ವರ್ಷಾಂತ್ಯ ವಿಶೇಷ : ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಏನಾಯ್ತು?
ವರದಿ ಕೇಳಿದ ರಾಜ್ಯಪಾಲರು : ಅಕ್ಟೋಬರ್ 01 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧದ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯ ಸರ್ಕಾರಕ್ಕೆ ಸೂಚಿಸಿದರು. ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಬಳ್ಳಾರಿಗೆ ಹೋಗಲು ಅನುಮತಿ ಕೊಡಿ : ಅಕ್ಟೋಬರ್ 01 : ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಅವರಿಗೆ ಜಾಮೀನು ನೀಡಿದ್ದ ಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ಷರತ್ತು ಹಾಕಿತ್ತು. ಸುಮಾರು ಮೂರುವರೆ ವರ್ಷಗಳ ನಂತರ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಬಳ್ಳಾರಿಗೆ ಭೇಟಿ ನೀಡಲು ಸಾಧ್ಯವಿಲ್ಲದ ಕಾರಣ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ರೈತ ಚೈತನ್ಯ ಯಾತ್ರೆಗೆ ಚಾಲನೆ : ಅಕ್ಟೋಬರ್ 01 : ಬಳ್ಳಾರಿಯಿಂದ-ನರಗುಂದದವರೆಗಿನ 2ನೇ ಹಂತದ ರೈತ ಚೈತನ್ಯ ಯಾತ್ರೆಗೆ ಕರ್ನಾಟಕ ಬಿಜೆಪಿ ಬಳ್ಳಾರಿಯಲ್ಲಿ ಚಾಲನೆ ನೀಡಿತು. ಅಕ್ಟೋಬರ್ 1 ರಿಂದ 11 ರ ತನಕ ಬಿಜೆಪಿಯ ಎರಡನೇ ಹಂತದ ರೈತ ಚೈತನ್ಯ ಯಾತ್ರೆ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಯಿತು.

ರಸ್ತೆಗಿಳಿದ ಬಯೋಡಿಸೆಲ್ ಬಸ್ : ಅಕ್ಟೋಬರ್ 02 : ಬಯೋ ಡೀಸೆಲ್‌ನಿಂದ ಸಂಚಾರ ನಡೆಸುವ ಕೆಎಸ್‌ಆರ್‌ಟಿಸಿಯ 10 ಬಯೋ ಬಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿದರು. 107 ಬಸ್ಸುಗಳನ್ನು ಬಯೋ ಡೀಸೆಲ್ ಮೂಲಕ ಓಡಿಸುವ ಉದ್ದೇಶವನ್ನು ಕೆಎಸ್ಆರ್‌ಟಿಸಿ ಹೊಂದಿದ್ದು, ಪ್ರಾಯೋಗಿಕವಾಗಿ 10 ಬಸ್ಸುಗಳ ಸಂಚಾರವನ್ನು ಆರಂಭಿಸಲಾಯಿತು. [ಬಯೋ ಬಸ್ ಉಪಯೋಗಗಳು]
ರೈತನಿಂದ ದಸರಾ ಉದ್ಘಾಟನೆ : ಅಕ್ಟೋಬರ್ 03 : 2015ನೇ ಸಾಲಿನ ಮೈಸೂರು ದಸರಾವನ್ನು ರೈತರೊಬ್ಬರು ಉದ್ಘಾಟಿಸಲಿದ್ದಾರೆ ಎಂದು ಸರ್ಕಾರ ಘೋಷಣೆ ಮಾಡಿತು. ರೈತ ಪುಟ್ಟಯ್ಯ ಅವರು ಅಕ್ಟೋಬರ್ 13ರಂದು ಚಾಲನೆ ನೀಡುವರು ಎಂದು ಜಿಲ್ಲಾಡಳಿತ ಘೋಷಿಸಿತು. ರೈತ ಪುಟ್ಟಯ್ಯ ಅವರು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಮಲಾರ ಕಾಲೋನಿಯ ನಿವಾಸಿ. [ಪುಟ್ಟಯ್ಯ ಪರಿಚಯ ಓದಿ]
ಕಾಲ್ ಸೆಂಟರ್ ಉದ್ಯೋಗಿ ಮೇಲೆ ಅತ್ಯಾಚಾರ : ಅಕ್ಟೋಬರ್ 05 : : ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಅಕ್ಟೋಬರ್ 3ರ ಶನಿವಾರ ರಾತ್ರಿ ನಡೆದ ಘಟನೆ ಅಕ್ಟೋಬರ್ 5ರಂದು ಬೆಳಕಿಗೆ ಬಂದಿತು. ಡ್ರಾಪ್ ಕೊಡುವ ನೆಪದಲ್ಲಿ ಟೆಂಪೋ ಟ್ರಾವೆಲರ್‌ಗೆ ಯುವತಿಯನ್ನು ಹತ್ತಿಸಿಕೊಂಡ ಚಾಲಕ ಮತ್ತು ಕ್ಲೀನರ್ ವಾಹನದಲ್ಲೇ ಅತ್ಯಾಚಾರ ನಡೆಸಿ, ಮಡಿವಾಳ ಪೊಲೀಸ್ ಠಾಣೆ ಸಮೀಪದ ಬಸ್ ನಿಲ್ದಾಣದ ಬಳಿ ಆಕೆಯನ್ನು ರಸ್ತೆಗೆ ತಳ್ಳಿ ಪರಾರಿಯಾಗಿದ್ದರು.
