ವರ್ಷಾಂತ್ಯ ವಿಶೇಷ ಆಗಸ್ಟ್ : ಬಿಬಿಎಂಪಿ ಚುನಾವಣೆ, ಕಲಬುರ್ಗಿ ಹತ್ಯೆ
ಬೆಂಗಳೂರಿಗೆ ನೂತನ ಆಯುಕ್ತರು : ಆಗಸ್ಟ್ 1 : ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ 1987ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎನ್.ಎಸ್.ಮೇಘರಿಕ್ ಅವರು ಅಧಿಕಾರ ವಹಿಸಿಕೊಂಡರು. ನಗರ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ರೆಡ್ಡಿ ಅವರಿಗೆ ಸರ್ಕಾರ ಬಡ್ತಿ ನೀಡಿತು, ಅವರಿಂದ ತೆರವಾದ ಸ್ಥಾನಕ್ಕೆ ಎನ್.ಎಸ್.ಮೇಘರಿಕ್ ಅವರನ್ನು ನೇಮಕ ಮಾಡಿತು.
ಲೋಕಸಭೆಯಲ್ಲಿ ಯಡಿಯೂರಪ್ಪ ಘರ್ಜನೆ : ಆಗಸ್ಟ್ 3 : ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಯಹತ್ಯೆ ಪ್ರಕರಣಗಳ ಬಗ್ಗೆ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. 'ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನಗಳಿಸಿದೆ. ರಾಜ್ಯ ಸರ್ಕಾರ ಆತ್ಮಹತ್ಯೆ ತಡೆಯಲು ವಿಫಲವಾಗಿದೆ. ರಾಜ್ಯದಲ್ಲಿ 6 ತಿಂಗಳಿನಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಕನ್ನಡದಲ್ಲಿ ಭಾಷಣ ಮಾಡಿದರು.
ಬಿಬಿಎಂಪಿ ಚುನಾವಣೆ ಅಧಿಸೂಚನೆ ಪ್ರಕಟ : ಆಗಸ್ಟ್ 3 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಯಿತು. ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಅಧಿಸೂಚನೆ ಹೊರಡಿಸಿದರು. ಆ.22ರಂದು ಮತದಾನ ನಡೆಯಿತು. [ವರ್ಷಾಂತ್ಯ ವಿಶೇಷ : 2015ರ ಮೇ ವಿದ್ಯಮಾನಗಳು]

ಲೋಕಾ ಹಗರಣದ ಪ್ರಮುಖ ಆರೋಪಿ ಬಂಧನ : ಆಗಸ್ಟ್ 5 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಭಾಸ್ಕರ್ ಅವರನ್ನು ಎಸ್‌ಐಟಿ ಬಂಧಿಸಿತು. ವಿ.ಭಾಸ್ಕರ್ ನ್ಯಾ.ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಪರಮಾಪ್ತ ಎಂದು ಹೇಳಿಕೊಂಡಿದ್ದ ಮತ್ತು ಹಗರಣದ ಪ್ರಮುಖ ಆರೋಪಿಯಾಗಿದ್ದ.
ಬಂಧನದ ಸುದ್ದಿ ತಳ್ಳಿ ಹಾಕಿದ ಎಚ್‌ಡಿಕೆ : ಆಗಸ್ಟ್ 8 : ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಮ್ಮನ್ನು ಬಂಧಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ಎಚ್.ಡಿ.ಕುಮಾರಸ್ವಾಮಿ ತಳ್ಳಿ ಹಾಕಿದರು. ವದಂತಿ ಹಬ್ಬಿಸುವ ಮೂಲಕ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು. ಆ.5ರಂದು ಎಸ್‌ಐಟಿ ಕುಮಾರಸ್ವಾಮಿ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ವರದಿಯಾಗಿತ್ತು.

