C-VIGIL ಮೂಲಕ ಯಾವ-ಯಾವ ಅಕ್ರಮದ ದೂರು ನೀಡಬಹುದು?
ಬೆಂಗಳೂರು, ಮಾರ್ಚ್ 27: ಲೋಕಸಭೆ ಚುನಾವಣೆ 2024 ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳ ಮೇಲೆ ಆಯೋಗ ಕಣ್ಣಿಟ್ಟಿದೆ.
ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಜನರು ಪಾತ್ರವೂ ಅತ್ಯಮೂಲ್ಯವಾಗಿದೆ. ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಮತ್ತು ಚುನಾವಣಾ ಅಕ್ರಮ ತಡೆಯಲು ಭಾರತದ ಚುನಾವಣಾ ಆಯೋಗವು ಸಿ-ವಿಜಿಲ್ (C-Vigil) ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ಈಗ ಎಲ್ಲರ ಬಳಿಯು ಸ್ಮಾರ್ಟ್‍ಫೋನ್ ಇರುವುದು ಸಹಜ. ಅಂಗೈ ತುದಿಯಲ್ಲಿ ಚುನಾವಣಾ ಅಕ್ರಮಗಳ ಕುರಿತು ಸಿ-ವಿಜಿಲ್ ಅಪ್ಲಿಕೇಶನ್ ಮೂಲಕ ದೂರು ನೀಡಬಹುದು. ಮಾದರಿ ನೀತಿ ಸಂಹಿತೆಯ ಯಾವುದೇ ನಿಯಮ ಉಲ್ಲಂಘನೆಯಾಲ್ಲಿ ಜನರು ವರದಿ ಮಾಡಬಹುದು.
ಮತದಾರರ ಯಾವುದೇ ಆಮಿಷಗಳ ಅಥವಾ ಅಕ್ರಮ ಪ್ರಚಾರ ಹಾಗೂ ಸರ್ಕಾರಿ ಸಂಪನ್ಮೂಲಗಳ ದುರುಪಯೋಗ ಅಥವಾ ಯಾವುದೇ ರೀತಿಯ ಉಲ್ಲಂಘನೆಯಾಗಿರಬಹುದು. ಜನರ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿದೆ.
ಡೌನ್‍ಲೋಡ್ ಹೇಗೆ?: ಸ್ಮಾರ್ಟ್‌ಪೋನ್‌ನಲ್ಲಿ ಮೊದಲು ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಸಿ-ವಿಜಿಲ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ನೀವು ಸಾಕ್ಷಿಯಾಗಿರುವ ಯಾವುದೇ ಚುನಾವಣಾ ಸಂಬಂಧಿತ ಉಲ್ಲಂಘನೆಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಸೆರೆಹಿಡಿಯಿರಿ.
ನಿಮ್ಮ ವರದಿಯನ್ನು ಅಪ್ಲಿಕೇಶನ್ ಮೂಲಕ ಅಪ್‍ಲೋಡ್ ಮಾಡಿ, ಘಟನೆ ಮತ್ತು ಸ್ಥಳದ ವಿವರಗಳನ್ನು ಒದಗಿಸಿ. ನಿಮ್ಮ ವರದಿಯನ್ನು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ರವಾನಿಸಲಾಗುತ್ತದೆ.
ಆಪ್ ಓಪನ್ ಮಾಡಿದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಣ, ಮದ್ಯ, ಉಡುಗೊರೆಗಳನ್ನು ಹಂಚುವ ಸಂದರ್ಭದಲ್ಲಿ ಸಾರ್ವಜನಿಕರು ಫೋಟೋ ಮತ್ತು ವಿಡಿಯೋವನ್ನು (2 ನಿಮಿಷ) ಸೆರೆಹಿಡಿದು ಅಪ್‍ಲೋಡ್ ಮಾಡಬಹುದು. ಅಲ್ಲಿನ ವಿಳಾಸವನ್ನು ನಮೂದಿಸಬೇಕು. ಇದು ಸಂಪೂರ್ಣ ಉಚಿತವಾಗಿರಲಿದೆ.
ಯಾವ-ಯಾವ ದೂರು?: ವ್ಯಕ್ತಿಯೊಬ್ಬರು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಹಣ ವಿತರಣೆ ಮಾಡಿದರೆ, ಉಡುಗೊರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೇ ಬ್ಯಾನರ್ ಅಥವಾ ಪೋಸ್ಟರ್, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದಾರಿತ ಭಾಷಣ, ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧದ ಅವಧಿಯಲ್ಲೂ ಪ್ರಚಾರ, ಮತದಾನದ ದಿನದಂದು ಮತದಾರರನ್ನು ಸಾಗಿಸುವುದು ಹೀಗೆ ಯಾವುದೇ ರೀತಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ದೂರು ಕೊಡಬಹುದು.
ಈ ಅಪ್ಲಿಕೇಶನ್‌ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಸಿ-ವಿಜಿಲ್ ನೋಡೆಲ್ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗೆ ಅಧಿಕಾರಿಗಳಿಂದ ಉತ್ತರ ಸಿಗಲಿದೆ. ಇದರಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಆಮಿಷಗಳು ಸಾಕ್ಷಿ ಸಮೇತ ದಾಖಲಾಗಲಿವೆ.
ದೂರಿನೊಂದಿಗೆ ಸೆರೆಹಿಡಿಯಲಾದ ಜಿಪಿಎಸ್ ಮಾಹಿತಿಯು ಅದನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಅಧಿಕಾರಿಗಳ ತಂಡಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಕಳಿಸಲು ಇದು ಅನುಕೂಲ ಮಾಡಿಕೊಡುತ್ತದೆ.
ದೂರು ನೀಡುವಾಗ ದೂರುದಾರರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುತ್ತದೆ. ಚುನಾವಣೆ ಮುಗಿಯುವವರೆಗೂ ಮೂರು ಪಾಳಿಗಳಲ್ಲಿ 24 ಗಂಟೆಗೂ ಚುನಾವಣಾ ಸಿಬ್ಬಂದಿ ಈ ದೂರುಗಳನ್ನು ಪರಿಹರಿಸಲು ಕಾರ್ಯ ನಿರ್ವಹಿಸಲಿದ್ದಾರೆ.












Click it and Unblock the Notifications