ಮನೆ ಹೊರಗೆ ಸಿಗರೇಟ್ ಸೇದಿದ ತಕ್ಷಣ ನಿಮ್ಮ ಮಗು ಸುರಕ್ಷಿತವಲ್ಲ!ನೀವು ಸುಡುವ ತಂಬಾಕು ಮಗುವಿನ ಬದುಕ ಬೆಂಕಿಯಾಗಿಸುವುದು
ಮಕ್ಕಳ ಪಾಲಿಗೆ ಮನೆ ಜಗತ್ತಿನ ಅತ್ಯಂತ ಸುರಕ್ಷಿತ ಸ್ಥಳ. ಅಡುಗೆಮನೆಯಲ್ಲಿನ ಆಹಾರದ ಘಮ, ಓಡಾಡುವಾಗ ಕಾಲಿಗೆ ತಾಕುವ ಸೋಫಾ, ಎಲ್ಲೆಮದರಲ್ಲಿ ಹರಡಿಕೊಳ್ಳುವ ಆಟಿಕೆ, ಪೋಷಕರ ಬೆಚ್ಚನೆಯ ಅಪ್ಪುಗೆ ಈ ಕಾರಣದಿಂದಲೇ ಮಕ್ಕಳಿಗೆ ತಮ್ಮ ಮನೆಯೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಅನೇಕ ಭಾರತೀಯ ಮನೆಗಳಲ್ಲಿ, ಮನೆ ಗೋಡೆಗಳು ಮತ್ತು ಪರದೆಗಳಲ್ಲಿ ಮತ್ತೊಂದು ವಾಸನೆ ಹರಡಿಕೊಳ್ಳುತ್ತದೆ. ಅದುವೇ ಸಿಗರೇಟ್ ಹೊಗೆಯ ವಾಸನೆ. ಸಿಗರೇಟಿನ ಬೆಂಕಿಯನ್ನು ಆರಿಸಿದ ಬಹಳ ಹೊತ್ತಿನವರೆಗೂ ಆ ವಾಸನೆ ಮಾತ್ರ ಹಾಗೆಯೇ ಉಳಿಯುತ್ತದೆ.
ಭಾರತವು ತಂಬಾಕು ಬಳಕೆ ವಿರುದ್ಧ ಹೋರಾಡುತ್ತಲೇ ಇದೆ. ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ (GATS-2) ಪ್ರಕಾರ , ಲಕ್ಷಾಂತರ ಭಾರತೀಯರು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೆಕೆಂಡ್ ಹ್ಯಾಂಡ್ ಸ್ಮೋಕ್‌ಗೆ ಒಡ್ಡಿಕೊಳ್ಳುತ್ತಿದ್ದಾರೆ. ರಾತ್ರಿಯಲ್ಲಿ ಮಗು ಕೆಮ್ಮುತ್ತಿದ್ದರೆ ಮಗು ಹುಷಾರು ತಪ್ಪುತ್ತಿದೆ ಎಂದು ಸುಲಭವಾಗಿ ಹೇಳಬಹುದು. ಪದೇ ಪದೇ ಎದೆಯ ಸೋಂಕುಗಳು ಹವಾಮಾನ ಬದಲಾವಣೆಗಳಿಂದಲೇ ಉಂಟಾಗುತ್ತವೆ ಎನ್ನುವುದು ಅದೆಷ್ಟೋ ಪೋಷಕರ ಅಭಿಪ್ರಾಯ. ಆದರೆ ಕೆಲವೊಮ್ಮೆ, ಈ ಸಮಸ್ಯೆಯ ಮೂಲ ಮನೆಯಲ್ಲಿಯೇ ಅಡಗಿರುತ್ತದೆ.

