Channapatna By-Election: ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಜಮೀರ್ ಅಹಮದ್ ಅಚ್ಚರಿ ಹೇಳಿಕೆ!
ಚನ್ನಪಟ್ಟಣ ಕ್ಷೇತ್ರಕ್ಕೆ ತಾನೇ ಅಭ್ಯರ್ಥಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಆಗಲಿ, ಬೇರೆ ನಾಯಕರಾಗಲಿ ಯಾವ ಹೇಳಿಕೆಯನ್ನು ನೀಡಿಲ್ಲ. ಚನ್ನಪಟ್ಟಣ ಜೊತೆ ಶಿಗ್ಗಾವಿ ಮತ್ತು ಸಂಡೂರು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟಿಗೆ ಉಪಚುನಾವಣೆ ನಡೆಯಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿ ಎನ್ನಲಾಗಿದ್ದರೂ, ಉಳಿದ ಎರಡು ಕಡೆ ಯಾರು ಕಾಂಗ್ರೆಸ್ ಅಭ್ಯರ್ಥಿ ಎನ್ನುವ ಬಗ್ಗೆ ಸುಳಿವು ಸಿಕ್ಕಿಲ್ಲ, ಇದೀಗ ಸಚಿವ ಜಮೀರ್ ಅಹಮದ್ ಖಾನ್ ಶಿಗ್ಗಾವಿ ಉಪಚುನಾವಣೆಯಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಸತಿ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್, ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಾಗಿ ತಾವು ಟಿಕೆಟ್ ಕೇಳಿರುವುದ ಸತ್ಯ, ಇಲ್ಲಿ ಕಳೆದ ಐದು ಬಾರಿಯಿಂದಲೂ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಕೂಡ ಮುಸ್ಲಿಂ ಅಭ್ಯರ್ಥಿಗೆ ಕೊಡುವಂತೆ ಕೇಳಿದ್ದೇನೆ, ಆದರೆ ನಮ್ಮದು ಹೈಕಮಾಂಡ್ ಆಧಾರಿತ ಪಕ್ಷ, ಅವರು ತೀರ್ಮಾನ ಮಾಡಿದ್ದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.

ಹೈಕಮಾಂಡ್ ಹಾಕಿದ ಗೆರೆಯನ್ನು ನಾವು ಯಾವತ್ತೂ ದಾಟುವುದಿಲ್ಲ, ಐದು ಬಾರಿ ಇಲ್ಲಿ ಅಲ್ಪಸಂಖ್ಯಾರಿಗೆ ಟಿಕೆಟ್ ಕೊಟ್ಟಿದ್ದರೂ ಗೆದ್ದಿಲ್ಲ, ಈ ಬಗ್ಗೆ ಕೂಡ ಹೈಕಮಾಂಡ್ ಯೋಚನೆ ಮಾಡುತ್ತದೆ. ಈ ಬಾರಿ ಕೂಡ ಅಲ್ಪ ಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಭರವಸೆ ಕೊಟ್ಟಿದ್ದೇವೆ ಆದರೆ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು ಎಂದರು.
ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಭರವಸೆ ವ್ಯಕ್ತಪಡಿಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿಯವರು ಹಂಗಾಗುತ್ತೆ ಹಿಂಗಾಗುತ್ತೆ ಅಂತ ಕನಸು ಕಾಣುತ್ತಾ ಕೂತಿದ್ದಾರೆ, ಇವತ್ತು ನಾನು ಹೇಳುತ್ತಿದ್ದೇನೆ ಬರೆದಿಟ್ಟುಕೊಳ್ಳಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಾವು ಕನಿಷ್ಠ 30000 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಯಾರು ಅಭ್ಯರ್ಥಿ ಎಂದು ಕೇಳಿದ್ದಕ್ಕೆ ರಾಹುಲ್ ಗಾಂಧಿ ಅಭ್ಯರ್ಥಿ, ಸೋನಿಯಾ ಗಾಂಧಿ ಅಭ್ಯರ್ಥಿ, ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಭ್ಯರ್ಥಿ ಎಂದು ತಮಾಷೆ ಮಾಡಿದರು. ಅಲ್ಲಿ ಕಾಂಗ್ರೆಸ್ ಪಕ್ಷವಾಗಿ ಸ್ಪರ್ಧೆ ಮಾಡುತ್ತದೆ ಎಂದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.












Click it and Unblock the Notifications