಿಟ್ಟುಕ್ಕೊಂಡಿರುವ ರೈತರು ಭತ್ತ ಬೇರ್ಪಡಿಸುವುದಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಮಳೆ ಇನ್ನು ಕೂಡ ಕಣ್ಣಾಮುಚ್ಚಾಲೆ ಆಡುತ್ತಿರುವುದು ರೈತರ ಆತಂಕ ಹೆಚ್ಚಿಸುವಂತೆ ಮಾಡಿದೆ. ಹುಲ್ಲು ಹಾಗೂ ಭತ್ತ ಜೋಪಾನ ಮಾಡುವುದೇ ಇದೀಗ ರೈತರಿಗೆ ಸವಾಲಾಗಿದೆ.

ಅಡಿಕೆ ಕೊಯ್ಲಿಗೆ ಸಿಗದ ಕೆಲಸಗಾರರು
ಇನ್ನು ಕೊನೆ ಕೊಯ್ಲಿಗೆ ಬೇಕಾದ ಕೆಲಸಗಾರರು ಹಾಗೂ ಕೊನೆ ಗೌಡರು ಸಿಗದ ಕಾರಣ ಈ ಬಾರಿ ಕೊನೆ ಕೊಯ್ಲ ತಡವಾಗುತ್ತಿದೆ. ಅಲ್ಲದೆ ಅಡಿಕೆ ಬೆಳೆಗಾರರು ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದರಿಂದ ಕೊನೆಗೌಡರಿಗೆ ಸರಿಯಾದ ಸಮಯಕ್ಕೆ ಕುಯ್ದು ಮುಗಿಸಿದಕ್ಕೂ ಕಷ್ಟವಾಗುತ್ತಿದೆ. ಆದರೆ ಇದೀಗ ಮಳೆ ಸುರಿಯುತ್ತಿರುವುದು ಕೊನೆ ಗೌಡರಿಗೆ ಒತ್ತಡ ಹೆಚ್ಚುತ್ತಿದೆ. ಈ ಕಾರಣದಿಂದ ಈ ಬಾರಿ ಕೊನೆ ಕೊಯ್ಲು ತಡವಾಗಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕೊನೆಗೌಡ ಮಂಜುನಾಥ ಗೌಡ ಹೇಳಿದ್ದಾರೆ.
ಬಹುತೇಕ ತೋಟಗಳಲ್ಲಿ ಅಡಕೆ ಹಣ್ಣಾಗಿದ್ದು, ಮಂಗಗಳ ಕಾಟ ಕೂಡ ಜೋರಾಗಿದೆ. ಕೊನೆಯನ್ನು ಹಿರಿದು ತಿನ್ನುವ ಮಂಗಗಳು ಅಡಿಕೆಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ರೈತರು ಕೊನೆ ಕೊಯ್ಲಿಗೆ ಒತ್ತಡ ಅನುಭವಿಸುವಂತಾಗಿದೆ. ಇದೀಗ ಮಳೆ ಬೀಳುತ್ತಿರುವುದರಿಂದ ಅಡಿಕೆ ಒಣಗಿಸಲು ಸಾಧ್ಯವಾಗದೆ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಅಡಿಕೆ ಬೆಳೆಗಾರರಾದ ಗೋಪಾಲ ಗೌಡ ತಮ್ಮ ಕಷ್ಟ ತೋಡಿಕೊಂಡಿದ್ದಾರೆ.












Click it and Unblock the Notifications