ಹೊಗೆ ಮಕ್ಕಳ ಆಯ್ಕೆ ಆಗಿರುವುದೇ ಇಲ್ಲ:
ಗುರುಗ್ರಾಮ್‌ನ ಮಾರೆಂಗೊ ಏಷ್ಯಾ ಆಸ್ಪತ್ರೆಗಳ ವೈದ್ಯಕೀಯ ಆಂಕೊಲಾಜಿ ವಿಭಾಗದ ಬಿಎಂಟಿ ವೈದ್ಯ, ಕ್ಲಿನಿಕಲ್ ನಿರ್ದೇಶಕ ಮತ್ತು ಮುಖ್ಯಸ್ಥ ಡಾ ಎಕೆ ಧರ್, ಪ್ರಕಾರ, ನಿಷ್ಕ್ರಿಯ ಧೂಮಪಾನ ಅಥವಾ ಪಾಸಿವ್ ಸ್ಮೋಕಿಂಗ್ ಎಂದರೆ ಕೇವಲ "ಹೊಗೆಯ ಸುತ್ತಲೂ ಇರುವುದಲ್ಲ. ಧೂಮಪಾನ ಮಾಡದೇ ಇರುವವರು ಇತರರು ಬಿಡುಗಡೆ ಮಾಡುವ ತಂಬಾಕು ಹೊಗೆಯನ್ನು ಉಸಿರಾಡುವ ಕ್ರಿಯೆಯಾಗಿದೆ. ತಂಬಾಕು ಸೇವನೆಯು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಸಾವಿನ ಅಂಚಿಗೂ ತಲುಪಿಸಬಹುದು.ಪ್ರತಿ ವರ್ಷ ಸುಮಾರು 6 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ.
ನೇರ ತಂಬಾಕು ಬಳಕೆಯು ವಾರ್ಷಿಕವಾಗಿ ಸುಮಾರು ಐದು ಮಿಲಿಯನ್ ಸಾವುಗಳಿಗೆ ಕಾರಣವಾಗಿದ್ದರೂ, ನಿಷ್ಕ್ರಿಯ ಧೂಮಪಾನವು ತಂಬಾಕು ಜನರಿಗೆ ಹಾನಿ ಮಾಡುವ ಮತ್ತೊಂದು ಅಪಾಯಕಾರಿ ಮಾರ್ಗವಾಗಿದೆ. 0.5 ಮಿಲಿಯನ್ ಧೂಮಪಾನ ಮಾಡದ ಜನರು ಸೆಕೆಂಡ್ ಹ್ಯಾಂಡ್ ಸ್ಮೋಕ್‌ಗೆ ಒಡ್ಡಿಕೊಳ್ಳುವುದನ್ನು ಗಮನಿಸಲಾಗಿದೆ ಎನ್ನುತ್ತಾರೆ ಡಾ. ಧಾರ್.
ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ:
ಮಕ್ಕಳು ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುವುದರಿಂದ ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅವರು ಕೋಣೆಯಿಂದ ಹೊರಗೆ ಬರಲು ಅಥವಾ ಶುದ್ಧ ಗಾಳಿಯನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ.ವಯಸ್ಕರು ಪರಿಸರಕ್ಕೆ ಬಿಡುಗಡೆ ಮಾಡುವ ಯಾವುದೇ ವಸ್ತುವನ್ನು ಅವರ ದೇಹವು ಹೀರಿಕೊಳ್ಳುತ್ತದೆ. ಜಾಗತಿಕ ಅಧ್ಯಯನಗಳು ಸುಮಾರು ಶೇ. 40 ರಷ್ಟು ಮಕ್ಕಳು ಸೆಕೆಂಡ್ ಹ್ಯಾಂಡ್ ಸ್ಮೋಕ್‌ಗೆ ಬಲಿಯಾಗುತ್ತಿದ್ದಾರೆ ಎಂದು ಸೂಚಿಸುತ್ತವೆ. ಮನೆಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದು, ಅಶುದ್ದ ಗಾಳಿ, ಅಡುಗೆಮನೆಯಿಂದ ಬರುವ ಹೊಗೆ ಮತ್ತು ಸೊಳ್ಳೆ ನಿವಾರಕಗಳಿಂದ ಬರುವ ಹೊಗೆ ಕೂಡಾ ಭಾರತೀಯ ಮನೆಗಳಲ್ಲಿನ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತವೆ.ಎರಡನೇ ಹಂತದ ತಂಬಾಕು ಹೊಗೆಗೆ ಒಡ್ಡಿಕೊಳ್ಳುವ ಸುರಕ್ಷಿತ ಮಟ್ಟವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಸಿದೆ.
