ಭಟ್ಕಳ; ಆಟೋ ಓಡಿಸಿ ಅಭಿಮಾನಿಯ ಆಸೆ ಪೂರೈಸಿದ ಶಾಸಕ
ಕಾರವಾರ, ಅಕ್ಟೋಬರ್ 9: ಸಾಧಾರಣವಾಗಿ ಜನಪ್ರತಿನಿಧಿಗಳು ಜನರ ಕೈಗೆ ಸಿಗುವುದೇ ಕಷ್ಟ. ಆದರೆ, ಭಟ್ಕಳದ ಶಾಸಕ ಸುನೀಲ ನಾಯ್ಕ ಅವರು ತಮ್ಮ ಅಭಿಮಾನಿಗಾಗಿ ಹೊಸ ಆಟೋ ರಿಕ್ಷಾ ಓಡಿಸಿ ಆತನ ಆಸೆ ಪೂರೈಸಿದ್ದಾರೆ.
ಶಾಸಕ ಸುನೀಲ್ ಅಭಿಮಾನಿ ಹಾಗೂ ತಾಲೂಕಿನ ಶಿರಾಲಿಯ ಆಟೋ ಚಾಲಕ ವೆಂಕಟೇಶ ನಾಯ್ಕ, ತಾನು ಖರೀದಿಸಿದ ಹೊಸ ಆಟೋ ರಿಕ್ಷಾವನ್ನು ಮೊದಲು ತಮ್ಮ ನೆಚ್ಚಿನ ಶಾಸಕ ಹಾಗೂ ನಾಯಕ ಸುನೀಲ ನಾಯ್ಕ ಅವರಿಂದಲೇ ಓಡಿಸಿಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಅದರಂತೆಯೇ ಅವರ ಬಳಿ ಬಂದ ಅಭಿಮಾನಿ ವೆಂಕಟೇಶ್ ನಾಯ್ಕ, ತಮ್ಮ ಬಯಕೆಯನ್ನು ಶಾಸಕರ ಮುಂದೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಮ್ಮತಿಸಿದ ಶಾಸಕ ಸುನೀಲ್, ಆಟೋ ಓಡಿಸಿ ಆತನ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ.

ವೆಂಕಟೇಶ, ಶಾಸಕರಿಂದ ಮೊದಲು ಚಾಲನೆ ನೀಡಿ ನಂತರ ಎಂದಿನಂತೆ ತಮ್ಮ ಆಟೋ ಬಾಡಿಗೆಗೆ ಖುಷಿಯಿಂದ ತೆರಳಿದ್ದಾರೆ. "ಓರ್ವ ಅಭಿಮಾನಿಯಲ್ಲಿ ಈ ರೀತಿಯ ಆಸೆಯಿರುವುದು ಸಂತಸ ತಂದಿದೆ. ಕೇವಲ ಅವರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಅಲ್ಲದೇ, ಅವರ ಆಸೆ, ಬಯಕೆಗೆ ಸ್ಪಂದಿಸಿದಲ್ಲಿ ಜನರೊಂದಿಗೆ ಬೆರೆಯಲು ಸಾಧ್ಯವಾಗಲಿದೆ. ಇದು ನನಗೆ ಹೊಸ ಅನುಭವ ತಂದಿದೆ" ಎಂದು ಶಾಸಕ ಸುನೀಲ ನಾಯ್ಕ ಅವರೂ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications