ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ತಮಿಳುನಾಡಿನ ಎರಡು ಬೋಟುಗಳು
ಕಾರವಾರ, ಮೇ 29 : ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟುಗಳು ಅರಬ್ಬಿ ಸಮುದ್ರದ 21 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೀಡಾಗಿದೆ.
ತಮಿಳುನಾಡು ಮೂಲದ 13 ಮೀನುಗಾರರು ಇರುವ ಏಂಜಲಿನಾ- 1 ಹಾಗೂ ಏಂಜಲಿನಾ- 2 ಎಂಬ ಎರಡು ಬೋಟುಗಳು ಮೀನುಗಾರಿಕೆ ನಡೆಸುತ್ತಿದ್ದವು. ಈ ವೇಳೆ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಂಭವ ಇದ್ದುದರಿಂದ ಅಲೆಗಳ ತೀವ್ರತೆ ಹೆಚ್ಚಾಗಿತ್ತು.
ಹೀಗಾಗಿ ಒಂದು ಬೋಟು ಸಮುದ್ರದಲ್ಲಿ ಮುಳುಗಡೆಯಾಗಿದೆ. ಇನ್ನೊಂದು ಬೋಟ್ ನ ಎಂಜಿನ್ ಹಾಳಾಗಿದ್ದು, 21 ನಾಟಿಕಲ್ ಮೈಲು ದೂರದಲ್ಲೆ ಸಮುದ್ರದಲ್ಲಿ ನಿಂತಿದೆ.

ಒಟ್ಟು 13 ಮೀನುಗಾರರಲ್ಲಿ 11 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಕೊಪ್ಪದ್ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 6.30ರ ಸುಮಾರಿಗೆ ಬೋಟುಗಳು ಅಪಾಯಕ್ಕೀಡಾದ ಕುರಿತು ಮಾಹಿತಿ ಸಿಕ್ಕಿತು. ಕೂಡಲೇ ತಟ ರಕ್ಷಕ ದಳಕ್ಕೆ ತಿಳಿಸಿ, ಅವರು ಪೆಟ್ರೋಲಿಂಗ್ ಬೋಟ್ ನ ಮೂಲಕ ಸ್ಥಳಕ್ಕೆ ತೆರಳಿ ಮುಳುಗಡೆಯಾಗಿದ್ದ ಬೋಟ್ ನಲ್ಲಿನ 4 ಮಂದಿಯನ್ನು ರಕ್ಷಿಸಿದ್ದಾರೆ.
ಆದರೆ, ಇಬ್ಬರು ನಾಪತ್ತೆಯಾಗಿದ್ದಾರೆ. ಆ ಇಬ್ಬರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಂಗಳೂರು ಹಾಗೂ ಗೋವಾದಿಂದ ತಟ ರಕ್ಷಕ ದಳವನ್ನು ಕರೆಸಿದ್ದೇವೆ. ಅವರು ಕೂಡ ಈ ರಕ್ಷಣಾ ಕಾರ್ಯದಲ್ಲಿ ಸಹಕರಿಸಲಿದ್ದಾರೆ. ಸುರಕ್ಷಿತವಾಗಿ ಮೀನುಗಾರರನ್ನು ದಡಕ್ಕೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.












Click it and Unblock the Notifications