ಆಪ್ ಸಭೆಗಳಲ್ಲಿ ರವಿ ಕೃಷ್ಣಾರೆಡ್ಡಿ ಏಕೆ ಕಾಣಿಸಿಕೊಳ್ಳುತ್ತಿಲ್ಲ?

Posted By:
Subscribe to Oneindia Kannada

ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತ, ಅಧಿಕಾರ ದುರ್ಬಳಕೆಗಳ ವಿರುದ್ಧ ಸಿಡಿದೆದ್ದು ನಿಂತವರು ಆಮ್ ಆದ್ಮಿ ಪಕ್ಷದ ರಾಜ್ಯದ ಸಹಸಂಚಾಲಕ ರವಿ ಕೃಷ್ಣಾರೆಡ್ಡಿಯವರು. ತಮಗನಿಸಿದ್ದನ್ನು ಅತ್ಯಂತ ನಿರ್ಭಿಡೆಯಿಂದ, ಸ್ಪಷ್ಟವಾಗಿ ಹೇಳುವ ನಾಯಕರುಗಳಲ್ಲಿ ರವಿ ಕೃಷ್ಣಾರೆಡ್ಡಿಯವರೂ ಒಬ್ಬರು.

ಅಧಿಕೃತವಾಗಿ ಆಮ್ ಆದ್ಮಿ ಪಕ್ಷದ ಪರ ಸಭೆಗಳಲ್ಲಿ ಕಾಣಿಸಿಕೊಳ್ಳುವುದಿರಲಿ, ಖಾಸಗಿಯಾಗಿ ಬೇರೆಲ್ಲಿಗೆ ಹೋದಾಗಲೂ ರವಿ ಕೃಷ್ಣಾರೆಡ್ಡಿಯವರು ಆಮ್ ಆದ್ಮಿ ಪಕ್ಷದ ಹೆಗ್ಗುರುತಾದ ಬಿಳಿ ಟೋಪಿಯನ್ನು ಹಾಕಿಕೊಂಡೇ ಹೋಗುತ್ತಾರೆ. [ರವಿ ರೆಡ್ಡಿ ಲೋಕಸತ್ತಾ ಬಿಟ್ಟು ಏಕೆ ಆಪ್ ಸೇರಿದರು?]

ಆದರೆ, ಇತ್ತೀಚಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ, ಜಾಥಾಗಳಲ್ಲಿ, ಪ್ರಚಾರ ಕಾರ್ಯಗಳಲ್ಲಿ ಎಲ್ಲಿಯೂ ಅವರು ಕಂಡುಬಂದಿಲ್ಲ. ಇದಕ್ಕೆ ಕಾರಣ, ಅವರ ವಿರುದ್ಧ ಆಮ್ ಆದ್ಮಿ ಪಕ್ಷ ತೆಗೆದುಕೊಂಡಿರುವ ಶಿಸ್ತುಕ್ರಮ. 'ನಾನು ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಶಿಸ್ತುಕ್ರಮವನ್ನು ಸಾರ್ವಜನಿಕರಿಗೆ ತಿಳಿಸಬೇಕು' ಎನ್ನುವುದು ಅವರ ವಾದ.

ಈ ಕಾರಣಕ್ಕಾಗಿಯೇ, ಈ ಸಂಗತಿಯನ್ನು ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ ಮಾಧ್ಯಮಗಳಿಗೆ ತಿಳಿಸದಿದ್ದರೂ, ರವಿ ಕೃಷ್ಣಾರೆಡ್ಡಿಯವರು ತಾವೇ ಸ್ವತಃ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೆ, ಏನೇ ಶಿಸ್ತುಕ್ರಮ ತೆಗೆದುಕೊಂಡರೂ ತಾವು ಎಂದೂ ಆಮ್ ಆದ್ಮಿ ಪಕ್ಷವನ್ನು ತೊರೆಯುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅವರ ಪತ್ರಿಕಾ ಹೇಳಿಕೆ ಕೆಳಗಿನಂತಿದೆ. [ಎಎಪಿಯಿಂದ ಲಂಚಮುಕ್ತ ಕರ್ನಾಟಕ ಅಭಿಯಾನ]

Why Ravi Krishna Reddy is not appearing in AAP meets

ಆತ್ಮೀಯರೇ,

ನಿಮಗೆಲ್ಲ ಗೊತ್ತಿರುವ ಹಾಗೆ ಕಳೆದ ನವೆಂಬರ್‌ನಲ್ಲಿ (2015) ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಪುನರಾರಚನೆಗೊಂಡು ಸಂಚಾಲಕ ಮತ್ತು ಹತ್ತು ಸಹಸಂಚಾಲಕರ ಸಮಿತಿಯನ್ನು ಘೋಷಿಸಲಾಗಿತ್ತು. ಆ ಹತ್ತು ಸಹಸಂಚಾಲಕರಲ್ಲಿ ನಾನೂ ಒಬ್ಬನಾಗಿದ್ದೆ. ಇಲ್ಲಿಯವರೆಗೂ ನನ್ನದೇ ಇತಿಮಿತಿಯಲ್ಲಿ ನಾನು ಪಕ್ಷ ಕೊಟ್ಟ ಕೆಲಸ ನಿರ್ವಹಿಸುತ್ತಾ ಬಂದಿದ್ದೇನೆ.

