ಉತ್ತರ ಕನ್ನಡ: ವಾಣಿಜ್ಯ ಬಂದರು ವಿರೋಧಿಸಿ ಸಮುದ್ರದಲ್ಲಿ ಮೀನುಗಾರರ ಪ್ರತಿಭಟನೆ
ಕಾರವಾರ, ಮಾರ್ಚ್ 13: ಅಂಕೋಲಾದ ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ವಿರೋಧಿಸಿ ಸ್ಥಳೀಯ ಮೀನುಗಾರರ ಆಕ್ರೋಶ ಮತ್ತೆ ಜೋರಾಗಿದೆ. ಉದ್ದೇಶಿತ ಈ ವಾಣಿಜ್ಯ ಬಂದರನ್ನು ಕೈ ಬಿಡುವಂತೆ ಒತ್ತಾಯಿಸಿ ಅಂಕೋಲಾದ ಬೇಲೆಕೇರಿ ಕಡಲತೀರದಲ್ಲಿ ನೂರಾರು ಮೀನುಗಾರರು ಮಾನವ ಸರಪಳಿ ನಿರ್ಮಿಸಿ ಹಾಗೂ ಬೋಟ್‌ಗಳ ಮೂಲಕ ಸಮುದ್ರಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ಕೇಣಿ ಹಾಗೂ ಭಾವಿಕೇರಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಕಾರಣ ತಾಲೂಕಿನ ಬೇಲೆಕೇರಿ ಕಡಲತೀರದಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಸ್ಥಗಿತಗೊಳಿಸಿ ಒಂದೆಡೆ ಸೇರಿದ ಮೀನುಗಾರರು, ಕಡಲತೀರದುದ್ದಕ್ಕೂ ಸುಮಾರು 1 ಕಿ.ಮೀ ಮಾನವ ಸರಪಳಿ ನಿರ್ಮಾಣ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನೂರಾರು ಮೀನುಗಾರರು, ಸಾಂಪ್ರದಾಯಿಕ ಪಾತಿ ದೋಣಿ, ಯಾಂತ್ರಿಕ ಬೋಟುಗಳ ಮೂಲಕ ತೆರಳಿ ಸಮುದ್ರದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬಂದರು ಸರ್ವೇ ಕಾರ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಮೀನುಗಾರರು ಒಟ್ಟಾಗಿ ಏಕತೆ ಪ್ರದರ್ಶನ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಖಾಸಗಿ ಬಂದರು ಅಗತ್ಯವಿಲ್ಲ, ಬಂದರು ನಿರ್ಮಾಣ ಕೈಬಿಡಬೇಕು, ಇಲ್ಲವೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
'ಸೀಬರ್ಡ್ ಯೋಜನೆಯಿಂದ ಈಗಾಗಲೇ ನಮ್ಮ ಮನೆ ಜಮೀನುಗಳನ್ನು ಕಳೆದುಕೊಂಡು ಇಲ್ಲಿ ವಾಸವಾಗಿದ್ದೇವೆ. ಕಾರವಾರ ಅಂಕೋಲಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 17 ಕಡಲತೀರ ಈಗ ಯೋಜನೆಯ ಪಾಲಾಗಿದೆ. ಇದೀಗ ಅಳಿದುಳಿದ ಕಡಲ ತೀರಗಳಲ್ಲಿ ಮೀನುಗಾರಿಕೆ ಮೂಲಕ ಬದುಕು ಕಟ್ಟಿಕ್ಕೊಂಡಿದ್ದೇವೆ. ಆದರೆ ಇದೀಗ ಮತ್ತೆ ಈ ಬೃಹತ್ ಬಂದರು ನಿರ್ಮಾಣದಿಂದ ನಾವು ನಿರಾಶ್ರಿತರಾಗುತ್ತೇವೆ'.

'ಈ ಪ್ರದೇಶ ಮೀನುಗಾರಿಕೆಗೆ ಯೋಗ್ಯವಾಗಿದ್ದು ಇಲ್ಲಿ ಬಂದರು ನಿರ್ಮಾಣವಾದಲ್ಲಿ ಮೀನುಗಾರಿಕೆಗೆ ದೊಡ್ಡ ಪೆಟ್ಟು ಬೀಳಲಿದೆ. ಇದರಿಂದ ಮೀನುಗಾರಿಕೆಯನ್ನೇ ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕುವ ಕಾರಣ ಈ ಯೋಜನೆಯಲ್ಲಿ ಇಲ್ಲಿ ಕೈ ಬಿಡಬೇಕು. ಇಲ್ಲವಾದಲ್ಲಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮುಂದುವರಿಸಲಾಗುವುದು' ಎಂದು ಮೀನುಗಾರ ಮುಖಂಡ ಶ್ರೀಕಾಂತ ದುರ್ಗೆಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
'ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಯೋಜನೆ ಮಾಡುವಾಗ ಮೊದಲು ಸ್ಥಳೀಯರ ಅಭಿಪ್ರಾಯ ಪಡೆಯಬೇಕು. ಸ್ಥಳೀಯರಲ್ಲಿ ವಿರೋಧ ಇದ್ದಾಗ ಯೋಜನೆ ವಾಪಸ್ ಪಡೆಯಬೇಕು. ಆದರೆ ನಮ್ಮ ಮೀನುಗಾರಿಕೆ ಬಿಟ್ಟು ಈ ಬಂದರು ಮಾಡಿದರೆ ನಾವು ಬದುಕುವುದು ಹೇಗೆ? ಸರ್ಕಾರ ಕೂಡಲೇ ಈ ಮೀನುಗಾರಿಕೆಯನ್ನು ಕೈ ಬಿಡಬೇಕು' ಎಂದು ಸ್ಥಳೀಯರಾದ ಸುಜಾತ್ ತಾಂಡೇಲ್ ಆಗ್ರಹಿಸಿದರು.
ಇನ್ನು 4119 ಕೋಟಿ ವೆಚ್ಚದ ಈ ಯೋಜನೆಯನ್ನು JSW ಕಂಪೆನಿ ಗುತ್ತಿಗೆ ಪಡೆದು ಕಳೆದ ಕೆಲ ದಿನಗಳಿಂದ ಸಮುದ್ರ ಭಾಗದಲ್ಲಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದಕ್ಕೆ ಮೀನುಗಾರರು ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ನಿಷೇಧಾಜ್ಞೆ ನಿರಂತರವಾಗಿ ಜಾರಿ ಮಾಡಿ ಸರ್ವೇ ಕಾರ್ಯಕ್ಕೆ ಅವಕಾಶ ಕಲ್ಪಿಸಿದೆ. ಇದೇ ಕಾರಣಕ್ಕೆ ಸ್ಥಳ ಬದಲಾವಣೆ ಮಾಡಿ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಪ್ರತಿಭಟನೆ ಹಿನ್ನಲೆಯಲ್ಲಿ ಕಡಲತೀರದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಅಲ್ಲದೇ ಸಮುದ್ರದಲ್ಲಿ ಕರಾವಳಿ ಕಾವಲುಪಡೆ ಸಿಬ್ಬಂದಿ ಭದ್ರತೆ ವಹಿಸಿದ್ದರು.












Click it and Unblock the Notifications