ಸರಳವಾಗಿ ದಸರಾ ಆಚರಣೆ : ಆಗಸ್ಟ್ 10 : 2015ನೇ ಸಾಲಿನ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದಸರಾ ಪೂರ್ವ ಸಿದ್ಧತೆಗಳ ಕುರಿತು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ : ಆಗಸ್ಟ್ 10: ಅಂತೂ ಇಂತೂ ಎಲ್ಲಾ ಗಡುವುಗಳು ಮುಗಿದ ಬಳಿಕ ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತವಾಯಿತು. ಸುಮಾರು 69 ಕೋಟಿ ರೂಪಾಯಿ ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗಿದೆ. ಶಿರಾಡಿ ಘಾಟ್ ರಸ್ತೆಯನ್ನು 2015ರ ಜನವರಿ 2ರಿಂದ ಬಂದ್ ಮಾಡಲಾಗಿತ್ತು. [ಶಿರಾಡಿ ಘಾಟ್ ಚಿತ್ರಗಳನ್ನು ನೋಡಿ]
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ : ಆಗಸ್ಟ್ 11 : ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಬೆಂಗಳೂರಿನಿಂದ 60 ಕಿ.ಮೀ.ತನಕ ಜೋಡಿ ರೈಲು ಮಾರ್ಗ, ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ವಿತರಣೆ, ಮನೆ ತೆರಿಗೆ ಶೇ 24 ರಿಂದ 5ಕ್ಕೆ ಇಳಿಕೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಡಯಾಲಿಸಿಸ್ ಕೇಂದ್ರ ಮುಂತಾದ ಭರವಸೆಗಳನ್ನು ಪಕ್ಷ ನೀಡಿತು. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಪ್ರಣಾಳಿಕೆ ಇತ್ತು.
ಲೋಕಾ ಹಗರಣ, ಆರೋಪಿಗಳ ಅರ್ಜಿ ವಜಾ : ಆಗಸ್ಟ್ 17 : ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ನ್ಯಾಯಾಧೀಶ ಜಿ.ವಿ.ಬೋಪಯ್ಯ ಅವರು ಅಶ್ವಿನ್ ರಾವ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಸಚಿವ : ಆಗಸ್ಟ್ 19 : ಬೆಂಗಳೂರು ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವ ಸ್ಥಾನ ಹುಟ್ಟು ಹಾಕುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಬಿಬಿಎಂಪಿ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ. ಆಗ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ಬೆಂಗಳೂರಿನ ಜನರಿಗೆ ಭರವಸೆ ನೀಡಿದರು. [ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯ]
ಯಲ್ಲಾಲಿಂಗನದ್ದು ಕೊಲೆ : ಆಗಸ್ಟ್ 20 : ಆಡಳಿತ ಮತ್ತು ಪ್ರತಿಪಕ್ಷ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ಕೊಪ್ಪಳದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹನುಮೇಶ ನಾಯಕ ಮತ್ತು ಇತರ ಆರೋಪಿಗಳು ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಸಿಐಡಿ ಚಾರ್ಜ್ ಶೀಟ್‌ನಲ್ಲಿ ಹೇಳಿತು. ಆರೋಪಿ ಹುನುಮೇಶ ನಾಯಕ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲಿಗರಾಗಿದ್ದು, ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸಚಿವರು ಪ್ರಯತ್ನ ನಡೆಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. [ಏನಿದು ಪ್ರಕರಣ, ಇಲ್ಲಿವೆ ವಿವರ]
ರೈಲು ಅಪಘಾತದಲ್ಲಿ ಶಾಸಕರ ದುರ್ಮರಣ : ಆಗಸ್ಟ್ 24 : ಬೆಂಗಳೂರು-ನಾಂದೇಡ್ ರೈಲು ಅಪಘಾತದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಮೃತಪಟ್ಟರು. ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ಗ್ರಾನೈಟ್ ತುಂಬಿದ ಲಾರಿ ರೈಲಿನ ಎಸಿ ಕೋಚ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆಯಿತು.

ಬಿಬಿಎಂಪಿ ಫಲಿತಾಂಶ ಪ್ರಕಟ : ಆಗಸ್ಟ್ 25 : 197 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತು. ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ಕಾಂಗ್ರೆಸ್ 76 ಸ್ಥಾನಗಳಿಸಿತು. ಜೆಡಿಎಸ್ 14 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು.
ಕಬ್ಬನ್ ಪಾರ್ಕ್ ಠಾಣೆಗೆ ಮೋದಿ ಭೇಟಿ : ಆಗಸ್ಟ್ 26 : ಪ್ರಧಾನಿ ನರೇಂದ್ರ ಮೋದಿ ಅವರು ಆ.26ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಲು ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಠಾಣೆಗೆ ಭೇಟಿ ನೀಡಿದ್ದರು. ದೇಶದಲ್ಲಿನ 3 ಪೊಲೀಸ್ ಠಾಣೆಗಳನ್ನು ನರೇಂದ್ರ ಮೋದಿ ಅವರ ವಿಡಿಯೋ ಕಾನ್ಫರೆನ್ಸ್‌ಗೆ ಆಯ್ಕೆ ಮಾಡಲಾಗಿತ್ತು.
ಐಐಟಿ ಪರಿಶೀಲನೆಗೆ ಬಂದ ಕೇಂದ್ರ ತಂಡ : ಆ.27 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆ ಮಾಡಬೇಕು? ಎಂದು ಪರಿಶೀಲನೆ ನಡೆಸಲು ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿತು. ಕರ್ನಾಟಕ ಸರ್ಕಾರ ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ : ಆಗಸ್ಟ್ 28 : ಬಿಬಿಎಂಪಿ ಚುನಾವಣೆ ಫಲಿತಾಂಶ ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟು ಹಾಕಿತು. ಮೇಯರ್ ಪಟ್ಟವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲು ವೇದಿಕೆ ಸಿದ್ಧಗೊಂಡಿತು. ಬೆಂಗಳೂರನ್ನು ಪ್ರತಿನಿಧಿಸುವ ಕಾಂಗ್ರೆಸ್‌ನ ಕೆಲವು ಶಾಸಕರು ಜೆಡಿಎಸ್‌ನ ವಿಧಾನಸಪರಿಷತ್ ಸದಸ್ಯರ ಮೂಲಕ ಈ ಕುರಿತ ಮಾತುಕತೆ ಆರಂಭಿಸಿದರು.
ಎಂ.ಎಂ.ಕಲಬುರ್ಗಿ ಹತ್ಯೆ : ಧಾರವಾಡ, ಆ.30 : ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು. ಧಾರವಾಡದ ಕಲ್ಯಾಣ ನಗರದಲ್ಲಿರುವ ಎಂ.ಎಂ.ಕಲಬುರ್ಗಿ ಅವರ ಮನೆಗೆ ಬೆಳಗ್ಗೆ 8.40ರ ಸುಮಾರಿಗೆ ಆಗಮಿಸಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಹಣೆ ಮತ್ತು ಎದೆಗೆ ಗುಂಡು ಹೊಕ್ಕಿದ ಕಲಬುರ್ಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.












Click it and Unblock the Notifications