ಮನೆಗೆ ನುಗ್ಗುತ್ತಿದ್ದ ಮಳೆ ನೀರು: ಕಟ್ಟಿದ ಮನೆಯನ್ನೇ ಎತ್ತರಕ್ಕೇರಿಸಿ ಅಚ್ಚರಿ ಮೂಡಿಸಿದ ಖಾಸಗಿ ಕಂಪನಿ
ಕಟ್ಟಿದ ಮನೆಯನ್ನೇ ನೆಲದಿಂದ ಮೇಲಕ್ಕೆ ಎತ್ತುವುದು ಅಸಾಧ್ಯದ ಮಾತು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು. ಆದರೆ ಹರಿಯಾಣದ ಎಚ್.ಎಸ್.ಬಿ.ಎಸ್ ಬಿಲ್ಡಿಂಗ್ ಸೊಲ್ಯೂಶನ್ ಎಂಬ ಖಾಸಗಿ ಕಂಪನಿ ಕುಮಟದಲ್ಲಿ ಇದನ್ನು ಸಾಧ್ಯವಾಗಿಸಿದೆ.
ಕಾರವಾರ, ಜನವರಿ 31: ಸಾಮಾನ್ಯವಾಗಿ ಮನೆ ಬಳಿ ಬೆಲೆ ಬಾಳುವ ಮರಗಳಿದ್ದರೆ ಅದನ್ನು ಕಿತ್ತು ಬೇರೆಡೆಗೆ ಸ್ಥಳಾಂತರ ಮಾಡುವುದನ್ನು ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಕಟ್ಟಿದ ಮನೆಯನ್ನೇ ನೆಲದಿಂದ ಮೇಲಕ್ಕೆ ಎತ್ತುವುದು ಅಥವಾ ಸ್ವಲ್ಪವೂ ಹಾನಿಯಾಗದಂತೆ ಸ್ಥಳಾಂತರಿಸುವುದು ಎಂದರೆ ಅದು ಅಸಾಧ್ಯದ ಮಾತು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು.
ಆದರೆ ಹರಿಯಾಣದ ಎಚ್.ಎಸ್.ಬಿ.ಎಸ್ ಬಿಲ್ಡಿಂಗ್ ಸೊಲ್ಯೂಶನ್ ಎಂಬ ಖಾಸಗಿ ಕಂಪನಿ ಕುಮಟಾ ತಾಲೂಕಿನ ಕಡೆಕೋಡಿ ಬಳಿ ಇದನ್ನು ಸಾಧ್ಯವಾಗಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಕಳೆದ ಕೆಲ ವರ್ಷಗಳ ಹಿಂದೆಯೇ ನಿರ್ಮಾಣಗೊಂಡು ನೆಲಮಟ್ಟಕ್ಕಿಂತ ತಗ್ಗಿನಲ್ಲಿದ್ದ ಸುಮಾರು 1ಸಾವಿರ ಪೂಟ್ ಎತ್ತರ ಇರುವ ಆರ್.ಸಿ.ಸಿ ಮನೆಯೊಂದನ್ನು, ಕಟ್ಟಡಕ್ಕೆ ಸ್ವಲ್ಪವೂ ಹಾನಿಯಾಗದಂತೆ ಭಾರ ಎತ್ತುವ ಜ್ಯಾಕ್‌ಗಳ ಸಹಕಾರದೊಂದಿಗೆ ನೆಲಗಟ್ಟಿನಿಂದ ಸುಮಾರು 5 ಪೂಟ್ ಎತ್ತರಿಸಿದ್ದು ಜನರು ವಿಸ್ಮಯಗೊಳ್ಳುವಂತೆ ಮಾಡಿದ್ದಾರೆ.

