ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಯಾರು ಸೇವಿಸಬಹುದು?
ಬೆಂಗಳೂರು, ಏಪ್ರಿಲ್ 19 : ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೊನಾ ವೈರಸ್ ಆತಂಕ ಸೃಷ್ಟಿ ಮಾಡಿದೆ. ಇದರಿಂದಾಗಿ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಬೇಡಿಕೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ ಅಮೆರಿಕಕ್ಕೆ ಭಾರತ ಮಾತ್ರೆಗಳನ್ನು ಪೂರೈಕೆ ಮಾಡಿತ್ತು.
ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳಿಗೆ ಇಷ್ಟೊಂದು ಬೇಡಿಕೆ ಏಕೆ? ಎಂಬುದು ಸದ್ಯದ ಪ್ರಶ್ನೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಶಿಫಾರಸಿನ ಪ್ರಕಾರ ಕೋವಿಡ್ - 19ನಿಂದ ಅಧಿಕ ಅಪಾಯವಿರುವ ಜನರಿಗೆ ಪ್ರತಿಬಂಧಕ ಔಷಧಿಯಾಗಿ ಹೈಡ್ರೋಕ್ಸಿಕ್ಲೋರೋಕ್ವಿನ್ ನೀಡಬಹುದಾಗಿದೆ.
ಕರ್ನಾಟಕ ಸರ್ಕಾರ ಯಾರಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ನೀಡಬಹುದು?, ಎಷ್ಟು ನೀಡಬೇಕು? ಎಂಬ ಕುರಿತು ಸುತ್ತೋಲೆ ಹೊರಡಿಸಿದೆ. ಮಾತ್ರೆಗಳನ್ನು ಆದ್ಯತೆಯ ಮೇಲೆ ನೀಡಬೇಕಾದ ಅಗತ್ಯವಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಹಿರಿಯ ನಾಗರೀಕರು, ಈ ಹಿಂದೆಯೇ ಹೃದ್ರೋಗ ಸಮಸ್ಯೆಗಳಿಂದ ಬಳಲುತ್ತಿರುವವರು, ಜಿ6ಡಿಪಿ ಕೊರತೆ ಹೊಂದಿರುವವರು ಮತ್ತು 4-ಅಮಿನೋಕ್ವಿನೋಲೋನ್ಸ್ ಇದಕ್ಕೆ ಅತಿ ಸಂವೇದಿಯಾಗಿರುವ ವ್ಯಕ್ತಿಗಳು ಮತ್ತು ಇತರೆ ಧೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ವೈದ್ಯಕೀಯ ಪರೀಕ್ಷೆ, ತಜ್ಞರ ಸಲಹೆಯ ಬಳಿಕ ಹೈಡ್ರೋಕ್ಸಿಕ್ಲೋರೋಕ್ವಿನ್ ಪಡೆಯಬಹುದು.

ಯಾರು-ಯಾರಿಗೆ ನೀಡಬೇಕು?
ಸರ್ಕಾರದ ಸೂಚನೆಯಂತೆ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ನೀಡಬಹುದು.
ಕೋವಿಡ್ - 19 ತಪಾಸಣೆಗಾಗಿ ಮನೆ-ಮನೆಗಳಿಗೆ ಭೇಟಿ ನೀಡುತ್ತಿರುವ ಕಣ್ಗಾವಲು ತಂಡಗಳಲ್ಲಿ ಕೆಲಸ ಮಾಡುತ್ತಿರುವ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ನೀಡಬಹುದು.
ಪೊಲೀಸ್ ಇಲಾಖೆ ಹಾಗೂ ಇತರೆ ಯಾವುದೇ ಇಲಾಖೆಯಿಂದ ಕೋವಿಡ್ - 19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ನೀಡಬಹುದು.

ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ
ಕೋವಿಡ್ - 19 ದೃಢಪಟ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದವರಿಗೆ
ರೋಗ ನಿರೋಧಕ ಕ್ರಮವಾಗಿ ನಿಯಂತ್ರಿತ ವಲಯದಲ್ಲಿ ಕೆಲಸ ಮಾಡುವವರಿಗೆ ನೀಡಬಹುದು
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳಿಗೆ ನೀಡಬಹುದು ಎಂದು ಸೂಚಿಸಲಾಗಿದೆ.
15 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಶಿಫಾರಸು ಮಾಡಬಾರದು ಎಂದು ತಿಳಿಸಲಾಗಿದೆ.

ಸಿಬ್ಬಂದಿ ವರ್ಗದವರಿಗೆ ನೀಡಬಹುದು
ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ - 19 ಸಂಬಂಧ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ವರ್ಗಕ್ಕೆ ನೀಡಬಹುದು.
ಅಂಬ್ಯುಲೆನ್ಸ್ ವಾಹನದಲ್ಲಿ ಕೋವಿಡ್ - 19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ನೀಡಬಹುದು.
ಕೋವಿಡ್ - 19 ಸಂಬಂಧ ಕೆಲಸ ನಿರ್ವಹಣೆ ಮಾಡುತ್ತಿರುವ ಖಾಸಗಿ ವೈದ್ಯಕೀಯ ವೃಂದದ ಸಿಬ್ಬಂದಿಗೆ ನೀಡಬಹುದು.

ಔಷಧಿ ಪ್ರಮಾಣ ಮತ್ತು ಚಿಕಿತ್ಸೆ
ಕೋವಿಡ್ - 19 ಶಂಕಿತ ಅಥವ ಖಚಿತಪಟ್ಟ ಪ್ರಕರಣಗಳ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೋಗಲಕ್ಷಣ ಇಲ್ಲದೇ ಇರುವ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಕೋವಿಡ್ - 19 ನಿಯಂತ್ರಿತ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮೊದಲನೇ ದಿನ 400 ಎಂಜಿ ದಿನಕ್ಕೆ 2 ಬಾರಿ. ಮುಂದಿನ 7 ವಾರಗಳು 400 ಎಂಜಿ ವಾರಕ್ಕೆ 1 ಬಾರಿ. ಆಹಾರದೊಡನೆ ಸೇವನೆ.
ಮನೆಗಳಲ್ಲಿ ಇರುವ ಪ್ರಯೋಗಾಲಯದಿಂದ ಖಚಿತಪಟ್ಟ ಕೋವಿಡ್ - 19 ಪ್ರಕರಣಗಳ ಸಂಪರ್ಕ ಹೊಂದಿದ ರೋಗ ಲಕ್ಷಣ ಇಲ್ಲದವರು. ಮೊದಲ ದಿನ 400 ಎಂಜಿ ದಿನಕ್ಕೆ 2 ಬಾರಿ. ಮುಂದಿನ 3 ವಾರಗಳು 400 ಎಂಜಿ ವಾರಕ್ಕೆ ಒಂದು ಬಾರಿ ಆಹಾರದೊಡನೆ ಸೇವನೆ.












Click it and Unblock the Notifications