ಮನೆಯೇ ಆರೋಗ್ಯಕ್ಕೆ ಅಪಾಯಕಾರಿಯಾದಾಗ:
ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ಸಿಗರೇಟ್ ಸೇದುವವರು ಇದ್ದರೆ ಅವರು ಹೊಗೆ ಬಿಡುವಾಗ ಮನೆಯಿಂದ ಹೊರಗೆ ಬರುವುದು, ಬಾಲ್ಕನಿಗೆ ಹೋಗಿ ಸಿಗರೇಟ್ ಸುಡುವುದು ಮಾಡುತ್ತಾರೆ. ಹೀಗೆ ಮಾಡಿದರೆ ಮನೆ ಮಂದಿ ಸುರಕ್ಷಿತ ಎನ್ನುವ ಕಲ್ಪನೆ ಅವರದ್ದು. ಹೌದು ಇದು ಕೇವಲ ಅವರ ಕಲ್ಪನೆ, ನಿಜ ಅಲ್ಲ. ಕಿಟಕಿಯ ಬಳಿ ಅಥವಾ ಬಾಲ್ಕನಿಯಲ್ಲಿ ಧೂಮಪಾನ ಮಾಡುವುದರಿಂದ ಮಕ್ಕಳು ತಂಬಾಕಿನ ಹೊಗೆಯಿಂದ ಸುರಕ್ಷಿತವಾಗಿರುತ್ತಾರೆ ಎನ್ನುವುದು ಶುದ್ದ ಸುಳ್ಳು.
ವೈದ್ಯರ ಪ್ರಕಾರ ಸಿಗರೇಟ್‌ಗಳಿಂದ ವಿಷಕಾರಿ ಕಣಗಳು ಬೇಗನೆ ಮಾಯವಾಗುವುದಿಲ್ಲ. ಧೂಮಪಾನ ಮಾಡುವ ಅನೇಕ ಜನರು ತಮ್ಮ ಮಕ್ಕಳಿಂದ ದೂರ ಸರಿದು ಧೂಮಪಾನ ಮಾಡುತ್ತಾರೆ. ಅಥವಾ ಸುತ್ತ ಮುತ್ತ ಮಕ್ಕಳು ಇಲ್ಲದಿರುವಾಗ ಧೂಮಪಾನ ಮಾಡುತ್ತಾರೆ. ಕೆಲವರು ಸಿಗರೇಟ್ ಸೇದಲು ಬಾಲ್ಕನಿಯನ್ನು ಆರಿಸಿಕೊಳ್ಳುತ್ತಾರೆ. ಆದರೆ ನಿಜ ಹೇಳಬೇಕೆಂದರೆ ಅಂತಹ ಎಚ್ಚರಿಕೆ ಕ್ರಮಗಳು ಹೆಚ್ಚಿನ ವ್ಯತ್ಯಾಸವನ್ನುಂಟುಮಾಡುವುದಿಲ್ಲ.
ಏಕೆಂದರೆ ತಂಬಾಕು ಹೊಗೆಯಲ್ಲಿರುವ ವಿಷಕಾರಿ ವಸ್ತುಗಳು ಮತ್ತು ಕ್ಯಾನ್ಸರ್ ಜನಕಗಳು ಬಟ್ಟೆ, ಪೀಠೋಪಕರಣಗಳು, ಪರದೆಗಳು ಮತ್ತು ಇತರ ವಸ್ತುಗಳ ಮೇಲೆ ಸಂಗ್ರಹವಾಗುತ್ತವೆ. ಇದು ಮಕ್ಕಳ ದೇಹವನ್ನು ಸುಲಭವಾಗಿ ಪ್ರವೇಶಿಸಬಹುದು. ಇದನ್ನು ಥರ್ಡ್ ಹ್ಯಾಂಡ್ ಸ್ಮೋಕ್ ಎಂದು ಕರೆತಲಾಗುತ್ತದೆ. ಇಲ್ಲಿ ಹೊಗೆ ಕಣ್ಣಿಗೆ ಕಾಣುವುದಿಲ್ಲ, ಆದರೆ ಅದು ಮೇಲ್ಮೈಗಳಲ್ಲಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಳವರೆಗೆ ಹಾಗೆಯೇ ಇರುತ್ತದೆ.
ನೆಲದ ಮೇಲೆ ತೆವಳುತ್ತಾ ಹೋಗುವಾಗ, ಪೀಠೋಪಕರಣಗಳನ್ನು ಮುಟ್ಟುವಾಗ ಅಥವಾ ಧೂಮಪಾನ ಮಾಡಿದ ಪೋಷಕರನ್ನು ತಬ್ಬಿಕೊಳ್ಳುವಾಗ ಮಗು ತಿಳಿಯದೆಯೇ ಈ ವಿಷಕಾರಿ ಕಣಗಳನ್ನು ಉಸಿರಾಡಬಹುದು ಅಥವಾ ಸೇವಿಸಬಹುದು. ಅನೇಕ ಕುಟುಂಬಗಳು ಈ ಗುಪ್ತ ಮಾನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ.