ಬಸವಶ್ರೀ ಪ್ರಶಸ್ತಿ ಪ್ರಕಟ : ಅಕ್ಟೋಬರ್ 07 : 2015ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು. ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ಡಾ.ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿ ಅವರು ಘೋಷಣೆ ಮಾಡಿದರು.
ರಾಹುಲ್ ಗಾಂಧಿ ಮಂಡ್ಯ ಪ್ರವಾಸ : ಅಕ್ಟೋಬರ್ 09 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡರು. 'ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುತ್ತಾರೆ. ಆದರೆ, ದೇಶದಲ್ಲಿನ ಕೃಷಿಕರ ಸಮಸ್ಯೆಯನ್ನು ಆಲಿಸಲು ಅವರನ್ನು ಭೇಟಿ ಮಾಡಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಅಗತ್ಯ ಸಹಕಾರ ನೀಡುತ್ತಿಲ್ಲ ಎಂದು' ಅವರು ಆರೋಪಿಸಿದರು.
ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ : ಅಕ್ಟೋಬರ್ 09 : ಭಜರಂಗದಳದ ಕಾರ್ಯಕರ್ತ ಮತ್ತು ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ಮೂಡಬಿದಿರೆಯಲ್ಲಿ ಹತ್ಯೆ ಮಾಡಲಾಯಿತು. ಈ ಹತ್ಯೆಯ ಬಳಿಕ ಮೂಡಬಿದರೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಯಿತು.
ರಾಹುಲ್ ಗಾಂಧಿ ಹಾವೇರಿ ಪ್ರವಾಸ : ಅಕ್ಟೋಬರ್ 10 : 'ಪ್ರಧಾನಿ ನರೇಂದ್ರ ಮೋದಿ ಸದಾ ಉದ್ಯಮಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಬಡವರ, ರೈತರ ಜೊತೆ ಅವರು ಫೋಟೊ ತೆಗೆಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಸೂಟ್ ಬೂಟ್ ನಾಯಕರಲ್ಲ, ಅವರು ರೈತರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕರು' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದರು. ಹಾವೇರಿಯ ಗುಡಗೂರಿನಲ್ಲಿ ರೈತರ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ದಸರಾ ಉದ್ಘಾಟಿಸಿದ ರೈತ ಪುಟ್ಟಯ್ಯ : ಅಕ್ಟೋಬರ್ 13 : 'ರೈತರೇ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆ ಮಾಡಿಕೊಂಡರೆ ನಮ್ಮ ಕುಟುಂಬಗಳು ಬೀದಿಗೆ ಬರುತ್ತವೆ. ಆತ್ಮಹತ್ಯೆಯಂತಹ ಆಲೋಚನೆಯಿಂದ ಹಿಂದೆ ಸರಿಯಿರಿ' ಎಂದು ಪ್ರಗತಿಪರ ರೈತ ಪುಟ್ಟಯ್ಯ ರಾಜ್ಯದ ರೈತ ಸಮುದಾಯಕ್ಕೆ ಕರೆ ನೀಡಿದರು. ಅಕ್ಟೋಬರ್ 13ರಂದು ಬೆಳಗ್ಗೆ 11.5ರಿಂದ 11.55ರ ನಡುವಿನ ಶುಭ ಧನುರ್ ಲಗ್ನದಲ್ಲಿ 2015ನೇ ಸಾಲಿನ ಮೈಸೂರು ದಸರಾಕ್ಕೆ ಅವರು ಚಾಲನೆ ನೀಡಿದರು.

