KRS & Kabini Dam: 100 ಅಡಿ ತಲುಪಿದ ಕೆಆರ್‌ಎಸ್ ಡ್ಯಾಂ: ಹೇಮಾವತಿ & ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು?
ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ ಬೀಳುತ್ತಿರುವ ಕಾರಣಕ್ಕೆ ಕೆಆರ್‌ಎಸ್, ಕಬಿನಿ ಸೇರಿದಂತೆ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದರಲ್ಲೂ ಈ ವರ್ಷದಲ್ಲಿ ಮೊದಲ ಬಾರಿ ಕೆಆರ್‌ಎಸ್ ಡ್ಯಾಂ ಸೆಂಚ್ಯುರಿ ಬಾರಿಸಿದ್ದು, ಇದೀಗ ಎಷ್ಟಿದೆ ನೀರಿನ ಪ್ರಮಾಣ? ಕಬಿನಿ & ಹೇಮಾವತಿ ಡ್ಯಾಂ ಪರಿಸ್ಥಿತಿ ಏನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಕೆಆರ್‌ಎಸ್ ಡ್ಯಾಂ ಕೋಟ್ಯಂತರ ಜನರಿಗೆ ಆಧಾರವಾಗಿರುವ ಜಲಾಶಯ. ಮಂಡ್ಯ, ಮೈಸೂರು ಸೇರಿದಂತೆ ಬೆಂಗಳೂರಿಗೂ ಆಸರೆ ಇದೇ ಡ್ಯಾಂ. ಹೀಗಾಗಿ ಕೆಆರ್‌ಎಸ್ ಜಲಾಶಯ ತುಂಬದೆ ಹೋದರೆ ಸಮಸ್ಯೆ ಗ್ಯಾರಂಟಿ. ಹೀಗಾಗಿ ಆದಷ್ಟು ಬೇಗ ಜಲಾಶಯ ಪೂರ್ತಿ ಆಗಿಬಿಡಲಿ ಎಂಬ ಬೇಡಿಕೆ & ಪ್ರಾರ್ಥನೆ ಮಾಡುತ್ತಾರೆ ರೈತರು. ಇದೀಗ ಆ ಪ್ರಾರ್ಥನೆಗೆ ಫಲ ಸಿಕ್ಕಂತೆ ಕಾಣ್ತಿದೆ. ಯಾಕಂದ್ರೆ ಕೆಆರ್‌ಎಸ್ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬರುತ್ತಿದ್ದು, ಕೆಆರ್‌ಎಸ್ ಡ್ಯಾಂ ನೀರಿನ ಪ್ರಮಾಣ 100 ಅಡಿ ದಾಟಿದೆ. ಹಾಗಾದ್ರೆ ಇದೀಗ ಎಷ್ಟಿದೆ ನೀರಿನ ಪ್ರಮಾಣ? ಬನ್ನಿ ತಿಳಿಯೋಣ.

100 ಅಡಿ ತಲುಪಿದ ನೀರು!
ಕೆಆರ್‌ಎಸ್ ಜಲಾಶಯ ಕೆಲವು ತಿಂಗಳ ಹಿಂದೆ ಅಂದ್ರೆ 2024ರ ಬೇಸಿಗೆ ಸಮಯಕ್ಕೆ ಇನ್ನೇನು ಡೆಡ್ ಸ್ಟೋರೇಜ್ ಹಂತ ತಲುಪುವ ಮಟ್ಟಕ್ಕೆ ಬಂದಿತ್ತು. ಮಳೆ ಇಲ್ಲದೆ ಕೆಆರ್‌ಎಸ್ ಪೂರ್ತಿ ಸೊರಗಿ ಹೋಗಿತ್ತು. ಆದರೆ ಇದೀಗ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ, ಕೆಆರ್‌ಎಸ್ ಡ್ಯಾಂನ ನೀರಿನ ಪ್ರಮಾಣ ಈಗ 100 ಅಡಿ ದಾಟಿದೆ. ಅಲ್ಲದೆ, ಭಾರಿ ಪ್ರಮಾಣದ ನೀರು ಬರುತ್ತಿದೆ. ಕೊಡಗು ಜಿಲ್ಲೆಯಲ್ಲಿ ಹಾಗೂ ಕೇರಳದ ವಯನಾಡು ಪ್ರದೇಶದಲ್ಲಿ ಭಾರಿ ಮಳೆ ಬೀಳ್ತಿದೆ.
