ಕರ್ನಾಟಕ ಚುನಾವಣೆ: ಉತ್ತರ ಕನ್ನಡ ಜಿಲ್ಲೆಯ ಮತದಾರರ, ಮತಗಟ್ಟೆಗಳ ಸಂಪೂರ್ಣ ವಿವರ
ಕಾರವಾರ, ಮಾರ್ಚ್ 31: ಮೇ 10ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈಗಾಗಲೇ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿನ ಮತದಾರರ ಬಗ್ಗೆ ಹಾಗೂ ಮತಗಟ್ಟೆಗಳ ಬಗ್ಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಈವರೆಗಿನ ಸಮೀಕ್ಷೆ ಪ್ರಕಾರ 5,94,244 ಪುರುಷ ಹಾಗೂ 5,89,211 ಮಹಿಳಾ ಹಾಗೂ 6 ಜನ ತೃತೀಯ ಲಿಂಗ ಮತದಾರರು ಸೇರಿ ಒಟ್ಟು 11,83,461 ಮತದಾರರು ಇದ್ದಾರೆ. ನಾಮಪತ್ರ ಸಲ್ಲಿಕೆಯಾಗುವವರೆಗೂ ಹೊಸ ಮತದಾರರ ಸೇರ್ಪಡೆಗೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 1,435 ಮತದಾನ ಕೇಂದ್ರಗಳಿಗೆ ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ಪೂರೈಸಲಾಗಿದೆ. ಚುನಾವಣಾ ಆಯೋಗವು ಈ ವರ್ಷ ಯುವ ಮತದಾರರಿಗೆ ಹೆಚ್ಚು ಒತ್ತು ನೀಡಿದ್ದು, ಜಿಲ್ಲೆಯಲ್ಲಿ ಈ ಬಾರಿ 24,234 ಯುವ ಮತದಾರರು ಮತ ಚಲಾಯಿಸಲಿದ್ದಾರೆ. ಹಾಗೆಯೇ 80 ವರ್ಷ ಮೇಲ್ಪಟ್ಟ 27,399 ಮತದಾರರನ್ನು ಗುರುತಿಸಲಾಗಿದೆ. 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ ವಿಕಲಾಂಗ ಚೇತನರಿಗೆ ಬಯಸಿದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ಮತ ಕ್ಷೇತ್ರಕ್ಕೆ 5ರಂತೆ ಒಟ್ಟು 35 ಮಹಿಳಾ ಮತದಾನ ಕೇಂದ್ರವನ್ನು ಮಾಡಲಾಗಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಹಿಡಿದು ಮತದಾನ ಮಾಡುವರು ಕೂಡ ಮಹಿಳೆಯರು ಆಗಿರುತ್ತಾರೆ. ಹಾಗೆಯೇ 12 ಪಿಡಬ್ಲೂಡಿ ಮತದಾನ ಕೇಂದ್ರ, 12 ಯುವ ಮತದಾನ ಕೇಂದ್ರ ಹೀಗೆ ಒಟ್ಟು 66 ವಿಶೇಷ ಮತದಾನ ಕೇಂದ್ರಗಳನ್ನು ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 199 ಕ್ರಿಟಿಕಲ್ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಮತದಾನದ ಸಂದರ್ಭದಲ್ಲಿ ಗಲಭೆ ಅಥವಾ ಇನ್ನಾವುದೇ ಚಟುವಟಿಕೆಗಳು ನಡೆದಿರುವುದನ್ನು ಗಮನಸಿ ಅಂತಹ ಮತ ಕೇಂದ್ರಗಳ ಮೇಲೆ ನಿಗಾ ವಹಿಸಲು ಕ್ರಿಟಿಕಲ್ ಮತದಾನ ಕೇಂದ್ರಗಳನ್ನು ಮಾಡಲಾಗಿದೆ. ಹಾಗೆಯೇ ದುರ್ಬಲ ವ್ಯಕ್ತಿಗಳಿಂದ ಮತದಾನ ಸಂದರ್ಭದಲ್ಲಿ ಮತದಾರರಿಗೆ ಹೆದರಿಕೆ ಇತರ ಕಾರಣಗಳಿಂದ ತೊಂದರೆ ಒಳಗಾಗುವಂತ 55 ಮತ ಕ್ಷೇತ್ರಗಳನ್ನು ಗುರುತಿಸಲಾಗಿದೆ ಇಂತಹ ಮತ ಕ್ಷೇತ್ರದ ಮೇಲೆ ಪ್ರಭಾವ ಬಿರುವ 132 ಜನರನ್ನು ಗುರುತಿಸಿ ಅವರ ಮೇಲೆ ನಿಗಾ ಇರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 1,883 ನಿಯಂತ್ರಣ ಘಟಕಗಳು 2,685 ಬೆಲೆಟ್ ಘಟಕಗಳು ಇದೆ. ಒಟ್ಟು 25 ಚೆಕ್ ಪೋಸ್ಟ್‌ಗಳನ್ನು ಡಲಾಗಿದೆ. ಅದರಲ್ಲಿ 3 ಅಂತರ ರಾಜ್ಯ, 14 ಅಂತರ್ ಜಿಲ್ಲಾ ಹಾಗೂ 8 ಜಿಲ್ಲಾ ಕೇಂದ್ರದಲ್ಲಿ ಚೆಕ್ ಪೋಸ್ಟ್‌ಗಳನ್ನು ಮಾಡಿ ತೀವ್ರ ನಿಗಾ ವಹಿಸಲಾಗಿದೆ. ಚುನಾವಣೆ ಆಯೋಗದ ನಿರ್ದೇಶನದಂತೆ ಒಟ್ಟು 1,122 ಸ್ಥಳಗಳಲ್ಲಿ ಅಣಕು ಮತದಾನ ಮಾಡಿಸಿದ್ದು, ಒಟ್ಟು 76124, ಜನ ಭಾಗವಹಿಸಿದ್ದರು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತಿ ಜಾರಿಗೂ ಪೂರ್ವದಲ್ಲಿ ಪ್ರಮುಖ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆದು ನಿಗಾ ಇಟ್ಟಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಮದ್ಯ, ನಗದು ಹಾಗೂ ಇತರೆ ದಾಖಲೆ ಇಲ್ಲದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆದು ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ 3 ಪ್ರಕರಣದಲ್ಲಿ 15 ಲಕ್ಷ ರೂ ನಗದು, ವಿವಿಧ ಪ್ರಕರಣದಲ್ಲಿ ಒಟ್ಟು 40 ಲಕ್ಷ ಮೌಲ್ಯದ ಅಕ್ರಮ ಮದ್ಯ ಹಾಗೂ 7.50 ಲಕ್ಷದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.












Click it and Unblock the Notifications