ಅಮೆರಿಕದ ಕಾನೂನು ಸಂಕಷ್ಟ ಮುಗಿದಿದೆ, ಎಐ ಆಧಾರಿತ ಮೂಲಸೌಕರ್ಯಗಳ ಮೇಲೆ ಭಾರೀ ಹೂಡಿಕೆ: ಗೌತಮ್ ಅದಾನಿ
ಬಿಲಿಯನೇರ್ ಗೌತಮ್ ಅದಾನಿ ಅವರು, ಅದಾನಿ ಗ್ರೂಪ್ ಈಗ ಅಮೆರಿಕಾದಲ್ಲಿದ್ದ ತನ್ನ ಎಲ್ಲಾ ಕಾನೂನು ಸವಾಲುಗಳನ್ನು ದಾಟಿ ಮುಂದೆ ಬಂದಿದೆ ಎಂದು ಹೇಳಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಬೆಳವಣಿಗೆಯಿಂದ ಸೃಷ್ಟಿಯಾಗುತ್ತಿರುವ ಭಾರಿ ಬೇಡಿಕೆಯ ಲಾಭವನ್ನು ಪಡೆಯಲು ತಮ್ಮ ಸಂಸ್ಥೆಯು ಸಜ್ಜಾಗಿದೆ ಎಂದಿರುವ ಅವರು, ಇಂಧನ (ಶಕ್ತಿ), ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಮತ್ತಷ್ಟು ವೇಗಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಷೇರುದಾರರಿಗೆ ಬರೆದಿರುವ ತಮ್ಮ ವಾರ್ಷಿಕ ಪತ್ರದಲ್ಲಿ ಈ ವಿಷಯ ಹಂಚಿಕೊಂಡಿರುವ ಅದಾನಿ, ಕಳೆದ ವರ್ಷ ತಮ್ಮ ಸಮೂಹವು ತೀವ್ರ ನಿಗಾ ಮತ್ತು ತಪಾಸಣೆಗಳಿಗೆ ಒಳಗಾಗಿದ್ದರೂ, ವ್ಯವಹಾರ ವಿಸ್ತರಣೆಯ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಅಮೆರಿಕಾದಲ್ಲಿ ಗ್ರೂಪ್ ಎದುರಿಸುತ್ತಿದ್ದ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿಷಯಗಳು ಈಗ "ನಮ್ಮಿಂದ ದೂರವಾಗಿವೆ". ಹೀಗಾಗಿ ಸಂಸ್ಥೆಯು ತನ್ನ ಮುಂದಿನ ಹಂತದ ಬೆಳವಣಿಗೆಯ ಕಡೆಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಅವರು ಆ ಪತ್ರದಲ್ಲಿ ಬರೆದಿದ್ದಾರೆ.

ಸಂಸ್ಥೆಯು ಕಾರ್ಪೊರೇಟ್ ಆಡಳಿತ ಮತ್ತು ನಿಯಂತ್ರಕ ನಿಯಮಗಳ ಕುರಿತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಕಠಿಣ ಸಮಯದಲ್ಲಿ, ತನ್ನ ಪ್ರಮುಖ ಕಂಪನಿಯಾದ 'ಅದಾನಿ ಎಂಟರ್‌ಪ್ರೈಸಸ್' ಇತ್ತೀಚೆಗೆ ಹಮ್ಮಿಕೊಂಡಿದ್ದ ₹24,930 ಕೋಟಿ ಮೌಲ್ಯದ ರೈಟ್ಸ್ ಇಶ್ಯೂ ಯಶಸ್ವಿಯಾಗಿರುವುದನ್ನು ಗೌತಮ್ ಅದಾನಿ ಉಲ್ಲೇಖಿಸಿದ್ದಾರೆ. ಹೂಡಿಕೆದಾರರು ತಮ್ಮ ಸಮೂಹದ ಮೇಲೆ ಇಟ್ಟಿರುವ ಭರವಸೆ ಮತ್ತು ನಂಬಿಕೆಗೆ ಇದು ಅತ್ಯುತ್ತಮ ಸಾಕ್ಷಿಯಾಗಿದೆ ಎಂದಿದ್ದಾರೆ.