ಇದೇ ಸೋಮವಾರ (11-07-2016) ರಾಜ್ಯ ಸಮಿತಿಯ ಸಭೆ ನಡೆಯಿತು. ಆ ಸಭೆಯಲ್ಲಿ ನಾನು ಪಕ್ಷದ ರಾಜ್ಯ ಸಮಿತಿಯ ಸೂಚನೆಯೊಂದನ್ನು ಪಾಲಿಸದ ಕಾರಣಕ್ಕಾಗಿ ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಅದು ತೀರ್ಮಾನವಾಗುವ ತನಕ ಪಕ್ಷದಲ್ಲಿ ನನ್ನ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸಬಾರದು ಎಂದು ತೀರ್ಮಾನಿಸಲಾಯಿತು.

ಆದರೆ ಇದನ್ನು ಪಕ್ಷದ ರಾಜ್ಯ ಸಮಿತಿ ಮಾಧ್ಯಮಗಳಿಗೆ ಇಲ್ಲಿಯವರೆಗೂ ತಿಳಿಸಿಲ್ಲ. ನಾನು ಒಬ್ಬ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿರುವ ವ್ಯಕ್ತಿ. ಈ ವಿಚಾರ ಸಾರ್ವಜನಿಕವಾಗಿ ತಿಳಿಸದೇ ಇದ್ದ ಪಕ್ಷದಲ್ಲಿ ಅದರಿಂದ ಕೆಲವು ಪ್ರಮಾದಗಳು ಆಗಬಹುದಾದ್ದರಿಂದ ಮತ್ತು ತಪ್ಪು ಅಭಿಪ್ರಾಯಗಳು ಮೂಡಬಹುದಾದ್ದರಿಂದ, ಇಂದು ನಾನೇ ಈ ವಿಚಾರವಾಗಿ ಈ ಪತ್ರಿಕಾ ಪ್ರಕಟಣೆ ನೀಡುತ್ತಿದ್ದೇನೆ. [ರವಿಕೃಷ್ಣಾರೆಡ್ಡಿಯರ 'ಎದೆಯ ಕೂಗು ಮೀರಿ'ದ ಮಾತುಗಳು..]

Why Ravi Krishna Reddy is not appearing in AAP meets

ಈ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಪಕ್ಷದ ರಾಜ್ಯ ಸಮಿತಿಯ ನಿರ್ಧಾರವನ್ನು ನಾನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇನೆ. ಇಲ್ಲಿಯವರೆಗೂ ನನಗೆ ರಾಜ್ಯ ಶಿಸ್ತು ಸಮಿತಿಯಿಂದ ಪತ್ರ ಬಂದಿಲ್ಲ. ಬಂದ ತಕ್ಷಣ ಅವರ ಮುಂದೆಯೂ ಹೋಗಿ ನನ್ನ ವಿಚಾರ ಮಂಡಿಸುತ್ತೇನೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ.

ಇಡೀ ದೇಶಕ್ಕೆ ಆಡಳಿತ ಮಾದರಿಯನ್ನು ದೆಹಲಿ ರಾಜ್ಯ ಸರ್ಕಾರದ ಮೂಲಕ ರೂಪಿಸುತ್ತಿರುವ ಆಮ್ ಆದ್ಮಿ ಪಕ್ಷದ ಕೆಲಸದ ಬಗ್ಗೆ ಒಬ್ಬ ಕಾರ್ಯಕರ್ತನಾಗಿ ಹಾಗೂ ಸದಸ್ಯನಾಗಿ ನನಗೆ ಅಪಾರ ಹೆಮ್ಮೆ ಇದೆ. ಮತ್ತು ಇಲ್ಲಿಯೂ ನಾವು ಕೈಗೆತ್ತಿಕೊಂಡ ಹಲವಾರು ವಿಚಾರ ಮತ್ತು ಹೋರಾಟಗಳ, ಜೊತೆಗೂಡಿ ಕೆಲಸ ಮಾಡಿದ ಪ್ರಾಮಾಣಿಕ ಕಾರ್ಯಕರ್ತ ಸಂಗಾತಿಗಳ ಬಗ್ಗೆಯೂ ಹೆಮ್ಮೆಯಿದೆ.

ಮುಂದೆಯೂ ನಾನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಚಳವಳಿಗಳಲ್ಲಿ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿರುತ್ತೇನೆ. ರಾಜ್ಯದಲ್ಲಿ ಹತ್ತಾರು ಜ್ವಲಂತ ಸಮಸ್ಯೆಗಳಿವೆ. ಅವುಗಳಿಗೆಲ್ಲ ನಾವು ದಾರಿ ಮತ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಮತ್ತು ಮಾಡುವ ಎಲ್ಲರ ಜೊತೆಯೂ ಎಂದಿನಂತೆ ಜೊತೆಗೂಡಿ ಕೆಲಸ ಮುಂದುವರೆಸುತ್ತಿರುತ್ತೇನೆ.

ಇಂತಿ,
ರವಿ ಕೃಷ್ಣಾರೆಡ್ಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why Ravi Krishna Reddy, co-convener of Aam Admi Pary Karnataka, is not appearing in AAP meets, press conferences, protests? The leader himself has explained what has happened in their party. Read the letter released to the media by Ravi Krishna Reddy.
Please Wait while comments are loading...