ಉಕ್ರೇನ್ ನಲ್ಲಿ ಮೆಡಿಕಲ್ ಪದವಿ ಮಾಡಿದವರು ಏನಾಗ್ತಾರೆ?
ಬೆಂಗಳೂರು, ಮಾ. 02: ಕಡಿಮೆ ಶುಲ್ಕದಲ್ಲಿ ಮೆಡಿಕಲ್ ಮಾಡಬಹುದು ಎಂಬ ಕಾರಣಕ್ಕೆ ಉಕ್ರೇನ್‌ಗೆ ಹೋಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೂರದ ಬೆಟ್ಟ ನುಣ್ಣಗೆ ಎಂಬ ಸತ್ಯ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಡಾಕ್ಟರ್ ಆಗಿ ವೈಟ್ ಕೋಟ್ ಆಗಬೇಕೆಂಬ ಆಸೆ ಹೊತ್ತು ಇವತ್ತಿನ ವಿದ್ಯಾರ್ಥಿಗಳು ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದಾರೆ. ಉಕ್ರೇನ್‌ನಲ್ಲಿ ಮೆಡಿಕಲ್ ಮಾಡಿ ಬಂದವರು ಪೂರ್ಣ ಪ್ರಮಾಣದಲ್ಲಿ ವೈದ್ಯರಾಗಿ ಸರ್ಕಾರಿ ಸೇವೆಗೆ ಸೇರುವುದು ಗಗನ ಕುಸುಮ. ವೈದ್ಯಕೀಯ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಚಾಣಾಕ್ಷತೆಯಿಂದ ಆಯ್ಕೆ ಮಾಡಿಕೊಂಡರೆ ಭಾರತದಲ್ಲಿರುವ ಅವಕಾಶಗಳು ಬೇರೆ ಕಡೆ ಇಲ್ಲ. ವೈದ್ಯ ಎನಿಸಿಕೊಳ್ಳುವ ಆಸೆಯಿಂದ ವಿದ್ಯಾರ್ಥಿಗಳು ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ತಜ್ಞ ವೈದ್ಯ ಡಾ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಕೊರೊನಾ ಸೋಂಕು ಕುರಿತು ಡಾ. ಶಿವಕುಮಾರ್ ಹೇಳಿದ್ದ ಹೇಳಿಕೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದೀಗ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಅಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿಗಳು, ಅವರು ಪಡೆಯುವ ವೈದ್ಯಕೀಯ ಪದವಿ ಬಗ್ಗೆ ಇಲ್ಲಿ ಡಾ. ಶಿವಕುಮಾರ್ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಭಾರತ ಮೆಡಿಕಲ್ ಟೂರಿಸಂ ಕೇಂದ್ರ
ಭಾರತದಲ್ಲಿ ಮೆಡಿಕಲ್ ಸೀಟು ತುಂಬಾ ದುಬಾರಿಯಾಗಿದೆ ನಿಜ. ಆದರೆ ಬಹುತೇಕರು ಎಂಬಿಬಿಎಂಸ್ ಮಾಡಬೇಕು ಎಂದು ಮುಂದಾಗುತ್ತಾರೆ. ಭಾರತದ ವೈದ್ಯಕೀಯ ಕ್ಷೇತ್ರ ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಮಾನವಾಗಿದೆ. ವಿಶ್ವದ ಹಿಂದುಳಿದ ರಾಷ್ಟ್ರಗಳಾದ ನೇಪಾಳ, ಬರ್ಮಾ, ಶ್ರೀಲಂಕಾ, ಆಫ್ರಿಕನ್ ಪ್ರಜೆಗಳು ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಭಾರತ ಮೆಡಿಕಲ್ ಟೂರಿಸಂ ಕೇಂದ್ರವಾಗಿ ರೂಪಾಂತರಗೊಳ್ಳುತ್ತಿದೆ. ಇಲ್ಲಿ ಕೇವಲ ಎಂಬಿಬಿಎಸ್‌ಗೆ ಸೀಮಿತವಾಗದೇ, ಪ್ರಾಯೋಗಾಲಯ, ಮನೋ ವಿಜ್ಞಾನ, ಮೆಡಿಕಲ್ ಟೂರಿಸಂ, ಮೈಕ್ರೋ ಬಯಾಲಜಿ, ನ್ಯಾಚುರೋಪತಿ, ಮೆಡಿಕಲ್‌ಗೆ ಪೂರಕ ಸಾಕಷ್ಟು ಕೋರ್ಸ್‌ಗಳು ಇವೆ. ಈ ಕೋರ್ಸ್‌ಗಳು ಅಧ್ಯಯನ ಮಾಡುವುದರಿಂದ ವೈದ್ಯರಿಗಿಂತಲೂ ಗುಣಮಟ್ಟದ ಜೀವನ ಮಾಡಬಹುದು, ಸೇವೆಯನ್ನೂ ಸಲ್ಲಿಸಬಹುದು. ಆದರತ್ತ ಈಗಿನ ವಿದ್ಯಾರ್ಥಿಗಳು ಮನಸು ಮಾಡುತ್ತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಮನಸ್ಥಿತಿಯನ್ನೇ ಬದಲಾಯಿಸಬೇಕಿದೆ ಎಂದು ಡಾ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಉಕ್ರೇನ್‌ನಲ್ಲಿ ಮೆಡಿಕಲ್ ಡಿಗ್ರಿ:
ಕೇವಲ 25 ಲಕ್ಷ ರೂಪಾಯಿಗೆ ಮೆಡಿಕಲ್ ಮಾಡಬಹುದು ಎಂಬ ಕಾರಣಕ್ಕೆ ಸಾಮಾನ್ಯ ವಿದ್ಯಾರ್ಥಿಗಳು ಕೂಡ ಉಕ್ರೇನ್‌ಗೆ ಮೆಡಿಕಲ್ ಮಾಡಲು ಹೋಗುತ್ತಾರೆ. ವಾಸ್ತವದಲ್ಲಿ ಅವರು ಅಲ್ಲಿ ವೈದ್ಯಕೀಯ ಪದವಿ ಮುಗಿಸಿ ಬಂದರೂ ಭಾರತದಲ್ಲಿ FMGET ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಅವರು ವೈದ್ಯರಾಗಿ ನೋಂದಣಿ ಮಾಡಲು ಅರ್ಹರಾಗುತ್ತಾರೆ. ವಿದೇಶದಲ್ಲಿ ಮೆಡಿಕಲ್ ಪದವಿ ಮಾಡಿ ಬರುವರಲ್ಲಿ ಶೇ. 05 ರಷ್ಟು ಮಂದಿ ಸಹ ಈ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟವಾಗಿದೆ. ಅವರು ಅನಿವಾರ್ಯವಾಗಿ ಕೇವಲ ನರ್ಸಿಂಗ್ ಹೋಮ್‌ಗಳಿಗೆ ಸೀಮಿತವಾಗಬೇಕಾಗುತ್ತದೆ. ಈ ವಾಸ್ತವ ಅರಿಯದೇ ಅಲ್ಲಿ ಮೆಡಿಕಲ್ ಮಾಡಲು ಹೋಗಿ ಅನೇಕ ಕಷ್ಟಗಳನ್ನು ಎದುರಿಸುವಂತಾಗುತ್ತದೆ. ಈ ವಾಸ್ತವ ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು. ಮೆಡಿಕಲ್ ಮಾಡಬಾರದು ಎಂಬಂತಲ್ಲ. ಅದೇ ಒಂದು ವರ್ಷ ತಡವಾದರೂ ಸರ್ಕಾರಿ ಕೋಟಾದಡಿ ಸೀಟು ಪಡೆದು ಭಾರತದಲ್ಲಿಯೇ ಮೆಡಿಕಲ್ ಮಾಡಲು ವಿಫುಲ ಅವಕಾಶಗಳಿವೆ. ಮಿಗಿಲಾಗಿ ಮೆಡಿಕಲ್‌ಗೆ ಪೂರಕ ಅನೇಕ ಕೋರ್ಸ್‌ಗಳಿವೆ. ಅವುಗಳಿಗೆ ಆದ್ಯತೆ ನೀಡಿದರೆ ವಿದ್ಯಾರ್ಥಿಗಳು 26 ವರ್ಷದೊಳಗೆ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಡಾ. ಶಿವಕುಮಾರ್ ಸಹೆ ನೀಡಿದ್ದಾರೆ.

ಭಾರತದಲ್ಲಿ ದುಬಾರಿ ಶುಲ್ಕ:
ಭಾರತದಲ್ಲಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದರೂ ವರ್ಷಕ್ಕೆ ಹತ್ತು ಲಕ್ಷ ರೂ. ವೆಚ್ಚ ಬರುತ್ತದೆ. ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳಿಗೂ ವಾರ್ಷಿಕ 25 ಲಕ್ಷ ರೂ. ವೆಚ್ಚ ಮಾಡಬೇಕಾಗಿದೆ. ಇನ್ನು ಖಾಸಗಿ ಕಾಲೇಜುಗಳ ಮ್ಯಾನೇಜ್ ಮೆಂಟ್ ಕೋಟಾದಡಿ ಸೀಟು ಪಡೆಯಲು ಕನಿಷ್ಠ 1 ರಿಂದ 2 ಕೋಟಿ ಪಾವತಿಸಬೇಕು. ಭಾರತದಲ್ಲಿ ಮೆಡಿಕಲ್ ಶಿಕ್ಷಣ ಎಂಬುದು ಜನ ಸಾಮಾನ್ಯರ ಕೈಗೆ ಎಟುಕದ ಪದವಿಯಾಗಿ ರೂಪಾಂತರಗೊಂಡಿದೆ. ಹೀಗಾಗಿ ಮೆಡಿಕಲ್ ಕನಸು ಕಾಣುವ ವಿದ್ಯಾರ್ಥಿಗಳು ಅತಿ ಕಡಿಮೆ ಹಣಕ್ಕೆ ಮೆಡಿಕಲ್ ಪದವಿ ಪಡೆಯಬಹುದು ಎಂದು ಉಕ್ರೇನ್ ನತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳೇ ಹೆಚ್ಚು ಉಕ್ರೇನ್‌ನಲ್ಲಿ ಮೆಡಿಕಲ್ ಮಾಡುತ್ತಿರುವ ಸಂಗತಿ ಇದೀಗ ಹೊರ ಬಿದ್ದಿದೆ. ಉಕ್ರೇನ್‌ನಲ್ಲಿ ಕರ್ನಾಟಕ ಮೂಲದ 2 ಸಾವಿರ ವಿದ್ಯಾರ್ಥಿಗಳು ನೆಲೆಸಿದ್ದಾರೆ. ಇನ್ನು ಬೆಂಗಳೂರಿನ ವೈದ್ಯರು ಹೇಳುವುದು ನೋಡಿದರೆ, ಅಲ್ಲಿ ಮೆಡಿಕಲ್ ಡಿಗ್ರಿ ಪಡೆದರೂ ಇಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಸರ್ಕಾರಿ ಸೇವೆಗೆ ಸೇರಲು ಸಾಧ್ಯವೇ ಇಲ್ಲ. ಉನ್ನತ ಪದವಿ ಪಡೆಯಲು ಅರ್ಹರಾಗುವುದಿಲ್ಲ. ಪುನಃ ಅದಕ್ಕೂ ಅವರು ವಿದೇಶಗಳಿಗೆ ಹೋಗಬೇಕಾಗುತ್ತದೆ. ಈ ತಾಂತ್ರಿಕ ಸಮಸ್ಯೆ ಅರಿಯದೇ ಹೊರ ದೇಶಗಳಲ್ಲಿ ಮೆಡಿಕಲ್ ಓದುವ ವಿದ್ಯಾರ್ಥಿಗಳು ಜೀವನ ಪರ್ಯಂತ ಅರೆ ವೈದ್ಯರಂತೆ ಕೆಲಸ ಮಾಡಬೇಕಾಗುತ್ತದೆ.

ಮೆಡಿಕಲ್ ಶಿಕ್ಷಣ ಗಗನ ಕುಸುಮ:
ರಾಜ್ಯದಲ್ಲಿರುವ ಬಹುತೇಕ ಮೆಡಿಕಲ್ ಕಾಲೇಜುಗಳು ರಾಜಕಾರಣಿಗಳ ಒಡೆತನಕ್ಕೆ ಸೇರಿವೆ. ಕಾನೂನು ರೂಪಿಸುವರೇ ಅವರೇ. ಹೀಗಾಗಿ ಜನ ಸಾಮಾನ್ಯರು ಮೆಡಿಕಲ್ ಓದಲಾರದಂತಹ ಶುಲ್ಕವನ್ನು ನಿಗದಿ ಮಾಡಿದ್ದಾರೆ. ಮೆಡಿಕಲ್ ಶಿಕ್ಷಣ ಒಂದು ವ್ಯಾಪಾರವಾಗಿ ರೂಪಾಂತರಗೊಂಡಿದೆ. ಆಡಳಿತ ರೂಢ ಸರ್ಕಾರಗಳು ಖಾಸಗಿ ಕಾಲೇಜುಗಳ ಮಾತಿನಂತೆ ಕುಣಿಯುತ್ತಿವೆ. ದೇಶದಲ್ಲಿ ಮೆಡಿಕಲ್ ಶಿಕ್ಷಣ ಜನ ಸಾಮಾನ್ಯರು ಮಾಡುವ ಕಾಲ ಮತ್ತೆ ಬರುತ್ತಾ ಅನ್ನೋದು ಯಕ್ಷ ಪ್ರಶ್ನೆ.












Click it and Unblock the Notifications