ಜಗತ್ತು ಮತ್ತಷ್ಟು ಛಿದ್ರಗೊಂಡ, ಸಂಕೀರ್ಣವಾದ ಇಂಧನ ಭದ್ರತಾ ಮಾದರಿಗಳು ದೇಶದ ಪ್ರಮುಖ ಕಾರ್ಯತಂತ್ರಗಳ ಕೇಂದ್ರಬಿಂದುವಾದ ಮತ್ತು ತಂತ್ರಜ್ಞಾನ ಹಾಗೂ ರಾಷ್ಟ್ರದ ಸಾರ್ವಭೌಮತ್ವ ಒಂದಕ್ಕೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡ ವರ್ಷವದು. ಇಂತಹ ಸಂದರ್ಭದಲ್ಲೂ ಅದಾನಿ ಗ್ರೂಪ್ ಒಂದು ಅಚಲವಾದ ನಂಬಿಕೆಗೆ ಕಟ್ಟುಬಿದ್ದಿತ್ತು, ಅದೇನೆಂದರೆ, ಭಾರತದ ಭವಿಷ್ಯ ಕಾಯಲು ಸಾಧ್ಯವಿಲ್ಲ ಎಂದು ಅದಾನಿ ಹೇಳಿದ್ದಾರೆ.
ಉಳಿದವರು ಚರ್ಚೆಗಳಲ್ಲಿ ಮುಳುಗಿದ್ದಾಗ, ನಮ್ಮ ಗ್ರೂಪ್ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು. ಇಂಧನ, ಸಾರಿಗೆ, ಲಾಜಿಸ್ಟಿಕ್ಸ್, ಯುಟಿಲಿಟಿಸ್ (ಸಾರ್ವಜನಿಕ ಸೌಲಭ್ಯಗಳು) ಮತ್ತು ಕೈಗಾರಿಕಾ ಉತ್ಪಾದನಾ ವಲಯಗಳಲ್ಲಿ ಜಗತ್ತಿನ ಅತ್ಯಂತ ಸಂಯೋಜಿತ ಮೂಲಸೌಕರ್ಯ ವೇದಿಕೆಯಾಗಿ ತನ್ನ ಪ್ರಯಾಣವನ್ನು ಮುಂದುವರಿಸಿತು. ಬಂದರು ವಲಯದಿಂದ ಇಂಧನ ವಲಯದವರೆಗೆ ಹರಡಿರುವ ಈ ಬೃಹತ್ ಸಮೂಹಕ್ಕೆ ಈ ಪ್ರಗತಿಯು ಅಷ್ಟು ಸುಲಭವಾಗಿ ಸಿಗಲಿಲ್ಲ.
ಇದು ಅಸಾಮಾನ್ಯವಾದ ತಪಾಸಣೆ ಮತ್ತು ತೀವ್ರ ನಿಗಾದ ಮಧ್ಯೆಯೇ ಸಾಧ್ಯವಾಯಿತು. ಆದರೂ ನಾವು ಬಗ್ಗಲಿಲ್ಲ. ನಾವು ನಮ್ಮ ಕೆಲಸವನ್ನು ನಿಲ್ಲಿಸಲಿಲ್ಲ ಎಂದು ತಿಳಿಸಿದ್ದಾರೆ. ಏಕೆಂದರೆ ನಮ್ಮನ್ನು ಯಾವಾಗಲೂ ಗುರುತಿಸುವುದು ನಮ್ಮ ಸುತ್ತಲಿರುವ ಗದ್ದಲದಿಂದಲ್ಲ, ಬದಲಿಗೆ ನಾವು ಅದಕ್ಕೆ ನೀಡುವ ಗಟ್ಟಿಯಾದ ಪ್ರತಿಕ್ರಿಯೆಯಿಂದ. ಸವಾಲಿನ ತೀವ್ರತೆಯಿಂದಲ್ಲ, ನಮ್ಮ ಉದ್ದೇಶದ ಸ್ಪಷ್ಟತೆಯಿಂದ. ಟೀಕೆಗಳಿಂದಲ್ಲ, ನಾವು ನಿರಂತರವಾಗಿ ನಂಬಿಕೊಂಡು ಬಂದಿರುವ ರಾಷ್ಟ್ರ ನಿರ್ಮಾಣದ ಕೆಲಸದಿಂದ ಎಂದಿದ್ದಾರೆ.
2024ರ ಕೊನೆಯಿಂದಲೂ ತಮ್ಮ ಸಮೂಹಕ್ಕೆ ತಲೆನೋವಾಗಿದ್ದ ಕಾನೂನು ಮತ್ತು ನಿಯಂತ್ರಕ ಸವಾಲುಗಳಿಗೆ ಗೌತಮ್ ಅದಾನಿ ಪೂರ್ಣವಿರಾಮ ಇಟ್ಟಿದ್ದಾರೆ. "ಅಮೆರಿಕಾದ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿಷಯಗಳು ಈಗ ಮುಗಿದುಹೋಗಿವೆ. ಇದು ನಮ್ಮ ಮುಂದಿನ ಹಂತದ ಬೆಳವಣಿಗೆಯತ್ತ ಹೊಸ ನಂಬಿಕೆ ಮತ್ತು ಆತ್ಮವಿಶ್ವಾಸದೊಂದಿಗೆ ಗಮನ ಹರಿಸಲು ನಮಗೆ ದಾರಿ ಮಾಡಿಕೊಟ್ಟಿದೆ" ಎಂದು ಹೇಳಿದ್ದಾರೆ.