ತಗ್ಗು ಪ್ರದೇಶಗಳಿಗೆ ನುಗ್ಗುವ ಮಳೆ ನೀರು
ಕಡೆಕೋಡಿಯ ಹೇಮಂತ ಪಾಯ್ದೆ ಎನ್ನುವವರಿಗೆ ಸೇರಿದ ಹಳೆಯ ಮನೆಯನ್ನು ಇದೀಗ ಎತ್ತರಿಸಲಾಗಿದೆ. ಪಿಲ್ಲರ್ ಇಲ್ಲದೆ ಕೇವಲ ಕಲ್ಲಿನ ನೆಲಗಟ್ಟಿನ ಮೇಲೆ ಕಲ್ಲಿನ ಗೋಡೆ ಇರುವ ಮನೆ ಆರ್‌ಸಿಸಿಯದ್ದಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕವೇ ಇರುವ ಮನೆಗೆ ಕಳೆದ ಕೆಲ ವರ್ಷಗಳಿಂದ ಮಳೆ ನೀರು ನುಗ್ಗುತಿತ್ತು. ಈ ಹಿಂದೆ ಹೆದ್ದಾರಿಗಿಂತಲೂ ತಗ್ಗಿನಲ್ಲಿದ್ದ ಮನೆ ಎದುರು ಚತುಷ್ಪಥ ಕಾಮಗಾರಿ ವೇಳೆ ಎತ್ತರ ಮಾಡಿದ ಪರಿಣಾಮ ಪ್ರತಿ ವರ್ಷವೂ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತಿತ್ತು. ಇದು ಮನೆಯ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಭರವಸೆ ನೀಡಿದ ಎಚ್.ಎಸ್.ಬಿ.ಎಸ್ ಬಿಲ್ಡಿಂಗ್
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡವನ್ನು ಏನು ಮಾಡುವುದು ಎನ್ನುವುದು ಯೋಚನೆಯಾಗಿತ್ತು. ಅಲ್ಲದೇ ಇದ್ದ ಮನೆಯನ್ನು ಕೆಡವಿ ಹೊಸ ಮನೆ ಕಟ್ಟುವುದು ಈಗಿನ ದಿನಮಾನದಲ್ಲಿ ತುಂಬಾ ಕಷ್ಟ ಎಂದು ಕೊಂಡಿದ್ದಾಗ ಹೇಮಂತ ಪಾಯ್ದೆ ಅವರಿಗೆ ಅಸುರಕ್ಷಿತ ಮನೆಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ, ಇಲ್ಲವೆ ಮನೆಯ ನೀರು ತುಂಬುವ ಜಾಗದಲ್ಲಿರುವ ಮನೆಯನ್ನು ಸುರಕ್ಷಿತವಾಗಿ ಎತ್ತರಿಸುವ ಕೆಲಸದ ಜಾಹಿರಾತು ಕಣ್ಣಿಗೆ ಬಿದ್ದಿದೆ. ತಕ್ಷಣ ಈ ಕಾರ್ಯ ಮಾಡುವ ಕಂಪನಿಯನ್ನು ಸಂಪರ್ಕಿಸಿದರಲ್ಲದೆ, ಅವರು ಕೆಲಸ ಮಾಡುತ್ತಿರುವ ಸ್ಥಳಕ್ಕೂ ಭೇಟಿ ನೀಡಿ ಕೆಲಸದ ಬಗ್ಗೆ ಖಚಿತ ಮಾಡಿಕೊಂಡಿದ್ದರು. ಅಲ್ಲದೆ ತಮ್ಮ ಮನೆಗೂ ಎಚ್.ಎಸ್.ಬಿ.ಎಸ್ ಬಿಲ್ಡಿಂಗ್ ಸೊಲ್ಯೂಶನ್‌ನವರನ್ನು ಕರೆತಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಸ್ವೇರ್ ಪೂಟ್‌ಗೆ 250 ರೂನಂತೆ ಶುಲ್ಕ
ಮನೆ ಪರಿಶೀಲಿಸಿದ ಸೊಲ್ಯೂಶನ್‌ನವರು ಕೆಲಸ ಮಾಡಿಕೊಡುವ ಸಂಪೂರ್ಣ ಭರವಸೆ ನೀಡಿದರು. ಅದರಂತೆ ಈಗ ಮನೆಯನ್ನು ಮೂಲಕ ನೆಲಗಟ್ಟಿನಿಂದ ಎತ್ತರಿಸುವ ಕೆಲಸವನ್ನು ನುರಿತ ಕೆಲಸಗಾರರು ಮಾಡುತ್ತಿದ್ದಾರೆ. ಈ ಕೆಲಸಕ್ಕೆ ಸ್ವೇರ್ ಪೂಟ್‌ಗೆ 250 ರೂಪಾಯಿನಂತೆ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ. ಮನೆಗೆ ಮಹಡಿ ಹೆಚ್ಚಿದಂತೆ ಆ ಪ್ರಕಾರ ಶುಲ್ಕ ಆಕರಣ ಬೇರೆ ಬೇರೆ ರೀತಿ ಇರಲಿದೆ ಎಂದು ಮನೆ ಮಾಲೀಕ ಹೇಮಂತ ಪಾಯ್ದೆ ಹೇಳಿದ್ದಾರೆ.

ಕೋರ್ಟ್‌ನಿಂದ ಅನುಮತಿ ಪಡೆದ ಎಚ್.ಎಸ್.ಬಿ.ಎಸ್
ಇನ್ನು ಎಚ್.ಎಸ್.ಬಿ.ಎಸ್ ಬಿಲ್ಡಿಂಗ್ ಸೊಲ್ಯೂಶನ್‌ನ ಪ್ರತಿನಿಧಿ ರಾಹುಲ್ ರಾಣಾ ಮಾತನಾಡಿದ್ದು, 'ನಮ್ಮ ಕಂಪನಿ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಇದೇ ರೀತಿ ಕೆಲಸ ಮಾಡುತ್ತಿದೆ. ನಮ್ಮ ಕೆಲಸ ಶೇ.100 ಗ್ಯಾರಂಟಿ ಹಾಗೂ ಕೋರ್ಟ್ ಎಗ್ರಿಮೆಂಟ್‌ನೊಂದಿಗೆ ನಡೆಸಲಾಗುವುದು. ಈಗಾಗಲೆ 10 ಅಂತಸ್ಥಿನ ಕಟ್ಟಡಗಳನ್ನು ಎತ್ತರಿಸುವುದು ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಹಳೆ ಮನೆ ಇದ್ದವರು ಈ ಕೆಲಸವನ್ನ ಹೊಸ ಮನೆ ನಿರ್ಮಾಣಕ್ಕೆ ತಗಲುವು ವೆಚ್ಚದ ಶೇ.30 ರಷ್ಟುರಲ್ಲಿ ಮಾಡಿಸಬಹುದು ಎಂದು ಹೇಳಿದರು.












Click it and Unblock the Notifications