ಮಳೆ ಕಾರಣಕ್ಕೆ ಕಾವೇರಿ ನದಿಗೆ ಕಟ್ಟಿರುವ KRS & ಕಬಿನಿ ಡ್ಯಾಂಗಳ ನೀರಿನ ಮಟ್ಟ ಭಾರಿ ಏರಿಕೆ ಕಾಣುತ್ತಿದೆ. 49 ಟಿಎಂಸಿ ಸಾಮರ್ಥ್ಯದ ಕೆಆರ್‌ಎಸ್ ಡ್ಯಾಂಗೆ ಈಗ ಸುಮಾರು 10,000 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಈಗ ಕೆಆರ್‌ಎಸ್ ಡ್ಯಾಂನಲ್ಲಿ ಸುಮಾರು 23 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಆಗಿದೆ. ಹಾಗಾದ್ರೆ ಕಬಿನಿ ಡ್ಯಾಂ ಪರಿಸ್ಥಿತಿ ಏನು? ಮುಂದೆ ಓದಿ.
ಕಬಿನಿ ಡ್ಯಾಂ ಪರಿಸ್ಥಿತಿ ಏನು?
ಕಬಿನಿ ಜಲಾಶಯ ಫುಲ್ ಆಗಲು ಒಂದೆರಡು ಅಡಿ ಬಾಕಿ ಇದೆ. ಸದ್ಯಕ್ಕೆ ಕಬಿನಿ ಡ್ಯಾಂನಲ್ಲಿ 18 ಟಿಎಂಸಿಗೂ ಹೆಚ್ಚು ನೀರು ಇದ್ದು, ಡ್ಯಾಂನಲ್ಲಿ ಒಟ್ಟಾರೆ 19.52 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಇದೀಗ ಕಬಿನಿ ಜಲಾಶಯಕ್ಕೆ ಸುಮಾರು 10,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರ ಜೊತೆ ಹೇಮಾವತಿ ಡ್ಯಾಂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ತುಂಬುವ ಮುನ್ಸೂಚನೆ ಸಿಗುತ್ತಿದೆ.
ಕರ್ನಾಟಕದ ಪ್ರಮುಖ ಡ್ಯಾಂಗಳ ಪೈಕಿ ಹೇಮಾವತಿ ಜಲಾಶಯ ಕೂಡ ಒಂದಾಗಿದೆ. ಇಲ್ಲಿ ಸುಮಾರು 37 ಟಿಎಂಸಿ ನೀರು ಸಂಗ್ರಹ ಮಾಡಲು ಸಾಧ್ಯವಿದೆ. ಇದೀಗ ಹೇಮಾವತಿ ಡ್ಯಾಂ ಸುಮಾರು 17 ಟಿಎಂಸಿ ನೀರು ಹೊಂದಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 14 ಟಿಎಂಸಿ ನೀರು ಹೊಂದಿತ್ತು. ಹೀಗಾಗಿ ಈ ವರ್ಷ ನೀರಿನ ಪ್ರಮಾಣ ಹೆಚ್ಚಾಗಿ ಇದ್ದು, 5,189 ಕ್ಯುಸೆಕ್ ನೀರು ಹೇಮಾವತಿ ಡ್ಯಾಂಗೆ ಹರಿದು ಬರುತ್ತಿದೆ.












Click it and Unblock the Notifications