ಡಿಕೆಶಿ ಪ್ರಮಾಣವಚನಕ್ಕೂ ಮುನ್ನವೇ ಶುರುವಾಯ್ತು ಡಿಸಿಎಂ ರೇಸ್; ಲಿಂಗಾಯತ, ದಲಿತ ನಾಯಕರಿಂದ ಭಾರೀ ಒತ್ತಡ
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲು ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಾಗಿ ಭಾರಿ ಪೈಪೋಟಿ ಶುರುವಾಗಿವೆ. ಸಿದ್ದರಾಮಯ್ಯ ಅವರ ನಾಯಕತ್ವದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಮಾತ್ರ ಏಕೈಕ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಈಗ ಸಿಎಂ ಕುರ್ಚಿ ಬದಲಾಗುತ್ತಿದ್ದಂತೆ, ಪ್ರಮುಖ ಸಮುದಾಯಗಳ ನಾಯಕರು ತಮಗೂ ಡಿಸಿಎಂ ಹುದ್ದೆ ಬೇಕು ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ.
ಲಿಂಗಾಯತ ಸಮುದಾಯದಿಂದ ಈಶ್ವರ್ ಖಂಡ್ರೆ ಪರ ಬ್ಯಾಟಿಂಗ್
ಪ್ರಮುಖವಾಗಿ ಲಿಂಗಾಯತ ಮತ್ತು ದಲಿತ ಸಮುದಾಯಗಳ ನಾಯಕರು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ ನಾಯಕತ್ವಕ್ಕೆ ಹೊಸ ತಲೆನೋವು ತಂದಿಟ್ಟಿದ್ದಾರೆ. ಪ್ರಭಾವಿ ಲಿಂಗಾಯತ ಸಮುದಾಯದ ಹಲವು ಮಠಾಧೀಶರು ಮತ್ತು ಶ್ರೀಗಳು ಒಟ್ಟಾಗಿ, ಸದ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಕಟ್ಟುನಿಟ್ಟಿನ ಒತ್ತಾಯ ಮಾಡಿದ್ದಾರೆ. ಬೀದರ್ ಮೂಲದ ಈಶ್ವರ್ ಖಂಡ್ರೆ ಅವರು ಲಿಂಗಾಯತ ಸಮುದಾಯದ ಅತ್ಯುನ್ನತ ಸಂಸ್ಥೆಯಾದ 'ಅಖಿಲ ಭಾರತ ವೀರಶೈವ ಮಹಾಸಭಾ'ದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಇವರ ಪುತ್ರ ಸಾಗರ್ ಖಂಡ್ರೆ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

"ಕಳೆದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವು ಕಾಂಗ್ರೆಸ್ ಅನ್ನು ಕೈಹಿಡಿದಿದ್ದರಿಂದಲೇ ಸಮುದಾಯದಿಂದ ಬರೋಬ್ಬರಿ 36 ಶಾಸಕರು ಆಯ್ಕೆಯಾಗಿದ್ದಾರೆ. ಮಹಾಸಭಾದ ಅಧ್ಯಕ್ಷನಾಗಿ, ನಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ನಾನು ಹೈಕಮಾಂಡ್ ಸೈನಿಕನಾಗಿ ವಿನಂತಿಸಿದ್ದೇನೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಲು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ.
ದಲಿತ ಸಮುದಾಯದಿಂದ ಜಿ. ಪರಮೇಶ್ವರ್ ಪರ ಪ್ರತಿಭಟನೆ
ಮತ್ತೊಂದೆಡೆ ಗೃಹ ಸಚಿವ ಹಾಗೂ ಹಿರಿಯ ದಲಿತ ನಾಯಕ ಡಾ. ಜಿ.ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡಲೇಬೇಕು ಎಂದು ಅವರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಯ ಅವಕಾಶವನ್ನು ಕೂದಲೆಳೆಯಲ್ಲಿ ಕಳೆದುಕೊಂಡಿರುವ ಪರಮೇಶ್ವರ್ ಅವರಿಗೆ ಈ ಬಾರಿಯಾದರೂ ಡಿಸಿಎಂ ಸ್ಥಾನ ನೀಡಬೇಕು ಎಂಬುದು ಬೆಂಬಲಿಗರ ವಾದವಾಗಿದೆ. ಅಂದ ಹಾಗೆ ಪರಮೇಶ್ವರ್ ಅವರು 2018-19ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಕೆ.ಹೆಚ್.ಮುನಿಯಪ್ಪ ಬೆಂಬಲಿಗರಿಂದ ವಿಮಾನ ನಿಲ್ದಾಣದಲ್ಲೇ ಹೈಡ್ರಾಮಾ
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೂ ಡಿಸಿಎಂ ಹುದ್ದೆ ನೀಡಬೇಕು ಎಂದು ಅವರ ಬೆಂಬಲಿಗರು ಹೈಕಮಾಂಡ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಈ ಇಬ್ಬರು ನಾಯಕರನ್ನು ವಿಮಾನ ನಿಲ್ದಾಣದಲ್ಲೇ ಮುನಿಯಪ್ಪ ಬೆಂಬಲಿಗರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಹೈಕಮಾಂಡ್ ನಿರ್ಧಾರವೇನು?
ಜಾತಿ ಸಮೀಕರಣಗಳ ಆಧಾರದ ಮೇಲೆ ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನು ಕೆಲವು ನಾಯಕರ ಹೆಸರುಗಳೂ ಮುಂಚೂಣಿಯಲ್ಲಿವೆ. ಆದರೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಕುರಿತು ಹೈಕಮಾಂಡ್‌ಗೆ ಇನ್ನೂ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ" ಎಂದು ಹೇಳಿದ್ದಾರೆ. ಸಂಪುಟ ಪುನರ್‌ರಚನೆ ಮತ್ತು ಸಚಿವ ಸ್ಥಾನ ಉಳಿಸಿಕೊಳ್ಳುವ ಆತಂಕದಲ್ಲಿ ಹಲವು ಸಚಿವರು ಹಾಗೂ ಆಕಾಂಕ್ಷಿಗಳು ಈಗಾಗಲೇ ದೆಹಲಿ ತಲುಪಿದ್ದಾರೆ.
ನೂತನ ಸಿಎಂ ಆಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಮತ್ತು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಇಬ್ಬರೂ ಇಂದು (ಸೋಮವಾರ) ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಮೂಲಗಳ ಪ್ರಕಾರ ಜೂನ್ 3ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯವರ ಜೊತೆಗೆ ಸುಮಾರು 11 ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದು, ಉಳಿದ ಸಂಪುಟ ಸ್ಥಾನಗಳನ್ನು ಹಾಗೂ ಡಿಸಿಎಂ ಸಸ್ಪೆನ್ಸ್ ಅನ್ನು ಆನಂತರವಷ್ಟೇ ಬಗೆಹರಿಸಲಾಗುವುದು ಎಂದು ಹೇಳಲಾಗುತ್ತಿದೆ.













Click it and Unblock the Notifications