ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ: ಶೇ. 80ರಷ್ಟು ಶಾಲೆಗಳಲ್ಲಿಲ್ಲ ಶುದ್ಧ ಕುಡಿಯುವ ನೀರು

ರಾಜ್ಯಾದ್ಯಂತ ಇಂದು(ಜೂನ್ 1) ಶಾಲೆಗಳು ಆರಂಭವಾಗುತ್ತವೆ. ಬೇಸಿಗೆ ರಜೆಯ ಮಜಾ ಮಾಡಿರುವ ಮಕ್ಕಳು ಈಗ ಶಾಲೆಯ ಕಡೆ ಮುಖಮಾಡಬೇಕಿದೆ. ಆದರೆ ಈ ಸಂದರ್ಭದಲ್ಲಿ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯಗಳೇ ಇಲ್ಲ ಎನ್ನುವುದು, ಮಕ್ಕಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿವೆ. ಶೇ. 80ರಷ್ಟು ಶಾಲೆಗಳಲ್ಲಿ ಕನಿಷ್ಠ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಅಗತ್ಯ ಶೌಚಾಲಯಗಳಿಲ್ಲದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.

ಆಘಾತಕಾರಿ ಅಂಕಿ- ಅಂಶ ಬಯಲು

ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ, ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸ್ಥಿತಿ ಕರುಣಾಜನಕವಾಗಿದೆ. ರಾಜ್ಯದಲ್ಲಿ ಒಟ್ಟು 46,460 ಸರ್ಕಾರಿ ಶಾಲೆಗಳಿದ್ದು, ಈ ಪೈಕಿ 39,478 ಶಾಲೆಗಳಲ್ಲಿ ವಿಶೇಷ ಚೇತನ ಸ್ನೇಹಿ ಶೌಚಾಲಯಗಳಿಲ್ಲ. 4,755 ಶಾಲೆಗಳಿಗೆ ಕಾಂಪೌಂಡ್ ಸೌಲಭ್ಯವಿಲ್ಲ.

Karnataka Schools

ಇನ್ನು ಹೆಣ್ಣುಮಕ್ಕಳಿಗೆ 701 ಹಾಗೂ ಗಂಡುಮಕ್ಕಳಿಗೆ 2,039 ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಗಳಿಲ್ಲ. 606 ಶಾಲೆಗಳಿಗೆ ಸ್ವಂತ ಕಟ್ಟಡವೇ ಇಲ್ಲದಿದ್ದರೆ, 630 ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಮರೀಚಿಕೆಯಾಗಿದೆ. ಅಚ್ಚರಿಯೆಂದರೆ 170 ಶಾಲೆಗಳಲ್ಲಿ ಶೌಚಾಲಯವೇ ಇಲ್ಲ, ಮತ್ತು 61 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ. ಇದರ ಜೊತೆಗೆ ಬರೋಬ್ಬರಿ 57,706 ಶಿಕ್ಷಕರ ಕೊರತೆಯೂ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿದೆ.

ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿ ವರ್ಷವೂ ಸರ್ಕಾರ ಒಂದಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಈ ಅನುದಾನ ಎಲ್ಲಿಗೂ ಸಾಕಾಗುತ್ತಿಲ್ಲ. ಪ್ರಸ್ತುತ 100-150 ಮಕ್ಕಳಿಗೆ ಒಂದರಂತೆ ಮಾತ್ರ ಶೌಚಾಲಯವಿದ್ದು, ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳು ಬಯಲು ಶೌಚಾಲಯವನ್ನೇ ಅವಲಂಬಿಸುವಂತಾಗಿದೆ ಅಥವಾ ಶೌಚಕ್ಕೆಂದು ನೇರವಾಗಿ ಮನೆಗೇ ಓಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಬೋರ್‌ವೆಲ್ ನೀರನ್ನೇ ಮಕ್ಕಳು ಕುಡಿಯಬೇಕಾದ ಅನಿವಾರ್ಯತೆ ಇದೆ. ಮಳೆಗಾಲ ಬಂದರೆ ಸೋರುವ ಕೊಠಡಿಗಳಲ್ಲೇ ಮಕ್ಕಳ ಕಲಿಕೆ ಸಾಗಬೇಕಿದೆ.

ದಾನಿಗಳತ್ತ ಸರ್ಕಾರದ ಚಿತ್ತ

ಶಾಲೆಗಳ ಮೂಲಸೌಕರ್ಯ ಕೊರತೆ ನೀಗಿಸಲು 2025-26ನೇ ಸಾಲಿನಲ್ಲಿ ಸರ್ಕಾರ ಕೊಠಡಿ ದುರಸ್ತಿಗೆ 100 ಕೋಟಿ ರೂ. ಹಾಗೂ ಶೌಚಾಲಯ ನಿರ್ಮಾಣಕ್ಕೆ 90 ಕೋಟಿ ರೂ. ಮೀಸಲಿಟ್ಟಿದೆ. ಈ ಕ್ರಿಯಾಯೋಜನೆಗೆ ಅನುಮೋದನೆಯೂ ಸಿಕ್ಕಿದೆ. ಆದರೆ, 46 ಸಾವಿರಕ್ಕೂ ಹೆಚ್ಚು ಶಾಲೆಗಳ ಲಕ್ಷಕ್ಕೂ ಮೀರಿದ ಸಮಸ್ಯೆಗಳ ದುರಸ್ತಿಗೆ ಈ ಮೊತ್ತ ಏನೇನೂ ಸಾಲದು. ಇದೇ ಕಾರಣಕ್ಕೆ ಇತ್ತೀಚೆಗಷ್ಟೇ (ಮೇ 25ರಂದು) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, "ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕೆ ಕಾಯದೆ ಸಾರ್ವಜನಿಕರು ಮುಕ್ತವಾಗಿ ಕೈಜೋಡಿಸಬೇಕು. ಹಳೆ ವಿದ್ಯಾರ್ಥಿಗಳು, ಉದ್ಯಮಿಗಳು ದಾನಿಗಳು ದೇಣಿಗೆ ನೀಡಬೇಕು" ಎಂದು ಕರೆ ನೀಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗೂ ಗ್ರಾಸವಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ, ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೌಚಾಲಯ, ಕುಡಿಯುವ ನೀರು ಸೇರಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಅವರಿಂದ ಕೊರತೆಗಳ ಪಟ್ಟಿ ಪಡೆದು ಜಿಲ್ಲಾ ಪಂಚಾಯತ್ ಹಾಗೂ ಖಾಸಗಿ ಕಂಪನಿಗಳ ಸಿಎಸ್‌ಆರ್ (CSR) ಅನುದಾನ ಬಳಸಿ ಮಕ್ಕಳಿಗೆ ಸೂಕ್ತ ಓದಿನ ವ್ಯವಸ್ಥೆ ಕಲ್ಪಿಸಲು ಶ್ರಮಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದಾಗ್ಯೂ, ದಾನಿಗಳ ಮೇಲೆಯೇ ಜವಾಬ್ದಾರಿ ಹಾಕದೆ ಸರ್ಕಾರವೇ ಹೆಚ್ಚಿನ ಆಸಕ್ತಿ ವಹಿಸಿ ಅನುದಾನ ಒದಗಿಸಬೇಕು ಎಂಬುದು ಪೋಷಕರ ಮತ್ತು ಸಾರ್ವಜನಿಕರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+