ವರ್ಷಾಂತ್ಯ ವಿಶೇಷ : ಬಿಬಿಎಂಪಿ ದೋಸ್ತಿಯಿಂದ ಕಳಸಾ-ಬಂಡೂರಿ ತನಕ
ಬಿಬಿಎಂಪಿಯಲ್ಲಿ ದೋಸ್ತಿ ಖಚಿತ : ಸೆಪ್ಟೆಂಬರ್, 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಪಟ್ಟದ ದೋಸ್ತಿಯ ಮಾತುಕತೆ ಅಂತಿಮ ಹಂತಕ್ಕೆ ತಲುಪಿತು. ಕಾಂಗ್ರೆಸ್ ಪಕ್ಷದ ಜೊತೆಗೆ ಕೈ ಜೋಡಿಸಲು ಸಿದ್ಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು. 'ಬೆಂಗಳೂರು ನಗರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧವಾಗಿದ್ದೇವೆ. ನಗರದ ಜೆಡಿಎಸ್ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಹೇಳಿದರು. [ಕುಮಾರಸ್ವಾಮಿ ಹೇಳಿದ್ದೇನು?]
ಮೇಯರ್ ಚುನಾವಣೆ ವೇಳಾಪಟ್ಟಿ ಪ್ರಕಟ : ಸೆಪ್ಟೆಂಬರ್ 02 : ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಮುಹೂರ್ತ ಫಿಕ್ಸ್ ಆಯಿತು. ಸೆ.11ರಂದು 260 ಸದಸ್ಯರು ಮತದಾನದ ಮೂಲಕ ಮೇಯರ್ ಆಯ್ಕೆ ಮಾಡಲಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಸೂಚನೆ ಹೊರಡಿಸಿದರು.
ಮತ್ತೆ ಮೈಸೂರಿಗೆ ಹಾರಿದ ವಿಮಾನ : ಸೆಪ್ಟೆಂಬರ್ 03 : ಸುಮಾರು ಒಂದು ವರ್ಷದ ಬಳಿಕ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಯಿತು. ಅಲೆಯನ್ಸ್ ಏರ್ ಉಭಯ ನಗರಗಳ ನಡುವೆ ವಿಮಾನ ಸೇವೆಯನ್ನು ಆರಂಭಿಸಿತು. ವಾರದಲ್ಲಿ 6 ದಿನಗಳ ಕಾಲ ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸಿತು. [2015ರ June ವಿದ್ಯಮಾನಗಳು ನೆನಪಿವೆಯೇ?]

ಕಲಬುರ್ಗಿ ಹತ್ಯೆ, ವಿಚಾರಣೆ : ಸೆಪ್ಟೆಂಬರ್, 03 : ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಮಾಜಿ ಸಂಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದರು. ಕಲಬುರ್ಗಿ ಹತ್ಯೆಯನ್ನು ಸಮರ್ಥಿಸಿಕೊಂಡು ಸಂದೇಶಗಳನ್ನು ಹಾಕಿದ ಆರೋಪದ ಮೇಲೆ ಶ್ರೀರಾಮಸೇನೆಯ ಮಾಜಿ ಸಂಚಾಲಕ ಪ್ರಸಾದ್ ಅತ್ತಾವರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಒಪ್ಪಿಗೆ : ಸೆಪ್ಟೆಂಬರ್, 09 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಲಿದೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತು. ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪನೆ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಒಪ್ಪಿಗೆ ನೀಡಿತು. ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟದಲ್ಲಿ ಐಐಟಿ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು. ಕರ್ನಾಟಕ ಸರ್ಕಾರ ಹುಬ್ಬಳ್ಳಿ-ಧಾರವಾಡ, ರಾಯಚೂರು, ಮೈಸೂರು ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಬಹುದು ಎಂದು ಕೇಂದ್ರಕ್ಕೆ ಪಸ್ತಾವನೆ ಸಲ್ಲಿಸಿತ್ತು.[ಐಐಟಿ ಧಾರವಡದಲ್ಲೇ ಸ್ಥಾಪನೆ]
ಧರ್ಮಸ್ಥಳದಲ್ಲಿ ಕೇಜ್ರಿವಾಲ್ : ಸೆಪ್ಟೆಂಬರ್, 09 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಧರ್ಮಸ್ಥಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರೇ ಕೇಜ್ರಿವಾಲ್ ಅವರನ್ನು ಸ್ವಾಗತಿಸಿದರು.
ಬೆಂಗಳೂರಿನ ಪ್ರಥಮ ಪ್ರಜೆ ಆಯ್ಕೆ : ಸೆಪ್ಟೆಂಬರ್, 11 : ಬೆಂಗಳೂರಿನ ಪ್ರಥಮ ಪ್ರಜೆ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಿಕೆಯಲ್ಲಿ ಯಶಸ್ವಿಯಾಗಿ, ಬಿ.ಎನ್.ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾದರು. ಉಪ ಮೇಯರ್ ಆಗಿ ಜೆಡಿಎಸ್‌ನ ಎಸ್.ಪಿ.ಹೇಮಲತಾ ಅವರು ಆಯ್ಕೆಯಾದರು. [ಮೇಯರ್ ಆಯ್ಕೆಯ ವಿವರಗಳು]