ಅನೇಕ ಕುಟುಂಬಗಳು ಅರಿತುಕೊಳ್ಳಲು ವಿಫಲವಾದ ಸಂಗತಿಯೆಂದರೆ, ತೆರೆದ ಕಿಟಕಿಯ ಬಳಿ ಅಥವಾ ಎಕ್ಸಾಸ್ಟ್ ಫ್ಯಾನ್ ಅಡಿಯಲ್ಲಿ ಧೂಮಪಾನ ಮಾಡುವುದರಿಂದ ಏನೂ ಬದಲಾಗುವುದಿಲ್ಲ. ವಿಷಕಾರಿ ಕಣಗಳು ಸಲೀಸಾಗಿ ಕೋಣೆಗಳಾದ್ಯಂತ ತೇಲುತ್ತವೆ. ಸೋಫಾಗಳು, ಪರದೆಗಳು ಮತ್ತು ಹಾಸಿಗೆಗಳಲ್ಲಿ ಆಳವಾಗಿ ನೆಲೆಗೊಳ್ಳುತ್ತವೆ. ಈ ಥರ್ಡ್ ಹ್ಯಾಂಡ್ ಸ್ಮೋಕ್ ನಿರಂತರ ರಾಸಾಯನಿಕ ಶೇಷವನ್ನು ಸೃಷ್ಟಿಸುತ್ತದೆ. ಇದನ್ನು ಮಕ್ಕಳು ನೆಲದ ಮೇಲೆ ಆಟವಾಡುವಾಗ ನುಂಗುತ್ತಾರೆ ಅಥವಾ ಉಸಿರಾಡುತ್ತಾರೆ. ಹೀಗಾಗುವಾಗ ಇದು ಮನೆಮಂದಿಯ ಆರೋಗ್ಯಕ್ಕೇ ಕುತ್ತು ತರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಬಳಲುವುದು ಮನೆ ಮಕ್ಕಳು.
ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಕೆಮ್ಮನ್ನು ಮೀರಿದ ಪರಿಣಾಮ:
ಮಗುವಿನ ಶ್ವಾಸಕೋಶಗಳು ಇನ್ನೂ ಬೆಳೆಯುತ್ತಿರುತ್ತವೆ. ಅವರ ಉಸಿರಾಟದ ಪ್ರಮಾಣ ವಯಸ್ಕರಿಗಿಂತ ವೇಗವಾಗಿರುತ್ತದೆ. ಅಂದರೆ ಅವರು ತಮ್ಮ ದೇಹದ ತೂಕಕ್ಕೆ ಹೋಲಿಸಿದರೆ ಹೆಚ್ಚು ವಿಷವನ್ನು ಉಸಿರಾಡುತ್ತಾರೆ. ಚಿಕ್ಕ ಮಕ್ಕಳಿಗೆ ನಿಷ್ಕ್ರಿಯ ಧೂಮಪಾನ ವಿಶೇಷವಾಗಿ ಅಪಾಯಕಾರಿಯಾಗಿದೆ. ಈ ಹಾನಿಯು ತೀವ್ರವಾದ ಆಸ್ತಮಾ ದಾಳಿ, ಉಬ್ಬಸ, ಪುನರಾವರ್ತಿತ ಎದೆ ಸೋಂಕು ಮತ್ತು ನ್ಯುಮೋನಿಯಾ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಇದಕ್ಕೆ ಒಡ್ಡಿಕೊಳ್ಳುವುದರಿಂದ ದೀರ್ಘಕಾಲದ ಉಸಿರಾಟದ ಕಾಯಿಲೆ ಮತ್ತು ನಂತರದ ಜೀವನದಲ್ಲಿ ಶ್ವಾಸಕೋಶದ ಬೆಳವಣಿಗೆಯು ದುರ್ಬಲಗೊಳ್ಳುವ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ನಿಷ್ಕ್ರಿಯ ಧೂಮಪಾನಕ್ಕೆ ಒಳಗಾಗುವ ಮಕ್ಕಳಲ್ಲಿ ಉಸಿರಾಟದ ಸೋಂಕುಗಳು ಗಮನಾರ್ಹವಾಗಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವ ಮಗುವಿಗೆ ಮತ್ತೊಂದು ಪ್ರತಿಜೀವಕ ಅಥವಾ ಆಂಟಿಬಯೋಟಿಕ್‌ನ ಅಗತ್ಯವಿರುವುದಿಲ್ಲ. ಬದಲಿಗೆ ಅವರಿಗೆ ಶುದ್ಧ ಗಾಳಿಯ ಅಗತ್ಯವಿರುತ್ತದೆ.
