'ಲೋಕಸಭಾ ಚುನಾವಣೆ ಗೆದ್ದರೇ ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ': ಭವಿಷ್ಯ ನುಡಿದ ಸಿಎಂ ಪುತ್ರ
ಹಾಸನ, ಜನವರಿ 17: ರಾಜ್ಯ ಕಾಂಗ್ರೆಸ್ ನಲ್ಲಿ ಪದೇ ಪದೇ ಮುಖ್ಯಮಂತ್ರಿ ಸ್ಥಾನದ ಕುರಿತು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣದ ನಡುವೆ ಮುಖ್ಯಮಂತ್ರಿ ಸ್ಥಾನದ ಕುರಿತು ಚರ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕಿ ಹಾಕಿದ್ದು, ಮತ್ತೆ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಚರ್ಚೆ ಲೋಕಸಭಾ ಚುನಾವಣಾ ತಯಾರಿ ಹೊತ್ತಲಿ ಮುನ್ನಲೆಗೆ ಬಂದಿದೆ.
ಹೌದು, ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೊಸ ಭವಿಷ್ಯ ನುಡಿದಿದ್ದಾರೆ. ಲೋಕಸಭಾ ಚುನಾವಣೆ ಗೆದ್ದರೇ ಸಿದ್ದರಾಮಯ್ಯ ಅವರೇ ಪೂರ್ಣಾವದಿ ಸಿಎಂ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಿಎಂ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಚುನಾವಣೆಗೂ ಮೊದಲು ಐದು ಗ್ಯಾರೆಂಟಿ ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಜಾರಿ ಮಾಡಿದ್ದಾರೆ. ಮತ್ತೊಮ್ಮೆ ನುಡಿದಂತೆ ನಡೆಯುವದಾಗಿ ಸಾಬೀತು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನ ಕೊಂಡಾಡಿದ್ದಾರೆ. ಬಡವರಿಗಾಗಿ, ಶೋಷತರಿಗೆ ಕೆಲಸ ಮಾಡುವ ಹಂಬಲ ಕಾಂಗ್ರೆಸ್‌ಗೆ ಇದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ನಿಮ್ಮ ಬೆಂಬಲ ನೀಡಬೇಕು. ಮುಂದೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ. ಹೆಚ್ಚು ಸ್ಥಾನಗಳನ್ನು ಗೆದ್ದರೆ ನೈತಿಕವಾಗಿ ಅವರಿಗೆ ಮತ್ತಷ್ಟು ಬೆಂಬಲ ಸಿಗುತ್ತದೆ ಎಂದು ಹೇಳಿದರು.

ಗ್ಯಾರೆಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣ ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು. ಹೆಚ್ಚು ಸ್ಥಾನ ಗೆದ್ದರೆ ನಮಗೆ ಬಲ ಬರುತ್ತೆ, ಇದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಬೇಕು. ಆಗ ಸಿದ್ದರಾಮಯ್ಯನವರ ಬಲ ಹೆಚ್ಚಿಲಿದ್ದು ಮುಂದಿನ ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರೆಸುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯಲು ಸಾಧ್ಯವಾಗುತ್ತೆ. ಹಾಗಾಗಿ ನಿಮ್ಮ ಬಂಬಲ ಆಶೀರ್ವಾದ ಅವರ ಮೇಲೆ ಇರಲಿ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಗಳು ಮುಂದಿನ ಪ್ರದಾನಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಅವರು ಕನಕ ಜಯಂತಿ ಆಚರಣೆಗೆ ಶುರು ಮಾಡಿದರು, ಅವರು ಸಾರಿಗೆ ಸಚಿವರಾಗಿ ಅಧಿಕಾರ ಸಿಕ್ಕಿದ್ದರಿಂದ ಇದು ಸಾಧ್ಯ ಆಯ್ತು. ಒಂದು ಸಮುದಾಯದ ರಾಜಕೀಯವಾಗಿ ಬೆಳೆದರೆ ಅಭಿವೃದ್ಧಿ ಸಾಧ್ಯ. ನೀವು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದರಿಂದ ಅವರು ಎರಡನೇ ಬಾರಿ ಸಿಎಂ ಆದರು ಎಂದು ಯತೀಂದ್ರ ಹೇಳಿದ್ದಾರೆ.












Click it and Unblock the Notifications