ಕೈ ಪಾಳಯದಲ್ಲಿ ಭುಗಿಲೆದ್ದ ಕಿಚ್ಚು; ನಾನು ಯಾವತ್ತಿದ್ರೂ ಸಿದ್ದರಾಮಯ್ಯ ಪರ ಎಂದ ಜಮೀರ್
ಬೆಂಗಳೂರು, ಅಕ್ಟೋಬರ್ 30: ಎರಡೂವರೆ ವರ್ಷದ ಬಳಿಕ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಶಾಸಕರ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ನಾನು ಯಾವತ್ತಿದ್ರೂ ಸಿದ್ದರಾಮಯ್ಯ ಪರ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಅತನಾಡಿದ ಅವರು,ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದಕ್ಕೆ ಯಾರು ವಿರೋಧ ಮಾತನಾಡುವ ಹಾಗೆ ಇಲ್ಲ.
ನಾವು ನಮ್ಮ ಅಭಿಪ್ರಾಯ ಹೇಳಬಹುದು ಅಷ್ಟೆ. ನಾನು ಯಾವತ್ತು ಇದ್ದರು ಸಿದ್ದರಾಮಯ್ಯ ಪರ, ಇವತ್ತು ನಾನು ಸಿದ್ದರಾಮಯ್ಯ ಪರನೇ. ನನ್ನ ಅಭಿಪ್ರಾಯ ನಾನು ಹೇಳಬಹುದು. ಆದರೆ ತೀರ್ಮಾನ ನಾನು ತೆಗೆದುಕೊಳ್ಳೋಕೆ ಆಗುತ್ತಾ?. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ನಾವು ಬದ್ದ ಎಂದು ಹೇಳಿದರು.

ನಮ್ಮ ಸಮುದಾಯಕ್ಕೆ ಸರ್ಕಾರ ಬದಲಾಯಿಸೋ ಶಕ್ತಿ ಇದೆ ಎಂಬ ರಾಜಾ ವೆಂಟಕಪ್ಪ ನಾಯಕ ಹೇಳಿಕೆ ವಿಚಾರವಾಗಿ ಮಾತನಾಡಿ, ಪವರ್ ಶೇರಿಂಗ್ ಬಗ್ಗೆ ಯಾವುದೇ ಚರ್ಚೆ ಅಗಿಲ್ಲ.ಇದೆಲ್ಲ ಮಾಧ್ಯಮಗಳ ಸೃಷ್ಟಿ ಅಷ್ಟೆ. ಬಿಜೆಪಿ ಅವರು ಏನೇ ತಿಪ್ಪರಲಾಗ ಹಾಕಿದ್ರು ಏನು ಮಾಡಲು ಸಾಧ್ಯವಿಲ್ಲ. ನಾವೆಲ್ಲ ಒಗ್ಗಟ್ಟಾಗಿ,ಒಂದಾಗಿ ಇದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬ ಸಚಿವ ಮಹದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಶಾಸಕರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ. ಕೊನೆಯಾದಾಗಿ ನಮ್ಮದು ಹೈಕಮಾಂಡ್ ಪಕ್ಷ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ಧಾರ ಫೈನಲ್, ಅವರು ನಾಳೆ ನನ್ನನ್ನ ತೆಗೆಯಬೇಕು ಅಂದ್ರೆ ತೆಗೆಯಬೇಕು ಅಷ್ಟೆ. ಸಚಿವರ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡುತ್ತಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಆಪರೇಷನ್ ಮಾಡಲು ಪ್ರಯತ್ನ ಮಾಡ್ತಿದ್ದಾರೆ.ಬಿಜೆಪಿ ಅವರು ಆಪರೇಷನ್ ಮಾಡ್ತಿರೋದು ನನ್ನ ಗಮನಕ್ಕೂ ಬಂದಿದೆ. ನನಗೆ ಮಾಹಿತಿಯೂ ಇದೆ, ಅವರು ಏನೇ ಪ್ರಯತ್ನ ಮಾಡಿದ್ರು ಏನು ಮಾಡಲು ಆಗಲ್ಲ.ನಮ್ಮ MLAಗಳಿಗೆ ಅವರು ಆಮಿಷ ಹುಟ್ಟಿಸುತ್ತಿದ್ದಾರೆ. 50 ಕೋಟಿ ಕೊಡ್ತೀನಿ, ಮಂತ್ರಿ ಮಾಡ್ತೀವಿ ಅಂತ ಆಮಿಷ ಒಡ್ಡುತ್ತಿದ್ದಾರೆ.
ಇನ್ನೂ ಬಿಜೆಪಿ ಅವರು ಏನೇ ಮಾಡಿದ್ರು ನಮ್ಮ ಒಬ್ಬ ಶಾಸಕನೂ ಬಿಜೆಪಿಗೆ ಹೋಗಲ್ಲ. ಬಿಜೆಪಿ ಅವರು ಎಷ್ಟೇ ಆಪರೇಷನ್ ಮಾಡಿದ್ರು ಅವರು ಯಶಸ್ವಿಯಾಗಿಲ್ಲ. ನಾವು 140 ಜನ ಇದ್ದೇವೆ. 137 ಕಾಂಗ್ರೆಸ್ ಶಾಸಕರು, 3 ಜನ ಪಕ್ಷೇತರರು ಇದ್ದಾರೆ.ಇವರು ಸರ್ಕಾರ ತೆಗೆಯಬೇಕಾದ್ರೆ 56 ಜನರನ್ನ ಕರೆದುಕೊಂಡು ಹೋಗಬೇಕು. ಇದು ಸಾಧ್ಯನಾ? ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಎಲ್ಲರು ರಾತ್ರಿ ಕನಸು ಕಂಡ್ರೆ ಬಿಜೆಪಿ ಅವರು ಹಗಲುಗನಸು ಕಾಣ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications