ಕಾರವಾರ: ದಶಕಗಳ ಕಾಲ ಪ್ರವಾಸಿಗರ ಕಣ್ಮನ ಸೆಳೆದಿದ್ದ ಸಾಗರ ಮತ್ಸ್ಯಾಲಯ ಈಗ ಕುಡುಕರ ಅಡ್ಡೆ
ಕಾರವಾರ, ಡಿಸೆಂಬರ್ 01: ಅದು ಪ್ರವಾಸಿಗರ ಪಾಲಿಗೆ ಸಮುದ್ರಾದಳದ ಚಿತ್ರ ವಿಚಿತ್ರ ಜಲಚರಗಳ ವಿಸ್ಮಯ ತೆರೆದಿಡುತ್ತಿದ್ದ ಪ್ರಮುಖ ಪ್ರವಾಸಿ ಕೇಂದ್ರ. ಆದರೆ ಇದೀಗ ಶಿಥಿಲಾವಸ್ಥೆ ತಲುಪಿ ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದು, ಫಿಶ್ ಅಕ್ವೇರಿಯಂಗಳನ್ನು ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ದಶಕಗಳ ಕಾಲ ಪ್ರವಾಸಿಗರ ಕಣ್ಮನ ಸೆಳೆದಿದ್ದ ಕೇಂದ್ರ ಇದೀಗ ಪಾಳು ಬಿದ್ದು ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.
ನಿರ್ವಹಣೆ ಇಲ್ಲದೆ ಶಿಥಿಲಗೊಂಡ ಕಾರಣಕ್ಕೆ ಕಳೆದ ಕೆಲ ವರ್ಷಗಳ ಹಿಂದೆ ಬಾಗಿಲು ಮುಚ್ಚಿದ್ದ ಸಾಗರ ಮತ್ಸ್ಯಾಲಯ ಕಟ್ಟಡ ಇದೀಗ ಕುಡುಕರ ಪಾಲಿಗೆ ಸ್ವರ್ಗವಾಗಿದೆ. ಕಟ್ಟಡದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಸಿಗರೇಟಿನ ತುಂಡುಗಳೆ ತುಂಬಿಕೊಂಡಿದ್ದು, ಇಲ್ಲಿರುವ ಬೆಲೆ ಬಾಳುವ ವಸ್ತುಗಳು, ಸಾಮಗ್ರಿಗಳು ತುಕ್ಕು ಹಿಡಿಯುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.

ಕಾರವಾರದಲ್ಲಿ ಕಡಲತೀರದುದ್ದಕ್ಕೂ ಸಿಗುವ ಪ್ರವಾಸಿ ತಾಣಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಇದೇ ಕಾರಣಕ್ಕೆ ನಿತ್ಯವೂ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಂತೆ ಒಂದು ಕಾಲದಲ್ಲಿ ಪ್ರವಾಸಿಗರ ಪಾಲಿಗೆ ಕಡಲಾಳದ ಜೀವಿಗಳ ದರ್ಶನ ತೆರೆದಿಟ್ಟು ಜ್ಞಾನ ದೇಗುದಂತಿದ್ದ ಸಾಗರ ಮತ್ಸ್ಯಾಲಯ ಕಟ್ಟಡ ಇದೀಗ ಹಾಳುಕೊಂಪೆಯಾಗಿ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
ಪ್ರವಾಸೋದ್ಯಮ ಇಲಾಖೆಯಿಂದ 2013ರಲ್ಲಿ ಪುನರ್ ನವೀಕರಣಗೋಳಿಸಿದ್ದ ಕಟ್ಟಡ ಐದಾರು ವರ್ಷದಲ್ಲಿಯೇ ಶೀಥಿಲಗೊಂಡು ಕೋವಿಡ್ ಬಳಿಕ ಶಾಶ್ವತವಾಗಿ ಬಾಗಿಲು ಮುಚ್ಚಿದೆ. ಇದರಿಂದ ಸಾಗರ ಮತ್ಸ್ಯಾಲಯ ಕಟ್ಟಡ ಸುತ್ತ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದೆ. ಕಟ್ಟಡದಲ್ಲಿ ಅಕ್ವೇರಿಯಂ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಲ್ಲದೆ ಅದೇಷ್ಟೋ ಬೆಲೆ ಬಾಳುವ ವಸ್ತುಗಳು ಕಟ್ಟಡದ ಒಳಗೆ ತುಕ್ಕು ಹಿಡಿಯುತ್ತಿದ್ದು ಉಪಯೋಗಕ್ಕೆ ಬರುವಂತಿದ್ದರೂ ಅದೇಷ್ಟೊ ವಸ್ತುಗಳು ಬೀಗ ಹಾಕಿದ ಕಟ್ಟದಲ್ಲಿ ದೂಳು ಹಿಡಿಯುವಂತಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರಾದ ಸುಭಾಶ್ಚಂದ್ರ.