ಮೂವರಿಗೆ ಜೀವಾವಧಿ ಶಿಕ್ಷೆ : ಅಕ್ಟೋಬರ್ 15 : ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ನಡೆಸಿದ ಮೂವರು ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತು. 2013ರ ಜೂನ್ 20ರಂದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಪ್ರಮುಖ ಆರೋಪಿಗಳಾದ ಯೋಗೇಶ್, ಆನಂದ್ ಮತ್ತು ಹರಿಪ್ರಸಾದ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 1.10 ಲಕ್ಷ ರೂಪಾಯಿ ದಂಡ ವಿಧಿಸಿತು.
ಅಲೋಕ್ ಕುಮಾರ್ ಅಮಾನತು ರದ್ದು : ಅಕ್ಟೋಬರ್ 15 : ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ನಂಟು ಹೊಂದಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಅಮಾನತು ಆದೇಶವನ್ನು ಹಿಂಪಡೆಯಿತು. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲೋಕ್ ಕುಮಾರ್ ಅವರನ್ನು 2015ರ ಮೇ 23ರಂದು ಅಮಾನತು ಮಾಡಿತ್ತು.
ಬೈಕ್ ಕಳ್ಳರಿಂದ ಪಿಎಸ್‌ಐ ಹತ್ಯೆ : ಅಕ್ಟೋಬರ್ 16 : ದೊಡ್ಡಬಳ್ಳಾಪು ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರನ್ನು ಬೈಕ್ ಕಳ್ಳರು ಹತ್ಯೆ ಮಾಡಿದರು. ನೆಲಮಂಗಲದ ಗ್ರಾಫೈಟ್ ಫ್ಯಾಕ್ಟರಿ ಬಳಿ ತಮ್ಮನ್ನು ಹಿಡಿಯಲು ಬಂದ ಪಿಎಸ್‌ಐ ಅವರನ್ನು ಡ್ರ್ಯಾಗರ್‌ನಿಂದ ಚುಚ್ಚಿ ಕಳ್ಳರು ಹತ್ಯೆ ಮಾಡಿದರು.
ಪ್ಲಾಸ್ಟಿಕ್ ಬಳಕೆಗೆ ನಿಷೇಧ : ಅಕ್ಟೋಬರ್ 19 : ಕರ್ನಾಟಕದಲ್ಲಿ ಪ್ಲಾಸ್ಟಿಕ್ ತಯಾರಿಕೆ, ಮಾರಾಟ ಮತ್ತು ಬಳಕೆ ನಿಷೇಧಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. 40 ಮೈಕ್ರಾನ್‍ಗಿಂತಲೂ ಕಡಿಮೆ ಪ್ರಮಾಣದ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ, ಹಾಗೂ ಬಳಕೆಯನ್ನು ನಿಷೇಧಿಸಲು ಸಮ್ಮತಿಸಲಾಯಿತು.
ಕೊನೆಗೂ ಸಂಪುಟ ವಿಸ್ತರಣೆ : ಅಕ್ಟೋಬರ್ 28 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಸಂಪುಟ ವಿಸ್ತರಣೆ ಮಾಡಿ, ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ, ಹಾಸನ ಜಿಲ್ಲೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್ ಕುಲಕರ್ಣಿ, ಹಾವೇರಿ ಜಿಲ್ಲೆಯ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

60 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ : ಅಕ್ಟೋಬರ್ 30 : 2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಘೋಷಣೆ ಮಾಡಿತು. 60ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 60 ಸಾಧಕರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿಯು 1 ಲಕ್ಷ ನಗದು, ಸ್ಮರಣಿಕೆ ಮತ್ತು 20 ಗ್ರಾಂ ಚಿನ್ನದ ಪದಕಗಳನ್ನು ಒಳಗೊಂಡಿದೆ. [ಪ್ರಶಸ್ತಿ ಪಡೆದವರ ಪಟ್ಟಿ]
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications