ಸತೀಶ್ ಸೈಲ್ ವಿರುದ್ಧ ರೂಪಾಲಿ ನಾಯ್ಕ ಬೆಂಬಲಿಗರ ಪ್ರತಿಭಟನೆ: ರಾಜ್ಯಪಾಲರಿಗೆ ದೂರು
ರೂಪಾಲಿ ನಾಯ್ಕ ಹಾಗೂ ಅವರ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಶಾಸಕಿ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.
ಕಾರವಾರ, ಮಾಚ್ 4: ಶಾಸಕಿ ರೂಪಾಲಿ ನಾಯ್ಕ ಅವರನ್ನು ಮಾಜಿ ಶಾಸಕ ಸತೀಶ್ ಸೈಲ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಜಿಲ್ಲಾಧಿಕಾರಿ ಕಚೇರಿಯ ಹೊರಕ್ಕೆ ಕಳುಹಿಸಿದ ಘಟನೆ ನಡೆದಿದೆ.
ಮಾಜಿ ಶಾಸಕ ಸತೀಶ್ ಸೈಲ್ ಅವರು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ, ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಮಹಿಳಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸೈಲ್ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆಗಳನ್ನು ಕೂಗುವಂತಿಲ್ಲ ಎಂದು ಸೂಚಿಸಿದರೂ ಘೋಷಣೆಗಳನ್ನು ಮುಂದುವರಿಸಿದ್ದರು. ಕೊನೆಗೆ ಪೊಲೀಸರು ಘೋಷಣೆಗಳನ್ನು ಕೂಗುವುದಿದ್ದರೆ ಡಿಸಿ ಕಚೇರಿಯ ಹೊರಕ್ಕೆ ಹೋಗಿ ಎಂದು ಗೇಟಿನ ಹೊರಕ್ಕೆ ಕಳುಹಿಸಿದ್ದಾರೆ. ಬಳಿಕ ಬಿಜೆಪಿ ಮಹಿಳಾ ಕಾರ್ಯಕರ್ತರು ಗೇಟಿನ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಪಾಲರಿಗೆ ದೂರು
ಇನ್ನು ಹಾಲಿ ಶಾಸಕಿ ಹಾಗೂ ಮಾಜಿ ಶಾಸಕರ ನಡುವೆ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು ರೂಪಾಲಿ ನಾಯ್ಕ ಹಾಗೂ ಅವರ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಶಾಸಕಿ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ. ಇವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಮಾಜಿ ಶಾಸಕ ಸತೀಶ್ ಸೈಲ್ ಅವರನ್ನು ಕುಡುಕ, ಕಳ್ಳ ಎಂದು ಕೂಡ ಘೋಷಣೆ ಕೂಗಿದ್ದಾರೆ.

ಏನಿದು ಪ್ರಕರಣ..?
ಕಾರವಾರ ತಾಲೂಕಿನ ಮಾಜಾಳಿ ಪಂಚಾಯಿತಿಯ ಪಿಡಿಓ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಅರುಣಾ ಎಂಬುವವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಹೊಸ ಪಿಡಿಓ ಅವರಿಗೆ ಕೊಂಕಣಿ ಬಾರದ ಹಿನ್ನಲೆಯಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಮಾಜಿ ಶಾಸಕ ಸತೀಸ್ ಸೈಲ್ ಜಿ.ಪಂ ತೆರಳಿ ಸಿಇಓ ಈಶ್ವರ ಕಾಂದೂ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಇದೇ ವೇಳೆ ಸಭೆಯೊಂದಕ್ಕೆ ಆಗಮಿಸಿದ್ದ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಿಇಓ ಕಚೇರಿಗೆ ತೆರಳಿದ್ದರು. ಸಿಇಓ ಶಾಸಕರನ್ನು ಆಹ್ವಾನಿಸಿ ಮೀಟಿಂಗ್ ಹಾಲ್‌ನಲ್ಲಿ ಇದೇ ಪಿಡಿಓ ವರ್ಗಾವಣೆ ಸಂಬಂಧ ಮಾತುಕತೆ ನಡೆಸುತ್ತಿದ್ದಾಗ ಮೊದಲು ಬಂದ ತಮ್ಮನ್ನು ಸಿಇಓ ಕಡೆಗಣಿಸಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದಾಗ ಮಾಜಿ ಹಾಗೂ ಹಾಲಿ ಶಾಸಕ ನಡುವೆ ವಾಗ್ವಾದ ನಡೆದು ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.












Click it and Unblock the Notifications