ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಂಡೇಲಿಯ ಕಾಳಿ ನದಿ ದಂಡೆಯಿಂದ ಬಾಲಕನ ಎಳೆದೊಯ್ದ ಮೊಸಳೆ

|
Google Oneindia Kannada News

ಕಾರವಾರ, ಅಕ್ಟೋಬರ್ 25: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಎಳೆದೊಯ್ದು ಹೋದ ಘಟನೆ ದಾಂಡೇಲಿ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ನಿವಾಸಿಯಾಗಿರುವ ಮೆಹಮೂದ್ ಅಲಿಮಿಯಾ ಗುಲ್ಬರ್ಗ ಎಂಬುವವರ ಮಗನಾದ 15 ವರ್ಷದ ಬಾಲಕ ಮೊಹಿನ್ ಮೆಹಮೂದ್ ಅಲಿಮಿಯಾ ಗುಲ್ಬರ್ಗ ಎಂಬತಾನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ನಡೆದಿದೆ.

ಈ ಘಟನೆ ವಿಚಾರ ಕಾಡ್ಗಿಚ್ಚಿನಂತೆ ಹರಡಿದ್ದು, ನದಿಯ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರ ತೊಡಗಿದ್ದಾರೆ. ಈ ಘಟನೆ ನಡೆದ ತಕ್ಷಣವೇ ಹತ್ತಿರದ ನಿವಾಸಿಯಾಗಿರುವ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

Karwar: 15-yr-old Dragged Into Kaali River By Crocodile, Missing In Dandeli

ವಿಷಯ ತಿಳಿದು ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆಯ ಪಿಎಸ್‌ಐ.ಆರ್. ಗಡ್ಡೇಕರ ಹಾಗೂ ಪೊಲೀಸ್ ಸಿಬ್ಬಂದಿಗಳು, ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸ್ಥಳೀಯರು ಎರಡ್ಮೂರು ತೆಪ್ಪದ ಮೂಲಕ ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇತ್ತ ಜಂಗಲ್ ಲಾಡ್ಜಸ್ ಹಾಗೂ ಗಣೇಶಗುಡಿ ರ್ಯಾಪ್ಟಿಂಗ್‌ನವರಿಗೆ ಮಾಹಿತಿ ನೀಡಿ ರ್ಯಾಪ್ಟ್ ಜೊತೆಗೆ ಸ್ಥಳಕ್ಕೆ ಕರೆಸಿ, ಅವರಿಂದಲೂ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಪ್ರವಾಸೋದ್ಯಮಿಗಳಾದ ಸ್ಟ್ಯಾನ್ಲಿ, ರವಿ ನಾಯಕ ಮೊದಲಾದವರ ತಂಡ ರ್ಯಾಪ್ಟ್ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸ್ಥಳದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ, ನಗರ ಸಭಾ ಸದಸ್ಯರುಗಳಾದ ಪ್ರೀತಿ ನಾಯರ್, ದಶರಥ ಬಂಡಿವಡ್ಡರ ಹಾಗೂ ನಗರದ ವಿವಿಧ ಸಂಘಟನೆಗಳ ಮುಖಂಡರುಗಳು ಮೊಕ್ಕಾಂ ಹೂಡಿದ್ದಾರೆ.

Karwar: 15-yr-old Dragged Into Kaali River By Crocodile, Missing In Dandeli

ಈಗಾಗಲೇ ಗಣೇಶಗುಡಿ ಕೆಪಿಸಿಯವರಿಗೆ ಮಾಹಿತಿ ನೀಡಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕುವರೆ ಘಂಟೆ ಸುಮಾರಿಗೆ ಎರಡು ಸಲ ಬಾಲಕನನ್ನು ಮೇಲಕ್ಕೆತ್ತಿ ನೀರಿನ ಕೆಳಗಡೆ ಮೊಸಳೆ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದೀಗ ಹಳಿಯಾಳ ರಸ್ತೆ, ಅಲೈಡ್ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ.

ನಗರದಲ್ಲಿ ಮೊದಲ ಪ್ರಕರಣ
ಮೊಸಳೆ ಬಾಲಕನನ್ನು ಎಳೆದುಕೊಂಡು ಹೋಗಿರುವುದು ದಾಂಡೇಲಿ ನಗರದಲ್ಲಿ ಇದು ಮೊದಲ ಪ್ರಕರಣವಾಗಿ ದಾಖಲಾಗಿದೆ. ಮಾಹಿತಿಯ ಪ್ರಕಾರ ಮೊಸಳೆ ಈವರೆಗೆ ನರಬಲಿಯನ್ನು ಪಡೆದುಕೊಂಡಿರಲಿಲ್ಲ. ಮೊಸಳೆ ಜೀವಂತವಾಗಿ ಯಾವುದನ್ನು ತಿನ್ನುವುದಿಲ್ಲ. ಕೊಳೆತ ನಂತರದಲ್ಲಿ ತಿನ್ನುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ. ಹಾಗಾಗಿ ಬಾಲಕನನ್ನು ಅವಿತಿಟ್ಟರಬಹುದೆಂದು ಶಂಕಿಸಲಾಗಿದೆ.

ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು
ಈಗಾಗಲೇ ನಗರಸಭೆಯಿಂದ ಬಹಳಷ್ಟು ಬಾರಿ ಇಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ದಾಂಡೇಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Recommended Video

Virat Kohli ಪಾಕಿಸ್ತಾನದ ಪಂದ್ಯ ಮುಗಿದಾದ ನಂತರ Rohit ಬಗ್ಗೆ ಹೇಳಿದ್ದೇನು | Oneindia Kannada

English summary
15-yr-old Dragged Into Kaali River By Crocodile, Missing at Dandeli of Uttara Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X