ತಮ್ಮ ನವೀಕರಿಸಬಹುದಾದ ಇಂಧನ ವ್ಯವಹಾರಕ್ಕೆ ಸಂಬಂಧಿಸಿದಂತೆ ಲಂಚದ ಆರೋಪಗಳ ಮೇಲೆ ಅಮೆರಿಕಾ ಅಧಿಕಾರಿಗಳಿಂದ ಅದಾನಿ ಗ್ರೂಪ್ ತನಿಖೆಯನ್ನು ಎದುರಿಸಿತ್ತು. ಆದರೆ ಅದಾನಿ ಸಮೂಹ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿತ್ತು. ಸದ್ಯ ಅಮೆರಿಕಾದ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಷನ್ (SEC) ಈ ವಿಷಯದಲ್ಲಿ ಅದಾನಿ ಗ್ರೂಪ್ ಜೊತೆ ಒಂದು ಇತ್ಯರ್ಥಕ್ಕೆ ಬಂದಿದ್ದರೆ, ಅತ್ತ ಅಮೆರಿಕಾದ ನ್ಯಾಯಾಂಗ ಇಲಾಖೆಯು (DOJ) ಸಂಸ್ಥೆಯ ಸಂಸ್ಥಾಪಕರು ಮತ್ತು ಇತರರ ಮೇಲಿನ ಎಲ್ಲ ಆರೋಪಗಳನ್ನು ಕೈಬಿಡಲು ಮುಂದಾಗಿದೆ.
ಸಂಸ್ಥೆಯ ಮುನ್ನಡೆಯ ಕಾರ್ಯತಂತ್ರವನ್ನು ವಿವರಿಸಿದ ಅದಾನಿ, ತಾವು ನಂಬಿರುವ ಎರಡು ಪ್ರಮುಖ ಬೆಳವಣಿಗೆಯ ಅಂಶಗಳಾದ-'ಮೂಲಸೌಕರ್ಯ' ಮತ್ತು ಎಐ ಅನ್ನು ಕೇಂದ್ರೀಕರಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ವೇಗದ ಅಳವಡಿಕೆಗೆ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದನೆ, ಪ್ರಸರಣ ಜಾಲಗಳು, ಡೇಟಾ ಸೆಂಟರ್‌ಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳ ಹೂಡಿಕೆಯ ಅಗತ್ಯವಿದೆ ಎಂದು ಅವರು ವಾದಿಸಿದ್ದಾರೆ.
ಎಐ ಯೋಚಿಸುವುದಕ್ಕಿಂತ ಮುಂಚೆ, ಅಲ್ಲಿ ಇಂಧನ ಹರಿಯಬೇಕು ಎಂದು ಮಾರ್ಮಿಕವಾಗಿ ಹೇಳಿರುವ ಅದಾನಿ, ಭವಿಷ್ಯದ ತಂತ್ರಜ್ಞಾನದ ನಾಯಕತ್ವವು ಕೇವಲ ಸಾಫ್ಟ್‌ವೇರ್ ಮತ್ತು ಡಿಜಿಟಲ್ ಆವಿಷ್ಕಾರಗಳ ಮೇಲಷ್ಟೇ ಅಲ್ಲದೆ, ಭೌತಿಕ ಮೂಲಸೌಕರ್ಯಗಳ ಮೇಲೂ ಅಷ್ಟೇ ಪ್ರಮಾಣದಲ್ಲಿ ನಿರ್ಧರಿತವಾಗಿರುತ್ತದೆ ಎಂಬ ತಮ್ಮ ನಿಲುವನ್ನು ತಿಳಿಸಿದ್ದಾರೆ.
ಕಳೆದ 2025-26ರ ಹಣಕಾಸು ವರ್ಷದಲ್ಲಿ ಅದಾನಿ ಸಮೂಹವು ಬರೊಬ್ಬರಿ ₹1.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದೆ. ಇದು ಇಂಧನ, ಬಂದರುಗಳು, ವಿಮಾನ ನಿಲ್ದಾಣಗಳು, ಡೇಟಾ ಸೆಂಟರ್‌ಗಳು ಮತ್ತು ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸಲು ಸಂಸ್ಥೆಯು ಕೈಗೊಂಡ ಅತ್ಯಂತ ದೊಡ್ಡ ವಾರ್ಷಿಕ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಪ್ರಮುಖ ಮೈಲಿಗಲ್ಲುಗಳು:
ಅದಾನಿ ಗ್ರೀನ್: ಈ ವರ್ಷ 5.1 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು, ಇದರ ಒಟ್ಟು ಕಾರ್ಯಾಚರಣಾ ಸಾಮರ್ಥ್ಯ 19 ಗಿಗಾವ್ಯಾಟ್‌ಗಿಂತಲೂ ಅಧಿಕವಾಗಿದೆ. ಇದೇ ವೇಳೆ 'ಅದಾನಿ ನ್ಯೂ ಇಂಡಸ್ಟ್ರೀಸ್' 5 ಮೆಗಾವ್ಯಾಟ್‌ನ ಗ್ರೀನ್ ಹೈಡ್ರೋಜನ್ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ.