ಈ ಅಪಾಯದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?:
ಈ ಪರಿಹಾರಕ್ಕೆ ಪ್ರಾಮಾಣಿಕ ಕುಟುಂಬ ಸಂಭಾಷಣೆಗಳು ಸಹ ಅಗತ್ಯವಾಗಿರುತ್ತದೆ. ಮಕ್ಕಳು ಹೆಚ್ಚಾಗಿ ವಯಸ್ಕರ ನಡವಳಿಕೆಯನ್ನು ನಕಲಿಸುತ್ತಾರೆ. ಧೂಮಪಾನವು ಸಾಮಾನ್ಯವಾಗಿರುವ ಮನೆಯು ಭವಿಷ್ಯದ ಅಭ್ಯಾಸಗಳನ್ನು ಸದ್ದಿಲ್ಲದೆ ರೂಪಿಸಬಹುದು. ನಾಟಕೀಯ ಭರವಸೆಗಳಿಗಿಂತ ಇಲ್ಲಿ ಸಣ್ಣ ನಿರ್ಧಾರಗಳು ಮುಖ್ಯ. ಮನೆಯ ಹೊರಗೆ ಧೂಮಪಾನ ಮಾಡುವುದು, ಧೂಮಪಾನದ ನಂತರ ಕೈ ತೊಳೆಯುವುದು ಮತ್ತು ಬಟ್ಟೆ ಬದಲಾಯಿಸುವುದು, ಮಕ್ಕಳ ಬಳಿ ಎಂದಿಗೂ ಧೂಮಪಾನ ಮಾಡದಿರುವುದು, ಧೂಮಪಾಣದ ಅಭ್ಯಾಸವಿದ್ದರೆ ಆ ಚಟದಿಂದ ಹೊರ ಬರುವ ಪ್ರಯತ್ನ ಮಾಡುವುದರಿಂದ ಧೂಮಪಾನದಿಂದಾಗುವ ಹಾನಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಮನೆಯೊಳಗಿನ ಶುದ್ಧ ಗಾಳಿ ಮಗುವಿಗೆ, ಆಹಾರ, ನೀರು ಮತ್ತು ನಿದ್ರೆಯಷ್ಟೇ ಮೂಲಭೂತವಾಗಿದೆ. ಏಕೆಂದರೆ ಮಕ್ಕಳು ತಾವು ಉಸಿರಾಡುವ ಗಾಳಿಯನ್ನು ಆರಿಸಿಕೊಳ್ಳುವುದಿಲ್ಲ. ಮನೆಯ ಹಿರಿಯರು ಅದನ್ನು ಅವರಿಗಾಗಿ ಆರಿಸಿಕೊಳ್ಳುತ್ತಾರೆ.
ನಿಜವಾದ ರಕ್ಷಣೆ ಎಂದರೆ ಹೊಗೆರಹಿತ ಮನೆ:
ತಜ್ಞರು ಹೇಳುವಂತೆ ಭಾಗಶಃ ಕ್ರಮಗಳು ಕೆಲಸ ಮಾಡುವುದಿಲ್ಲ. ಏರ್ ಫ್ರೆಶ್ನರ್‌ಗಳು ತಂಬಾಕು ವಿಷವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಫ್ಯಾನ್‌ಗಳು ಹೊಗೆಯನ್ನು ಸುತ್ತಲೂ ಪಸರಿಸಿ ಬಿಡುತ್ತವೆ. ಬೇರೆ ಕೋಣೆಗೆ ಹೋಗಿ ಧೂಮಪಾನ ಮಾಡುವುದು ಕೂಡಾ ಪರಿಹಾರವಾಗುವುದಿಲ್ಲ. ಮನೆ ಮತ್ತು ವಾಹನಗಳ ಒಳಗೆ ಸಂಪೂರ್ಣವಾಗಿ ಹೊಗೆ ಮುಕ್ತ ವಾತಾವರಣವನ್ನು ಸೃಷ್ಟಿಸುವುದು ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ. ಧೂಮಪಾನ ಮಾಡುವ ಪೋಷಕರು ಮನೆಯಲ್ಲಿ ಮತ್ತು ಕಾರಿನಲ್ಲಿ ಸಂಪೂರ್ಣವಾಗಿ ಹೊಗೆ ಮುಕ್ತ ವಾತಾವರಣವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications