ಕಾಂಗ್ರೆಸ್‌ನವರು ಜನರಿಗೆ ಬರಿ ಸುಳ್ಳು ಭರವಸೆಗಳನ್ನೇ ನೀಡ್ತಾರೆ: ಪ್ರಧಾನಿ ಮೋದಿ
ಕಾರವಾರ, ಮೇ, 03: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಗೆ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ದೇಶದ 140 ಕೋಟಿ ಜನರು ನನಗೆ ಯಜಮಾನರು, ಅವರೇ ನನಗೆ ರಿಮೋಟ್ ಕಂಟ್ರೋಲ್ ಆಗಿದ್ದಾರೆ ಎಂದರು.
ಈ ವೇಳೆ ಮಾತನಾಡಿದ ಅವರು, ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಇದೀಗ ಸುಳ್ಳು ಭರವಸೆ ನೀಡುತ್ತಿದೆ. ಇದನ್ನು ಜನ ನಂಬದೆ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರ ಬೆಂಬಲಿಸುವಂತೆ ಪ್ರಧಾನಿ ಕರೆ ನೀಡಿದರು.

ನಾನು ಜನರ ಸೇವಕನಾಗಿದ್ದೇನೆ. ನೀವು ಹೇಳಿದ್ದನ್ನು ನಿಮ್ಮ ಸೇವಕನಾಗಿ ಮಾಡುತ್ತಿದ್ದೇನೆ. ನನಗೆ ದೇಶದ 140 ಕೋಟಿ ಜನರು ಯಜಮಾನರು. ನಮಗೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ. ಜನರೇ ನನಗೆ ರಿಮೋಟ್ ಕಂಟ್ರೋಲ್ ಆಗಿದ್ದಾರೆ. 2018ರ ಬಳಿಕ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಡಬಲ್ ಎಂಜಿನ್ ಸರಕಾರಕ್ಕೆ ಪ್ರಮುಖ ಸೇವೆ ಸಲ್ಲಿಸಿದವರಾಗಿದ್ದಾರೆ.
ಕಾಂಗ್ರೆಸ್ ಮಾಡಿದ ನಷ್ಟವನ್ನು ಸರಿ ಮಾಡಲು ಪ್ರಯತ್ನಿಸುವುದರ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆ. ಕಾಂಗ್ರೆಸ್, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ವಿದೇಶದಿಂದ ಕೇವಲ 30 ಸಾವಿರ ಕೋಟಿ ಹಣ ಹೂಡಿಕೆ ಆಗಿದೆ. ಆದರೆ ಡಬಲ್ ಸರ್ಕಾರ ಬಂದ ಬಳಿಕ 3 ಪಟ್ಟು ಹೆಚ್ಚಾಗಿ 90 ಸಾವಿರ ಕೋಟಿ ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ. ಉದ್ಯೋಗ, ಅಭಿವೃದ್ಧಿ ಆಗುತ್ತಿದೆ. ಇದು ಬಿಜೆಪಿ ಸರ್ಕಾರ ಅಭಿವೃದ್ಧಿಗೆ ನೀಡುವ ಮೊದಲ ಪ್ರಾಶಸ್ತ್ಯವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ದಾಖಲೆಯಲ್ಲಿ ಅಸ್ತಿತ್ವದಲ್ಲಿ ಇಲ್ಲದವರಿಗೆ, ಹೆಸರೇ ಇಲ್ಲದವರಿಗೆ ಸೌಲಭ್ಯ ನೀಡುತ್ತಿತ್ತು. ಒಂದು ಲಕ್ಷ ನಕಲಿ ಖಾತೆಗೆ ಸಿಲೆಂಡರ್ ಸಬ್ಸಿಡಿ, ಒಂದು ಕೋಟಿ ನಕಲಿ ಖಾತೆಗೆ ವಿಧವಾ ವೇತನ ಸೇರಿದಂತೆ ಒಟ್ಟು ನಾಲ್ಕು ಕೋಟಿ ನಕಲಿ ಖಾತೆಗೆ ಸರ್ಕಾರದ ವಿವಿಧ ಸಹಾಯಧನ ಕಾಂಗ್ರೆಸ್ ನಾಯಕರಿಗೆ ಹೋಗುತ್ತಿತ್ತು ಎಂದು ಆರೋಪಿಸಿದರು.