ಅದಾನಿ ಎನರ್ಜಿ ಸೊಲ್ಯೂಷನ್ಸ್: ತನ್ನ ವಿದ್ಯುತ್ ಪ್ರಸರಣದ ಆರ್ಡರ್ ಬುಕ್ ಅನ್ನು ₹71,779 ಕೋಟಿಗೆ ಹೆಚ್ಚಿಸಿಕೊಂಡಿದೆ.
ಅದಾನಿ ಪವರ್: 2032ರ ಹಣಕಾಸು ವರ್ಷದ ವೇಳೆಗೆ ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 42 ಗಿಗಾವ್ಯಾಟ್‌ಗೆ ಏರಿಸುವ ಗುರಿ ಹೊಂದಿದ್ದು, ಇದಕ್ಕಾಗಿ ₹2 ಲಕ್ಷ ಕೋಟಿಗಿಂತಲೂ ಹೆಚ್ಚಿನ ವಿಸ್ತರಣಾ ಯೋಜನೆಯ ಕೆಲಸಗಳನ್ನು ಮುಂದುವರಿಸಿದೆ.
ಡಿಜಿಟಲ್ ಮೂಲಸೌಕರ್ಯ: 2030ರ ವೇಳೆಗೆ 2 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಪ್ಲಾಟ್‌ಫಾರ್ಮ್ ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಇದಲ್ಲದೆ, ವಿಶಾಖಪಟ್ಟಣದಲ್ಲಿ ಬೃಹತ್ ಪ್ರಮಾಣದ ಡೇಟಾ ಸೆಂಟರ್ ಯೋಜನೆಗಾಗಿ ಗೂಗಲ್ (Google) ಸಂಸ್ಥೆಯೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.
ಅದಾನಿ ಪೋರ್ಟ್ಸ್ ಮತ್ತು ವಿಮಾನ ನಿಲ್ದಾಣ: ಅದಾನಿ ಬಂದರುಗಳು ಈ ವರ್ಷ 500 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಸರಕುಗಳನ್ನು ನಿರ್ವಹಿಸಿವೆ. ಇತ್ತ ವಿಮಾನ ನಿಲ್ದಾಣ ವಿಭಾಗವು 'ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ' ಮತ್ತು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಅನ್ನು ಕಾರ್ಯಾಚರಣೆಗೆ ತಂದಿದೆ.
2025-26ರ ಹಣಕಾಸು ವರ್ಷದಲ್ಲಿ, ಅದಾನಿ ಸಮೂಹದ ಎಲ್ಲ ಕಂಪನಿಗಳ ಒಟ್ಟು ಆದಾಯವು ₹2.92 ಲಕ್ಷ ಕೋಟಿಗೆ ತಲುಪಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ. 7.4 ರಷ್ಟು ಹೆಚ್ಚಾಗಿದೆ. ಹಾಗೆಯೇ ಸಂಸ್ಥೆಯ ನಿವ್ವಳ ಲಾಭವು (Profit after tax) ಶೇ. 13.9 ರಷ್ಟು ಏರಿಕೆಯಾಗಿ ₹46,377 ಕೋಟಿಗೆ ತಲುಪಿದೆ. ಭವಿಷ್ಯದ ದಿನಗಳನ್ನು ಅವಲೋಕಿಸಿರುವ ಅದಾನಿ, "ನಮ್ಮ ಗ್ರೂಪ್‌ಗೆ ಈಗ ಬಂಡವಾಳದ ಕೊರತೆಯ ಸವಾಲಾಗಿ ಉಳಿದಿಲ್ಲ. ಬದಲಿಗೆ, ಭಾರತದ ಮೂಲಸೌಕರ್ಯ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಯೋಜನೆಗಳನ್ನು ಎಷ್ಟು ವೇಗವಾಗಿ ಜಾರಿಗೊಳಿಸುತ್ತೇವೆ ಎಂಬುದೇ ನಮ್ಮ ಮುಂದಿರುವ ನಿಜವಾದ ಸವಾಲು. ಮುಖ್ಯವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಭಾರಿ ಪ್ರಮಾಣದ ವಿದ್ಯುತ್ ಬಯಸುವ ಡಿಜಿಟಲ್ ಮೂಲಸೌಕರ್ಯಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ" ಎಂದಿದ್ದಾರೆ.












Click it and Unblock the Notifications