ಖಂಡಗ್ರಾಸ ಸೂರ್ಯಗ್ರಹಣ; ಗೋಕರ್ಣ ಮಹಾಬಲೇಶ್ವರನ ವಿಶೇಷ ದರ್ಶನ
ಕಾರವಾರ, ಜೂನ್ 20: ಭಾನುವಾರ ಜರುಗಲಿರುವ ಖಂಡಗ್ರಾಸ ಚೂಡಾಮಣಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗೋಕರ್ಣ ಕ್ಷೇತ್ರದಲ್ಲಿ ಮಹಾಬಲೇಶ್ವರನ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬೆಳಿಗ್ಗೆ 9.30ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಭಾನುವಾರ ಸೂರ್ಯ ಗ್ರಹಣ ಬೆಳಿಗ್ಗೆ 10.04ಕ್ಕೆ ಪ್ರಾರಂಭಗೊಂಡು ಮಧ್ಯಾಹ್ನ 1.23ಕ್ಕೆ ಮೋಕ್ಷ ಪಡೆಯಲಿದೆ. ಈ ಕಾರಣದಿಂದ ಬೆಳಗ್ಗೆಯಿಂದ ಗ್ರಹಣ ಮೋಕ್ಷದ ಸಮಯ 1.23ರವರೆಗೂ ಮಹಾಬಲೇಶ್ವರನ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರ ಗಮನಕ್ಕೆ
ಹಿಂದಿನ ನಿಯಮದಂತೆ ನಂದಿ ಮಂಟಪದವರೆಗೆ ಭಕ್ತಾದಿಗಳು ತೆರಳಿ ಗೋಕರ್ಣನ ದರ್ಶನ ಮಾಡಬಹುದಾಗಿದೆ ಹೊರತು ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಅವಕಾಶವಿಲ್ಲ. ಗ್ರಹಣ ಕಾಲದಿಂದ ಮೋಕ್ಷ ಕಾಲದವರೆಗೆ ಮಹಾಬಲೇಶ್ವರನಿಗೆ ವಿಶೇಷ ಗಂಗಾಜಲಾಭಿಷೇಕ ನಡೆಯಲಿದ್ದು, ಗ್ರಹಣ ಮೋಕ್ಷದ ಬಳಿಕ ಕ್ಷೇತ್ರ ಶುಚಿಗೊಳಿಸಿ, ಮಹಾಪೂಜೆ ನಡೆಯಲಿದೆ. ಇನ್ನು ಗ್ರಹಣದ ದೋಷ ನೀಗಿಸಲು ಕ್ಷೇತ್ರದಲ್ಲಿ ಯಾವುದೇ ಪೂಜೆ, ದಾನ- ಧರ್ಮಾಧಿ ಪ್ರಕ್ರಿಯೆಗಳಿಗೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ.