ಸೇವಿಂಗ್ಸ್ ಖಾತೆಯಲ್ಲಿ ಎಷ್ಟು ಹಣ ಇರಬೇಕು? ಉಳಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು?

ಉಳಿತಾಯ ಖಾತೆ ತುರ್ತು ಅಗತ್ಯಗಳಿಗೆ ಮತ್ತು ದಿನನಿತ್ಯದ ಹಣಕಾಸು ವ್ಯವಹಾರಗಳಿಗೆ ಸೂಕ್ತವಾದರೂ, ದೀರ್ಘಾವಧಿಗೆ ದೊಡ್ಡ ಮೊತ್ತವನ್ನು ಅದೇ ಖಾತೆಯಲ್ಲಿ ಇಡುವುದು ಲಾಭದಾಯಕವಲ್ಲ. ಬ್ಯಾಂಕ್ ಬಡ್ಡಿದರಕ್ಕಿಂತ ಹಣದುಬ್ಬರ ಹೆಚ್ಚಿದ್ದರೆ, ನಿಮ್ಮ ಹಣದ ಖರೀದಿ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತದೆ.

ಬಹುತೇಕ ಎಲ್ಲರ ಬದುಕಿನಲ್ಲೂ ಇದೇ ಚಿತ್ರಣ. ಪ್ರತಿ ತಿಂಗಳು ಸಂಬಳ ಉಳಿತಾಯ ಖಾತೆಗೆ (Savings Account) ಬರುತ್ತದೆ. ಖರ್ಚು ಮಾಡಿದ ನಂತರ ಉಳಿದ ಹಣವೂ ಅದೇ ಖಾತೆಯಲ್ಲಿ ಉಳಿಯುತ್ತದೆ. ಹೀಗೆ ವರ್ಷಗಳ ಕಾಲ ₹10 ಲಕ್ಷ, ₹20 ಲಕ್ಷ, ಕೆಲವರಲ್ಲಿ ₹50 ಲಕ್ಷಕ್ಕೂ ಹೆಚ್ಚು ಹಣ ಉಳಿತಾಯ ಖಾತೆಯಲ್ಲೇ ಬಿದ್ದಿರುತ್ತದೆ. "ಬ್ಯಾಂಕ್‌ನಲ್ಲಿ ಇದೆ ಅಲ್ವಾ, ಸುರಕ್ಷಿತ" ಎಂಬ ಭಾವನೆ ನಮ್ಮಲ್ಲಿ ಸಾಮಾನ್ಯ. ಆದರೆ ಹಣ ಸುರಕ್ಷಿತವಾಗಿರುವುದೇ ಸಾಕೇ?

Savings Account

ಹಣದ ಮೌಲ್ಯ (Purchasing Power) ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದರೆ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾದರೂ ನೀವು ನಿಜವಾಗಿ ಶ್ರೀಮಂತರಾಗುತ್ತಿಲ್ಲ. ಬದಲಿಗೆ, ನಿಮ್ಮ ಸಂಪತ್ತು ನಿಧಾನವಾಗಿ ಕರಗುತ್ತಿರಬಹುದು.

ಉಳಿತಾಯ ಖಾತೆಯ ನಿಜವಾದ ಕೆಲಸ ಏನು?

ಉಳಿತಾಯ ಖಾತೆ ಎಂದರೆ ಹೂಡಿಕೆ ಸಾಧನವಲ್ಲ. ಅದರ ಮುಖ್ಯ ಉದ್ದೇಶಗಳು- ತಿಂಗಳ ಖರ್ಚುಗಳಿಗೆ ಹಣ ಇಡುವುದು, ವಿದ್ಯುತ್, ನೀರು, EMI, ವಿಮೆ ಪ್ರೀಮಿಯಂ ಪಾವತಿಸುವುದು, ತುರ್ತು ಸಂದರ್ಭಗಳಲ್ಲಿ ತಕ್ಷಣ ಹಣ ಪಡೆಯುವುದು ಹಾಗೂ ಸಂಬಳ ಜಮೆಯಾಗುವ ಖಾತೆಯಾಗಿ ಬಳಸುವುದು.

ಅಂದರೆ Liquidity (ತಕ್ಷಣ ಹಣ ಪಡೆಯುವ ಸೌಲಭ್ಯ) ಅದರ ದೊಡ್ಡ ಶಕ್ತಿ. ಆದರೆ ಇದೇ ಖಾತೆಯನ್ನು ದೀರ್ಘಾವಧಿಯ ಸಂಪತ್ತು ನಿರ್ಮಾಣಕ್ಕೆ ಬಳಸುವುದು ತಪ್ಪಾಗಬಹುದು.

ಐಟಿ ರಿಫಂಡ್‌ ಎಷ್ಟು ದಿನದಲ್ಲಿ ನಿಮ್ಮ ಖಾತೆಗೆ ಬರುತ್ತೆ? ಈ 5 ತಪ್ಪು ಮಾಡಿದ್ರೆ ರಿಫಂಡ್ ವಿಳಂಬ ಪಕ್ಕಾ!
ಐಟಿ ರಿಫಂಡ್‌ ಎಷ್ಟು ದಿನದಲ್ಲಿ ನಿಮ್ಮ ಖಾತೆಗೆ ಬರುತ್ತೆ? ಈ 5 ತಪ್ಪು ಮಾಡಿದ್ರೆ ರಿಫಂಡ್ ವಿಳಂಬ ಪಕ್ಕಾ!

ಹಣ ಯಾವಾಗ ನಷ್ಟವಾಗುತ್ತದೆ?

ಸೇವಿಂಗ್ಸ್‌ ಖಾತೆಯಲ್ಲಿ ಹಣ ಕಳೆದುಹೋಗದೇ ಇದ್ದರೂ ನಷ್ಟವಾಗಬಹುದು. ಅದು ಹೇಗೆ? ಒಂದು ಉದಾಹರಣೆ ನೋಡೋಣ.

ಪರಿಸ್ಥಿತಿ 1

ನೀವು ಬ್ಯಾಂಕ್‌ನಲ್ಲಿ ₹10 ಲಕ್ಷ ಇಟ್ಟಿದ್ದೀರಿ. ಉಳಿತಾಯ ಖಾತೆ ಬಡ್ಡಿ : ವರ್ಷಕ್ಕೆ 2.5%, ಹಣದುಬ್ಬರ (Inflation) ವರ್ಷಕ್ಕೆ 6%. ಒಂದು ವರ್ಷದ ನಂತರ ಅದು ₹10.25 ಲಕ್ಷ ಆಗಬಹುದು. ಆದರೆ ಇದೇ ಅವಧಿಯಲ್ಲಿ ವಸ್ತುಗಳ ಬೆಲೆ 6% ಏರಿದ್ದರೆ, ನಿಮ್ಮ ಹಣದ ಖರೀದಿ ಸಾಮರ್ಥ್ಯ ಕಡಿಮೆಯಾಗಿರುತ್ತದೆ.

ಅಂದರೆ... ಹಣ ಹೆಚ್ಚಾಗಿದೆ. ಆದರೆ ಅದರ ಶಕ್ತಿ ಕಡಿಮೆಯಾಗಿದೆ. ಇದನ್ನೇ ನಿಜವಾದ ನಷ್ಟ ಎಂದು ಹಣಕಾಸು ತಜ್ಞರು ಹೇಳುತ್ತಾರೆ.

ಹಣದುಬ್ಬರ ಎಂದರೆ ವಸ್ತುಗಳ ಬೆಲೆ ವರ್ಷದಿಂದ ವರ್ಷಕ್ಕೆ ಏರುವುದು. ಉದಾಹರಣೆಗೆ, ಇಂದು ಒಂದು ಲೀಟರ್ ಎಣ್ಣೆಗೆ ₹180 ಇದ್ದರೆ ಹತ್ತು ವರ್ಷಗಳ ನಂತರ ₹320 ಆಗಿರಬಹುದು. ಇಂದು ಮಗುವಿನ ಕಾಲೇಜು ಶಿಕ್ಷಣಕ್ಕೆ ₹20 ಲಕ್ಷ ಬೇಕಾದರೆ 10 ವರ್ಷಗಳ ನಂತರ ಅದೇ ಕೋರ್ಸ್‌ಗೆ ₹35-40 ಲಕ್ಷ ಬೇಕಾಗಬಹುದು.

ಆದರೆ ನಿಮ್ಮ ಹಣ ಕೇವಲ ಉಳಿತಾಯ ಖಾತೆಯಲ್ಲೇ ಇದ್ದರೆ? ಅದು ಆ ಮಟ್ಟಿಗೆ ಬೆಳೆಯುವುದಿಲ್ಲ.

₹10 ಲಕ್ಷ ಬ್ಯಾಂಕ್‌ನಲ್ಲಿ ಇಟ್ಟರೆ 10 ವರ್ಷಗಳ ನಂತರ ಎಷ್ಟಾಗುತ್ತದೆ? ಒಂದು ಲೆಕ್ಕ ನೋಡೋಣ.

New Tax Regimeನಲ್ಲಿ ತೆರಿಗೆ ಉಳಿತಾಯ ಹೇಗೆ? ಪ್ರತಿಯೊಬ್ಬ ತೆರಿಗೆದಾರರೂ ತಿಳಿಯಬೇಕಾದ ವಿಷಯಗಳು
New Tax Regimeನಲ್ಲಿ ತೆರಿಗೆ ಉಳಿತಾಯ ಹೇಗೆ? ಪ್ರತಿಯೊಬ್ಬ ತೆರಿಗೆದಾರರೂ ತಿಳಿಯಬೇಕಾದ ವಿಷಯಗಳು

ಉಳಿತಾಯ ಖಾತೆ

* ಆರಂಭದ ಹಣ : ₹10,00,000
* ಬಡ್ಡಿ : 2.5%, 10 ವರ್ಷಗಳ ನಂತರ ಸುಮಾರು ₹12.8 ಲಕ್ಷ

ಹಣದುಬ್ಬರದ ಪರಿಣಾಮ

ಹಣದುಬ್ಬರ 6% ಇದ್ದರೆ, ಇಂದು ₹10 ಲಕ್ಷಕ್ಕೆ ಸಿಗುವ ವಸ್ತುಗಳನ್ನು 10 ವರ್ಷಗಳ ನಂತರ ಖರೀದಿಸಲು ಸುಮಾರು ₹17.9 ಲಕ್ಷ ಬೇಕಾಗುತ್ತದೆ. ಆದರೆ ನಿಮ್ಮ ಬಳಿ ಇರುವುದು? ₹12.8 ಲಕ್ಷ ಮಾತ್ರ. ಅಂದರೆ ಸುಮಾರು ₹5 ಲಕ್ಷದಷ್ಟು ಖರೀದಿ ಸಾಮರ್ಥ್ಯ ಕಳೆದುಕೊಂಡಿದ್ದೀರಿ.

ಅವಕಾಶದ ನಷ್ಟ (Opportunity Cost)

ಇದು ಹಲವರಿಗೆ ಗೊತ್ತೇ ಇಲ್ಲ. ಅದೇ ₹10 ಲಕ್ಷವನ್ನು ಸರಿಯಾದ ವೈವಿಧ್ಯಮಯ ಇಕ್ವಿಟಿ ಮ್ಯೂಚುವಲ್ ಫಂಡ್ ಅಥವಾ ಇಕ್ವಿಟಿ ಹೂಡಿಕೆಯಲ್ಲಿ ಇಟ್ಟು, ಅದಕ್ಕೆ ಸರಾಸರಿ 12% ಬೆಳವಣಿಗೆ ದೊರೆತರೆ, 10 ವರ್ಷಗಳ ನಂತರ ಅದು ಸುಮಾರು ₹31.1 ಲಕ್ಷ ಆಗಬಹುದಿತ್ತು. ಉಳಿತಾಯ ಖಾತೆ ಹಾಗೂ ಇಕ್ವಿಟಿ ಬೆಳವಣಿಗೆ ವ್ಯತ್ಯಾಸ ₹18 ಲಕ್ಷಕ್ಕೂ ಹೆಚ್ಚು.