ನಾನು ಕಾಂಗ್ರೆಸ್‌ನ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಿದ್ದೇನೆ. ಬಡವರಿಗೆ ಸೌಲಭ್ಯ ಸಿಗಲು ಮುಳುವಾಗಿದ್ದ 10 ಕೋಟಿ ನಕಲಿ ಹೆಸರುಗಳನ್ನು ತೆಗೆದು ಹಾಕಿದ್ದೇನೆ. ಇದರಿಂದ ಕಾಂಗ್ರೆಸ್ ನಾಯಕರು ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ. ಮೂರು ಮುಕ್ಕಾಲು ಲಕ್ಷ ಕೋಟಿ ರೂಪಾಯಿ ಹಣ ನಷ್ಟವಾಗುವುದನ್ನು ತಡೆದಿದ್ದೇನೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಹಿ ಪರಿವಾರ ದೇಶ ಲೂಟಿ ಮಾಡಿದೆ. ಕಾಂಗ್ರೆಸ್‌ನಲ್ಲಿ ಟಾಪ್‌ನಿಂದ ಬಾಟಮ್‌ವರೆಗೆ ಭ್ರಷ್ಟಾಚಾರ ನಡೆಯುತ್ತದೆ. ಕಾಂಗ್ರೆಸ್ ನನ್ನನ್ನು ಕಂಡರೆ ವಿಷಕಾರುತ್ತದೆ. ಯಾಕಂದರೆ ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಭ್ರಷ್ಟಾಚಾರದ ಬೇರನ್ನು ಕಿತ್ತು ಹಾಕಿದೆ ಎಂದು ಹೇಳಿದರು.
ನಾನು ಬರುವುದಕ್ಕೂ ಮೊದಲು ಸಮುದ್ರ ಇತ್ತು. ಆದರೆ ಈ ಹಿಂದಿನ ಸರ್ಕಾರಗಳಿಗೆ ಮೀನುಗಾರರು ಮಾಡುವ ಕೆಲಸ ಕಣ್ಣಿಗೆ ಕಂಡಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ಮೀನುಗಾರಿಕೆಗೆ ಪ್ರತ್ಯೇಕ ಖಾತೆ ರಚಿಸಲಾಗಿದೆ. ಮೀನುಗಾರರಿಗೆ ಸಹಕಾರಿಯಾಗುವಂತೆ ಮತ್ಯ್ಸ ಸಂಪದ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇನ್ನು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡರಿಂದ ಆಶೀರ್ವಾದ ಪಡೆದರು. ಸಾರ್ವಜನಿಕ ಸಭೆಗೂ ಮುನ್ನ ಪದ್ಮಶ್ರೀ ಪುರಸ್ಕೃತರನ್ನು ಭೇಟಿಯಾದ ಪ್ರಧಾನಿ ಅವರಿಗೆ ನಮಸ್ಕರಿಸಿದರು. ಈ ವೇಳೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ, ಸುಕ್ರಿ ಗೌಡ ಅವರು ಪ್ರಧಾನಿ ತಲೆ ಮೇಲೆ ಕೈ ಇಟ್ಟು ಶುಭ ಹಾರೈಸಿದರು. ಅಲ್ಲದೆ ತುಳಸಿ ಗೌಡ ಅವರ ಪ್ರಧಾನಿ ಪಾದಕ್ಕೆ ನಮಸ್ಕರಿಸಲು ಮುಂದಾದಾಗ ಪ್ರಧಾನಿಯೇ ತಲೆ ಭಾಗಿ ನಮಸ್ಕರಿಸಿದರು.












Click it and Unblock the Notifications