ಹೋರಾಟಕ್ಕೆ ತಾರೆಗಳ ಬೆಂಬಲ : ಸೆಪ್ಟೆಂಬರ್, 13 : ಕಳಸಾ-ಬಂಡೂರಿ ನಾಲಾ ಯೋಜನೆಗೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿತು. ಕನ್ನಡ ನಟ-ನಟಿಯರು ಹೋರಾಟದಲ್ಲಿ ಪಾಲ್ಗೊಂಡರು. 'ನೆಲ, ಜಲ, ಭಾಷೆಯ ಹೋರಾಟಕ್ಕೆ ಸದಾ ಸಿದ್ಧವಾಗಿದ್ದೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
5 ಲಕ್ಷ ಬಹುಮಾನ ಘೋಷಣೆ : ಸೆಪ್ಟೆಂಬರ್, 16 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಕೊಟ್ಟವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.

ಜಾಮೀನು ಆದೇಶಕ್ಕೆ ತಡೆಯಾಜ್ಞೆ : ಸೆಪ್ಟೆಂಬರ್ 16 : ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ ಮತ್ತು ಅಶೋಕ್ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು.
ಎತ್ತಿನಹೊಳೆಗೆ ತಡೆಯಾಜ್ಞೆ : ಸೆಪ್ಟೆಂಬರ್ 16 : ದಕ್ಷಿಣ ಕನ್ನಡ ಭಾಗದ ಜನರ ತೀವ್ರ ವಿರೋಧಕ್ಕೆ ಕಾರಣವಾಗಿರುವ ಎತ್ತಿನಹೊಳೆ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿತು. ಚೆನ್ನೈನ ಹಸಿರು ನ್ಯಾಯಮಂಡಳಿ ತಾತ್ಕಾಲಿಕ ತಡೆಯಾಜ್ಞೆ ನೀಡಿ, ಸೆಪ್ಟಂಬರ್ 28ಕ್ಕೆ ವಿಚಾರಣೆಯನ್ನು ಮುಂದೂಡಿತು.
ಸಿದ್ದರಾಮಯ್ಯ ಬರಿಗೈಯಲ್ಲಿ ವಾಪಸ್ : ಸೆಪ್ಟೆಂಬರ್ 24 : ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಲಿ ಕೈಯಲ್ಲಿ ಬೆಂಗಳೂರಿಗೆ ವಾಪಸ್ ಆದರು. 'ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುವ ಉದ್ದೇಶವಿತ್ತು. ಆದರೆ, ರಾಹುಲ್ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ಅವರು ವಿದೇಶದಲ್ಲಿರುವ ಕಾರಣ ಸಂಪುಟ ವಿಸ್ತರಣೆ ಪುನಃ ಮುಂದಕ್ಕೆ ಹೋಯಿತು' ಎಂದು ಹೇಳಿದರು.
ಕಳಸಾ-ಬಂಡೂರಿಗಾಗಿ ಬಂದ್ : ಸೆಪ್ಟೆಂಬರ್ 26 : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ರಾಜಧಾನಿ ಬೆಂಗಳೂರು ಉತ್ತರ ಕರ್ನಾಟಕ ಭಾಗದ ಜನರ ಹೋರಾಟಕ್ಕೆ ಕೈ ಜೋಡಿಸಿತು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು.
ರಾಘವೇಶ್ವರ ಶ್ರೀಗಳ ವಿರುದ್ಧ ಚಾರ್ಜ್ ಶೀಟ್ : ಸೆಪ್ಟೆಂಬರ್ 26 : ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತು. ಗಾಯಕಿ ಪ್ರೇಮಲತಾ ದಿವಾಕರ್ ಅವರ ಮೇಲೆ ಶ್ರೀಗಳು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ತನಿಖೆ ನಡೆಸಿದ ಸಿಐಡಿ 680 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಶ್ರೀಗಳು ವೈದ್ಯಕೀಯ ಪರೀಕ್ಷೆಗೆ ಬರಲಿಲ್ಲ : ಸೆಪ್ಟೆಂಬರ್ 30 : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲೆ ನಡೆದ ಅತ್ಯಾಚಾರ ಆರೋಪ ಪ್ರಕರಣದ ಸಂಬಂಧ ವೈದ್ಯಕೀಯ ಪರೀಕ್ಷೆ ನಡೆಸಬೇಕಾಗಿತ್ತು. ಆದರೆ, ಶ್ರೀಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗಲಿಲ್ಲ.

ಬಂಧನದ ಭೀತಿಯಿಂದ ಪಾರಾದ ಶ್ರೀಗಳು : ಸೆಪ್ಟೆಂಬರ್ 30 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಬಂಧನದ ಭೀತಿಯಿಂದ ಪಾರಾದರು. ಯಕ್ಷಗಾನ ಕಲಾವಿದೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಶ್ರೀಗಳಿಗೆ ಸೆಷೆನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.












Click it and Unblock the Notifications