₹20 ಲಕ್ಷ ಇದ್ದರೆ ಈ ವ್ಯತ್ಯಾಸ ಸುಮಾರು ₹36 ಲಕ್ಷಕ್ಕೂ ಹೆಚ್ಚು. ಇದನ್ನೇ ಅವಕಾಶದ ನಷ್ಟ ಎಂದು ಕರೆಯುತ್ತಾರೆ.

ಹಾಗಾದರೆ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಬೇಕು?

ಇದಕ್ಕೆ ಒಂದೇ ಉತ್ತರ ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಅವಲಂಬಿಸಿರುವುದು ನಿಮ್ಮ ಆದಾಯ, ಉದ್ಯೋಗದ ಸ್ಥಿರತೆ, ಕುಟುಂಬದ ಜವಾಬ್ದಾರಿ, ಆರೋಗ್ಯ, ಸಾಲಗಳ ಪ್ರಮಾಣ ಇವುಗಳ ಮೇಲೆ. ಆದರೆ ಹೆಚ್ಚಿನ ಹಣಕಾಸು ತಜ್ಞರು ಒಂದು ಸಾಮಾನ್ಯ ನಿಯಮ ಹೇಳುತ್ತಾರೆ- ಅದು, 6ರಿಂದ 12 ತಿಂಗಳ ತುರ್ತು ನಿಧಿ ಸೇವಿಂಗ್ಸ್‌ನಲ್ಲಿ ಇರಬೇಕು.

ಅಂದರೆ ನಿಮ್ಮ ಮನೆಯ ಮಾಸಿಕ ಅಗತ್ಯ ಖರ್ಚು ₹50,000 ಇದ್ದರೆ ಕನಿಷ್ಠ ₹3 ಲಕ್ಷದಿಂದ ₹6 ಲಕ್ಷವರೆಗೆ ತುರ್ತು ನಿಧಿ ಇರಬೇಕು. ಈ ಹಣವನ್ನು ಸೇವಿಂಗ್ಸ್‌, ಲಿಕ್ವಿಡ್‌ ಫಂಡ್‌, ಶಾರ್ಟ್‌ ಟರ್ಮ್‌ ಫಿಕ್ಸ್ಡ್‌ ಡಿಪಾಸಿಟ್‌ ಇವುಗಳಲ್ಲಿ ಹಂಚಿ ಇಡಬಹುದು.

ಉಳಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು?

1 ವರ್ಷದೊಳಗೆ ಬೇಕಾಗುವ ಹಣವನ್ನು ಈ ಮುಂದಿನವುಗಳಲ್ಲಿ ಇಡಬಹುದು- ಸೇವಿಂಗ್ಸ್‌ ಖಾತೆ, ಲಿಕ್ವಿಡ್‌ ಮ್ಯೂಚುಯಲ್‌ ಫಂಡ್‌, ಮನಿ ಮಾರ್ಕೆಟ್‌ ಫಂಡ್‌, ಶಾರ್ಟ್‌ ಟರ್ಮ್‌ ಎಫ್‌ಡಿ.

1 ರಿಂದ 3 ವರ್ಷದಲ್ಲಿ ಬೇಕಾಗುವ ಹಣವನ್ನು ಫಿಕ್ಸ್ಡ್‌ ಡಿಪಾಸಿಟ್‌, ಕಡಿಮೆ ಅವಧಿಯ ಡೆಬಿಟ್‌ ಫಂಡ್‌, ಟಾರ್ಗೆಟ್‌ ಮ್ಯೂಚುಯಲ್‌ ಫಂಡ್‌ಗಳಲ್ಲಿ ಇಡಬಹುದು.

