ವಿಧಾನಸೌಧದ ವೈಭವಕ್ಕೆ ಸೌಂದರ್ಯೀಕರಣದ ಹೊಡೆತ; ಸಚಿವರ ಕೊಠಡಿಗಳಿಗೆ ಮತ್ತೆ ಕೋಟಿ ಕೋಟಿ ಖರ್ಚು!

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ, ಕರ್ನಾಟಕದ ಆಡಳಿತದ ಪ್ರತೀಕವಾಗಿರುವ ವಿಧಾನಸೌಧದ ಮೂಲ ಸ್ವರೂಪಕ್ಕೆ ಸೌಂದರ್ಯೀಕರಣದ ಹೆಸರಿನಲ್ಲಿ ಧಕ್ಕೆ ಉಂಟಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಹೊಸ ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಿದ ಬೆನ್ನಲ್ಲೇ, ಉತ್ತಮ ಸ್ಥಿತಿಯಲ್ಲಿದ್ದ ಹಲವು ಕೊಠಡಿಗಳನ್ನೇ ಮತ್ತೆ ನವೀಕರಣ ಮಾಡುವ ಕೆಲಸ ಭರದಿಂದ ಸಾಗಿದೆ.

ವಿಶೇಷವೆಂದರೆ, ಕೇವಲ ಮೂರು ವರ್ಷಗಳ ಹಿಂದಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದ್ದ ಕೆಲವು ಕೊಠಡಿಗಳು ಮತ್ತೆ ಮರುನವೀಕರಣಗೊಳ್ಳುತ್ತಿವೆ. ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಠಡಿಗಳನ್ನು ಅಂದಗೊಳಿಸಲಾಗುತ್ತಿದ್ದು, ಇನ್ನೆರಡು ವರ್ಷಗಳ ಬಳಿಕ ಮತ್ತೆ ಸಚಿವ ಸಂಪುಟ ಬದಲಾವಣೆಯಾದರೆ ಇದೇ ಕೊಠಡಿಗಳಿಗೆ ಮತ್ತೊಂದು ಸುತ್ತಿನ 'ಸೌಂದರ್ಯೀಕರಣ' ನಡೆಯುವ ಸಾಧ್ಯತೆಯೂ ಇದೆ ಎಂಬ ಟೀಕೆ ಕೇಳಿಬರುತ್ತಿದೆ.

Vidhana Soudha Renovation Row Crores Spent Again on Ministers Rooms Despite Recent Upgrades

75 ವರ್ಷದ ಕಟ್ಟಡದಲ್ಲಿ ಗೋಡೆಗಳೇ ಮಾಯ!

ವಿಧಾನಸೌಧದ ಕೆಲವು ಕೊಠಡಿಗಳ ವಿಸ್ತೀರ್ಣ ಹೆಚ್ಚಿಸುವ ಉದ್ದೇಶದಿಂದ ಅಕ್ಕಪಕ್ಕದ ಕೊಠಡಿಗಳನ್ನು ಒಗ್ಗೂಡಿಸಲು ಮಧ್ಯದ ಗೋಡೆಗಳನ್ನು ತೆರವುಗೊಳಿಸಲಾಗಿದೆ . ಸುಮಾರು 75 ವರ್ಷಗಳ ಇತಿಹಾಸ ಹೊಂದಿರುವ, ಕಲ್ಲಿನ ರಚನೆಯಿಂದ ನಿರ್ಮಾಣಗೊಂಡಿರುವ ಈ ಐತಿಹಾಸಿಕ ಕಟ್ಟಡದಲ್ಲಿ ಇಂತಹ ಬದಲಾವಣೆಗಳು ಮೂಲ ವಾಸ್ತುಶೈಲಿಗೆ ಧಕ್ಕೆ ತರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕೊಠಡಿಗಳ ಒಳಾಂಗಣ ವಿನ್ಯಾಸ ಬದಲಾವಣೆ, ಗೋಡೆಗಳ ಪಾಲಿಶ್‌, ನೆಲ ಬದಲಾವಣೆ, ಹೊಸ ಸೀಲಿಂಗ್‌, ವಿದ್ಯುತ್ ವ್ಯವಸ್ಥೆ, ಅಲಂಕಾರಿಕ ದೀಪಗಳು ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ.

ಸಚಿವರು ಬದಲಾದರೆ ಕೊಠಡಿಗಳೂ ಬದಲಾಗಬೇಕಾ?

ಸಚಿವ ಸಂಪುಟ ಪುನಾರಚನೆ ಎರಡು ಹಂತಗಳಲ್ಲಿ ನಡೆದಿದ್ದು, ಮೊದಲ ಹಂತದಲ್ಲಿ ಸಚಿವರಾದವರು ತಮಗೆ ಹಂಚಿಕೆಯಾದ ಕೊಠಡಿಗಳನ್ನು ನವೀಕರಿಸಿಕೊಂಡಿದ್ದರು. ಇದೀಗ ಎರಡನೇ ಹಂತದಲ್ಲಿ ಸಚಿವ ಸ್ಥಾನ ಪಡೆದವರಿಗೆ ಹಂಚಿಕೆಯಾಗಿರುವ ಕೊಠಡಿಗಳು ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದರೂ ಮತ್ತೆ ಕಾಮಗಾರಿ ಆರಂಭಿಸಿರುವುದು ಚರ್ಚೆಗೆ ಕಾರಣವಾಗಿದೆ. ಹಿಂದೆ ಸಹಕಾರ ಸಚಿವರಾಗಿದ್ದ ಕೆ.ಎನ್. ರಾಜಣ್ಣಅವರಿಗೆ ಹಂಚಿಕೆಯಾಗಿದ್ದ 339 ಮತ್ತು 339ಎ ಕೊಠಡಿಗಳನ್ನು ಇದೀಗ ಸಚಿವ ಎಚ್‌.ಸಿ. ಬಾಲಕೃಷ್ಣ ಅವರಿಗೆ ನೀಡಲಾಗಿದೆ. ಈ ಕೊಠಡಿಗಳ ಒಳಾಂಗಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ.

ಇದೇ ರೀತಿ, ಹಿಂದೆ ಸಚಿವ ಬಿ. ನಾಗೇಂದ್ರ ಬಳಸಿದ್ದ 343 ಮತ್ತು 343ಎ ಕೊಠಡಿಗಳನ್ನು ಸಚಿವ ಕೆ.ಎಸ್‌. ಬಸವಂತಪ್ಪ ಅವರಿಗೆ ಹಂಚಿಕೆ ಮಾಡಲಾಗಿದೆ. ನಾಗೇಂದ್ರ ಅವರು ಕೆಲವೇ ತಿಂಗಳು ಮಾತ್ರ ಬಳಸಿದ್ದ ಈ ಕೊಠಡಿಗಳಲ್ಲೂ ಇದೀಗ ನವೀಕರಣ ಕಾರ್ಯ ನಡೆಯುತ್ತಿದೆ.

ವಿಕಾಸಸೌಧದಲ್ಲೂ 'ಮೇಕ್‌ಓವರ್‌'

ವಿಧಾನಸೌಧ ಮಾತ್ರವಲ್ಲ, ವಿಕಾಸಸೌಧದ ಸಚಿವರ ಕೊಠಡಿಗಳಿಗೂ ಸೌಂದರ್ಯೀಕರಣದ ಸ್ಪರ್ಶ ನೀಡಲಾಗುತ್ತಿದೆ. ಹಿಂದೆ ಸಚಿವ ಎನ್‌.ಎಸ್‌. ಬೋಸರಾಜು ಬಳಸುತ್ತಿದ್ದ 406 ಮತ್ತು 407ನೇ ಕೊಠಡಿಗಳನ್ನು ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಹಂಚಿಕೆ ಮಾಡಲಾಗಿದೆ. ಈ ಕೊಠಡಿಗಳಿಗೆ ಪಾಲಿಶ್‌ ಮಾಡುವುದರ ಜೊತೆಗೆ ಅಲಂಕಾರಿಕ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.

ಕೆಲವು ಕೊಠಡಿಗಳಲ್ಲಿದ್ದ ಕಾರ್ಡ್‌ಬೋರ್ಡ್‌ ಮತ್ತು ಗ್ಲಾಸ್‌ನ ತಾತ್ಕಾಲಿಕ ಗೋಡೆಗಳನ್ನು ತೆರವುಗೊಳಿಸಿ ಹೊಸ ವಿನ್ಯಾಸ ರೂಪಿಸಲಾಗುತ್ತಿದೆ. ನೆಲಕ್ಕೆ ಹೊಸ ಟೈಲ್ಸ್‌, ಗೋಡೆಗಳಿಗೆ ಪಾಲಿಶ್‌, ಹೊಸ ವಿದ್ಯುದೀಕರಣ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ.

ಸಚಿವರ ಕೊಠಡಿ ಎಂದರೆ ಐಷಾರಾಮಿ 'ಮೇಕ್‌ಓವರ್‌'?

ಕೊಠಡಿಗಳ ಸೌಂದರ್ಯೀಕರಣದ ಹೆಸರಿನಲ್ಲಿ ಒಳಾಂಗಣ ವಿನ್ಯಾಸ, ಶೌಚಾಲಯ, ನೆಲ, ಗೋಡೆ, ಸೀಲಿಂಗ್‌, ಬಣ್ಣ, ವಿರಾಮ ಕೊಠಡಿ, ಸಂದರ್ಶಕರ ಕೊಠಡಿ ಹಾಗೂ ಆಸನ ವ್ಯವಸ್ಥೆ ಸೇರಿದಂತೆ ಬಹುತೇಕ ಎಲ್ಲ ವಿಭಾಗಗಳಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ ಎನ್ನಲಾಗಿದ್ದು, ಹೊಸ ಸಚಿವರು ಬಂದಾಗಲೆಲ್ಲಾ ಸರ್ಕಾರಿ ಕಚೇರಿಗಳಿಗೆ ಮರುನವೀಕರಣ ಮಾಡುವ ಸಂಪ್ರದಾಯಕ್ಕೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅಧಿಕಾರಿಗಳ ಕೊಠಡಿಗಳಿಗೂ ಹೊಸ ರೂಪ

ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಬಿಬಿಸಿ) ಅಧ್ಯಕ್ಷ ಎಲ್‌.ಕೆ. ಅತೀಕ್ ಸೇರಿದಂತೆ ಕೆಲವು ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ಸಲಹೆಗಾರರಿಗೆ ಹಂಚಿಕೆಯಾಗಿರುವ ಕೊಠಡಿಗಳಲ್ಲೂ ನವೀಕರಣ ಕಾಮಗಾರಿಗಳು ನಡೆಯುತ್ತಿವೆ.

ಐತಿಹಾಸಿಕ ಕಟ್ಟಡದ ಸೌಂದರ್ಯವೋ? ದುಂದುವೆಚ್ಚವೋ?

ವಿಧಾನಸೌಧ ಕೇವಲ ಸರ್ಕಾರಿ ಕಚೇರಿ ಕಟ್ಟಡವಲ್ಲ. ಅದು ಕರ್ನಾಟಕದ ಆಡಳಿತ, ಇತಿಹಾಸ ಮತ್ತು ವಾಸ್ತುಶಿಲ್ಪದ ಹೆಮ್ಮೆಯ ಪ್ರತೀಕ. ಹೀಗಿರುವಾಗ ಸಚಿವರು ಬದಲಾದಾಗಲೆಲ್ಲಾ ಕೊಠಡಿಗಳ ವಿನ್ಯಾಸ ಬದಲಿಸಿ, ಗೋಡೆ ಒಡೆದು, ನೆಲ ಬದಲಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಮೂರು ವರ್ಷಗಳ ಹಿಂದಷ್ಟೇ ನವೀಕರಣಗೊಂಡ ಕೊಠಡಿಗಳಿಗೆ ಮತ್ತೆ ಲಕ್ಷಾಂತರ ರೂಪಾಯಿ ವೆಚ್ಚ... 75 ವರ್ಷದ ಐತಿಹಾಸಿಕ ಕಟ್ಟಡದ ಗೋಡೆಗಳಿಗೂ ಬದಲಾವಣೆ... ಹಾಗಾದರೆ ಇದು ನಿಜಕ್ಕೂ 'ಸೌಂದರ್ಯೀಕರಣ'ವೇ? ಅಥವಾ ಸರ್ಕಾರಿ ಹಣದ ದುಂದುವೆಚ್ಚವೇ? ಇದಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+