ಸದ್ಯ ಮತ್ಸ್ಯಾಲಯವನ್ನು ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮತ್ಸ್ಯಾಲಯದಲ್ಲಿನ ಪಾನಿಸ್ ಕೋಯ್, ಸ್ಮಾಲ್ ಕೋಯ್, ಗೋಲ್ಡನ್ ರೋಸಿ, ಡೈಮಂಡ್ ಆಂಗಲ್, ಗೋಲ್ಡ್ ಫಿಶ್, ಕಾಪರ್ ಗೋಲ್ಡ್, ಅಲ್ಬಿನೊ ಶಾರ್ಕ್, ವೈಟ್ ಮೂಲೀಸ್, ಬ್ಲಾಕ್ ಮಾರ್ಫ್ ಹೀಗೆ 30ಕ್ಕೂ ಹೆಚ್ಚು ವಿಧದ ಮೀನುಗಳು, ಆಮೆಗಳ ಮರಿಗಳೂ ಗಮನ ಸೆಳೆಯುತ್ತಿವೆ.
ಅಲ್ಲದೆ ಇಲ್ಲಿನ ಹಲವು ವರ್ಷಗಳ ಹಿಂದಿನ ತಿಮಿಂಗಿಲದ ಅಸ್ತಿಯನ್ನು ಕೂಡ ಇಲ್ಲಿ ಸಂರಕ್ಷಿಸಿಡಲಾಗಿದ್ದು, ಇದು ಕೂಡ ಆಗಮಿಸುವ ಪ್ರವಾಸಿಗರ ಕೌತುಕ ಹೆಚ್ಚಿಸುವಂತಾಗಿದೆ. ಆದರೆ ಸಾಗರ ಮತ್ಸ್ಯಾಲಯ ಕಡಲತೀರಗಳ ಪ್ರವಾಸಿ ತಾಣಗಳ ಸಾಲಿನಲ್ಲಿ ಸೇರಿರುವುದರಿಂದ ಗೂಗಲ್ ಇಲ್ಲವೇ ಈ ಹಿಂದೆ ಬಂದವರು ಮತ್ತೆ ಮತ್ತೆ ಹುಡುಕಿ ಬರುತ್ತಿದ್ದಾರೆ.

ಜಿಲ್ಲಾಡಳಿತ ಇಲ್ಲವೇ ಪ್ರವಾಸೋದ್ಯಮ ಇಲಾಖೆ ಕಟ್ಟಡ ಪುನರ್ ಬಳಕೆಗೆ ಯೋಗ್ಯವಾಗಿದ್ದಲ್ಲಿ ಬಳಕೆ ಮಾಡಬೇಕು. ಇಲ್ಲವೇ ಇದನ್ನು ಪುನರ್ ನಿರ್ಮಾಣ ಮಾಡಿ ಮೊದಲಿನಂತೆ ಪ್ರವಾಸಿಗರಿಗೆ ಸಾಗರ ಜೀವಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಮಾಡಬೇಕು ಎಂದು ಸ್ಥಳೀಯರಾದ ಸಾಯಿನಾಥ ಒತ್ತಾಯಿಸಿದ್ದಾರೆ.
ಒಟ್ಟಾರೆ ಪ್ರವಾಸಿಗರ ಪಾಲಿಗೆ ಜ್ಞಾನ ದೇಗುಲದಂತಿದ್ದ ಸಾಗರ ಮತ್ಸ್ಯಾಲಯ ಇದೀಗ ಕಡಲತೀರದಲ್ಲಿ ಕಪ್ಪು ಚುಕ್ಕೆಯಂತಾಗಿದೆ. ಜಿಲ್ಲಾಡಳಿತ ಇಲ್ಲವೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಬೆಲೆ ಬಾಳುವ ವಸ್ತುಗಳ ರಕ್ಷಣೆ ಮಾಡುವುದರ ಜೊತೆಗೆ ಮೊದಲಿನಂತೆ ಮತ್ಸ್ಯ ಸಂಗ್ರಹಾಲಯ ನಿರ್ಮಾಣ ಮಾಡಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.












Click it and Unblock the Notifications