10 ವರ್ಷ ಅಥವಾ ಅದಕ್ಕಿಂತ ಹೆಚ್ಚು ದೀರ್ಘಾವಧಿ ಗುರಿಗಳಿಗೆ ಈಕ್ವಿಟಿ ಮ್ಯೂಚುಯಲ್‌ ಫಂಡ್‌, ಇಂಡೆಕ್ಸ್‌ ಫಂಡ್‌, ಈಕ್ವಿಟ್‌ ಹೂಡಿಕೆಗಳಲ್ಲಿ ಇಡಬೇಕು. ಇವುಗಳು ಹಣದುಬ್ಬರವನ್ನು ಮೀರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಪ್ರತಿ ರೂಪಾಯಿಗೂ ಒಂದು ಕೆಲಸ ಇರಲಿ

ಬಹುತೇಕ ಮಂದಿ ಮಾಡುವ ಒಂದು ದೊಡ್ಡ ತಪ್ಪು ಏನೆಂದರೆ ಎಲ್ಲ ಹಣವನ್ನೂ ಒಂದೇ ಖಾತೆಯಲ್ಲಿ ಇಡುವುದು. ಆದರೆ ಹಣವನ್ನು ಕೆಲಸದ ಪ್ರಕಾರ ಹಂಚಿದರೆ ಉತ್ತಮ. ಉದಾಹರಣೆಗೆ ಸಂಬಳದ ಹಣ ಖರ್ಚುಗಳಿಗೆ. ತುರ್ತು ನಿಧಿಗೆ ಸೇವಿಂಗ್ಸ್‌ ಮತ್ತು ಲಿಕ್ವಿಡ್‌ ಫಂಡ್.‌ ಮನೆಯ ಡೌನ್ ಪೇಮೆಂಟ್‌ಗೆ ಡೆಬಿಟ್‌ ಫಂಡ್‌ ಅಥವಾ ಎಫ್‌ಡಿ. ಮಕ್ಕಳ ಶಿಕ್ಷಣಕ್ಕೆ ಈಕ್ವಿಟಿ ಮ್ಯೂಚುಯಲ್‌ ಫಂಡ್‌, ನಿವೃತ್ತಿ ನಂತರದ ಬದುಕಿಗೆ ಈಕ್ವಿಟಿ, ಎನ್‌ಪಿಎಸ್‌, ಪಿಪಿಎಫ್‌- ನಿಮ್ಮ ಗುರಿ ಮತ್ತು ಅಪಾಯ ಸ್ವೀಕಾರ ಸಾಮರ್ಥ್ಯಕ್ಕೆ ಅನುಗುಣವಾಗಿ.

ಬ್ಯಾಂಕ್ ಬ್ಯಾಲೆನ್ಸ್ ನೋಡಿ ಖುಷಿಪಡುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ- ನನ್ನ ಖಾತೆಯಲ್ಲಿರುವ ₹15 ಲಕ್ಷದಲ್ಲಿ ಮುಂದಿನ ಮೂರು ತಿಂಗಳಲ್ಲಿ ಎಷ್ಟು ಬೇಕು? ಮುಂದಿನ ಒಂದು ವರ್ಷದಲ್ಲಿ ಎಷ್ಟು ಬೇಕು? ಹತ್ತು ವರ್ಷಗಳವರೆಗೆ ಮುಟ್ಟದ ಹಣ ಎಷ್ಟು?

ಕೊನೆಯ ವಿಭಾಗದಲ್ಲಿರುವ ಹಣವನ್ನು ಉಳಿತಾಯ ಖಾತೆಯಲ್ಲೇ ಇಟ್ಟಿದ್ದರೆ ಅದು ನಿಮ್ಮ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ಹಾಗಂತ ಉಳಿತಾಯ ಖಾತೆ ಸಂಪೂರ್ಣವಾಗಿ ಖಾಲಿ ಮಾಡಬೇಡಿ. ತುರ್ತು ನಿಧಿ ಯಾವಾಗಲೂ ಇರಲಿ. ದೀರ್ಘಾವಧಿಯ ಹಣವನ್ನು ಉಳಿತಾಯ ಖಾತೆಯಲ್ಲಿ ವರ್ಷಗಟ್ಟಲೆ ಇಡಬೇಡಿ. ಹೂಡಿಕೆ ಮಾಡುವ ಮೊದಲು ನಿಮ್ಮ ಗುರಿ, ಅವಧಿ ಮತ್ತು ಅಪಾಯ ಸಹಿಷ್ಣುತೆಯನ್ನು ಅರ್ಥಮಾಡಿಕೊಳ್ಳಿ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+