ವಿಡಿಯೋ: ಪೊದೆಯಲ್ಲಿ ಬಿದ್ದಿದ್ದ ಕರುವಿನ ಬಳಿ ಮಾಲೀಕನ ಕರೆದೊಯ್ದ ಹಸು!
Recommended Video

ಹಸುವಿಗೆ ಮಾತು ಬರೋಲ್ಲ ಅಂದವರ್ಯಾರು? ಮಾತೃಪ್ರೇಮದ ವಿಷಯ ಬಂದಾಗ ಅದು ತನ್ನ ಮಾಲೀಕನೊಂದಿಗೆ ಮಾತನಾಡುತ್ತದೆ... ತನ್ನ ಒಡಲ ಕುಡಿಯನ್ನು ಹರಸಾಹಸ ಮಾಡಿ ರಕ್ಷಿಸಿಕೊಳ್ಳುತ್ತೆ. ಗೋವನ್ನು ದೇವರೆಂದು ಕಾಣುವ ಮಾಲೀಕರಿಗೂ ಹಸುವಿನ ಮೌನ ರೋದನ ಅರ್ಥವಾಗುತ್ತೆ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.
ಮೇಯಲೆಂದು ಹೋದ ಹಸುವೊಂದು ಕಾಡಿನ ಪೊದೆಯೊಂದರಲ್ಲಿ ಕರು ಹಾಕಿ, ನಂತರ ಮಾಲೀಕನನ್ನು ಆ ಪೊದೆಯತ್ತ ಕರೆದೊಯ್ದು ತನ್ನ ಕರುವನ್ನು ರಕ್ಷಿಸಿಕೊಂಡ ಮನಮಿಡಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಗಣೇಶ್ ಮಕನೂರ್ ಎಂಬುವವರು ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ಎಲ್ಲಿಯದು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.
ಗಬ್ಬವಿದ್ದ ಹಸುವೊಂದು ಕಾಡಿಗೆ ಮೇಯಲೆಂದು ಹೋದಾಗ ಅಲ್ಲೇ ಕರುಹಾಕಿಬಿಟ್ಟಿತ್ತು. ಆದರೆ ಇಡೀ ದಿನ ಹುಡುಕಿದರೂ ಅದು ಸಿಕ್ಕಿರಲಿಲ್ಲ. ಮರುದಿನ ಬೆಳಿಗ್ಗೆ ಮನೆಯ ಗೇಟ್ ಎದುರಲ್ಲಿ ಬಂದು ಮಾಲೀಕರನ್ನು ಹಸು ಕರೆಯುತ್ತಿರುವುದನ್ನು ಕಂಡು ಮಾಲೀಕರಿಗೆ ಎಲ್ಲಿಲ್ಲದ ಸಂತೋಷವಾಯಿತ್ತು. ದಣಿದಿದ್ದ ಅದಕ್ಕೆ ಸಂತೈಸಿದ ನಂತರವೂ ಅದು ಏನನ್ನೂ ಹೇಳಲು ಪ್ರಯತ್ನಿಸುತ್ತಿರುವಂತೆ ರಸ್ತೆ ಬದಿಗೆ ಮುಖಮಾಡಿಕೊಂಡು ಒಂದೇ ಸಮೆನೆ ಕೂಗುತ್ತಲೇ ಇತ್ತು.
ಇದರಿಂದಾಗ ಹಸು ಎಲ್ಲೋ ಕರುಹಾಕಿ ಬಂದಿದೆ ಎಂಬುದನ್ನು ಅರಿತ ಮಾಲೀಕರು ಅದಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿದರು. ತಕ್ಷಣವೇ ಕಾಡಿನ ಹಾದಿಯತ್ತ ಹೊರಟ ಹಸು ಎಷ್ಟೋ ದೂರದವರೆಗೆ ಮಾಲೀಕರನ್ನು ಕರೆದೊಯ್ದು ಪೊದೆಯೊಂದರ ಬಳಿ ಹೋಗಿ ನಿಂತಿತ್ತು. ಆ ಪೊದೆಯಲ್ಲಿ ಇಣುಕಿ ನೋಡಿದರೆ ಕಂದುಬಣ್ಣದ ಪುಟ್ಟ ಕರು! ಮಾಲೀಕರಿಗೆ ತಮ್ಮ ಕಣ್ಣನ್ನೇ ನಂಬಲಾಗದ ಸ್ಥಿತಿ!

ಮೂಕ ಪ್ರಾಣಿಗಳಿಗೆ ಭಾವನೆಗಳಿಲ್ಲ ಎಂದವರ್ಯಾರು? ಭಾರತದಲ್ಲಿ ಗೋವನ್ನು ದೇವರೆಂಬಂತೆ ಆರಾಧಿಸುವುದು ಇದೇ ಕಾರಣಕ್ಕೆ.
ಈ ವಿಡಿಯೋವನ್ನು ಇದುವರೆಗೂ ಸುಮಾರು 5.2 ಸಾವಿರ ಜನ ವೀಕ್ಷಿಸಿದ್ದು, ನೂರಾರು ಜನ ಶೇರ್ ಮಾಡಿದ್ದಾರೆ.












Click it and Unblock the Notifications