ಪ್ರೇಯಸಿ ಗಮನ ಸೆಳೆಯಲು ರಸ್ತೆ ಮೇಲೆ ಪ್ರೇಮ ಸಂದೇಶ!
ಕಾರವಾರ, ಜನವರಿ 19: ಪ್ರೇಯಸಿಯ ಮನವೊಲಿಸಲು ಫೇಸ್‍ಬುಕ್, ವಾಟ್ಸ್ಆಪ್, ಟ್ವಿಟ್ಟರ್ ಗಳಲ್ಲಿ ಪ್ರೇಮ ನಿವೇದನೆಯನ್ನ ಮಾಡುವುದು ಅಥವಾ ಪ್ರೇಮ ಪತ್ರ ಬರೆಯುವುದು ಮಾಮೂಲು. ಆದರೆ ಇಲ್ಲೊಬ್ಬ ಪ್ರೇಮಿ ಮುನಿಸಿಕೊಂಡಿರುವ ಪ್ರೇಯಸಿಯ ಮನವೊಲಿಸಲು ನಲ್ಲೆಯ ಕಾಲೇಜಿನ ಎದುರಿನ ರಸ್ತೆಯ ಮೇಲೆ ತನ್ನ ಪ್ರೇಮ ಸಂದೇಶ ಗೀಚಿದ್ದಾನೆ.
ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪ್ರತಿಷ್ಠಿತ ದಿವಾಕರ್ ಕಾಲೇಜಿನ ಎದುರು ಅದು ರಾಷ್ಟ್ರೀಯ ಹೆದ್ದಾರಿಯ ಮೇಲೆ ರಾತ್ರಿಯ ವೇಳೆ "ಸಾರಿ...ಪ್ಲೀಸ್ ಫರ್‍ಗಿವ್ ಮಿ....ಐ ವಿಲ್ ನೆವರ್ ರಿಪೀಟ್ ಮೈ ಮಿಸ್ಟೇಕ್ ಅಗೇನ್....ಯು ಆರ್ ಮೈ ಶಾನೊ" ಎಂದು ಬಣ್ಣದಿಂದ ಬರೆದಿದ್ದಾನೆ. ಆ ಮೂಲಕ ಕೋಪಿಸಿಕೊಂಡ ತನ್ನ ಪ್ರೇಯಸಿಗೆ ಕ್ಷಮಿಸುವಂತೆ ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದಾನೆ.
ಈ ಸಂದೇಶವನ್ನು ಬರೆದಿರುವುದು ಅದೇ ಕಾಲೇಜಿನ ವಿದ್ಯಾರ್ಥಿಯೋ ಅಥವಾ ಬೇರೆ ಕಾಲೇಜಿನಲ್ಲಿರುವ ಪ್ರೇಮಿಯೊ ಎಂದು ತಿಳಿದಿಲ್ಲ. ಆದರೆ ಪ್ರೇಯಸಿ ಮಾತ್ರ ಇಲ್ಲಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯಾಗಿದ್ದರಿಂದ ಅವಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಎದುರಿನ ರಸ್ತೆಯ ಮೇಲೆಯೇ ತನ್ನ ಪ್ರೇಮ ಸಂದೇಶ ಬರೆಯುವ ಮೂಲಕ ತನ್ನ ಪ್ರೇಯಸಿಯ ಜತೆಗೆ ಇದೀಗ ಎಲ್ಲರ ಗಮನವನ್ನೂ ಸೆಳೆದಿದ್ದಾನೆ.

ಯಾವುದೋ ಸಂದರ್ಭದಲ್ಲಿ ಪ್ರೇಮಿಗಳಿಬ್ಬರ ನಡುವೆ ಹುಟ್ಟಿಕೊಂಡಿದ್ದ ತಪ್ಪನ್ನು ಮನ್ನಿಸುವಂತೆ ರಸ್ತೆಯ ಮೇಲೆ ಎಲ್ಲರಿಗೂ ಗೋಚರವಾಗುವಂತೆ ತನ್ನ ಸಂದೇಶವನ್ನು ಬರೆದಿರುವುದು ಇದೀಗ ಕಾಲೇಜಿನ ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಮುಜುಗರಕ್ಕೊಳಗಾಗುವಂತೆ ಮಾಡಿದೆ. ಜತೆಗೆ ಕಾಲೇಜಿನ ಇತರ ವಿದ್ಯಾರ್ಥಿಗಳು ಈ ಸಂದೇಶವನ್ನು ಓದಿ, ಮುಖ ಮುಖ ನೋಡಿಕೊಳ್ಳುವಂತೆ ಮಾಡಿದೆ.
ಪ್ರೇಮ ಸಂದೇಶ ಬರೆದ ಪ್ರೇಮಿ ಯಾರು, ಆತನ ಪ್ರೇಯಸಿ ಯಾರು ಎಂಬುದು ತಿಳಿದುಬಂದಿಲ್ಲ, ಏನೇ ಆಗಲಿ ಆಕೆಯ ಮುನಿಸು ಸರಿ ಹೋಗಲಿ ಎಂಬುದೇ ಆಶಯ.












Click it and Unblock the Notifications