ತಂತ್ರಜ್ಞಾನ ಪ್ರಕೃತಿಯ ಸಮ್ಮಿಲನ: ಹಚ್ಚ ಹಸಿರಿನ ನಡುವೆ ಮಂಗಳೂರು-ಬೆಂಗಳೂರು ವಂದೇ ಭಾರತ್ ಟ್ರೈನ್ ಕಾಣೋದ್ ಹೀಗೆ
ಭಾರತೀಯ ರೈಲ್ವೆ ಇಲಾಖೆಯ ಹೆಮ್ಮೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ವೇಗ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಮಾತ್ರವಲ್ಲ, ಇದೀಗ ತನ್ನ ಪ್ರಯಾಣದ ಹಾದಿಯಲ್ಲಿ ಕಾಣ ಸಿಗುವ ಮನಮೋಹಕ ದೃಶ್ಯಾವಳಿಗಳಿಂದಲೂ ಜನರ ಗಮನ ಸೆಳೆಯುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಹಸಿರು ಮತ್ತು ಮಂಜು ಮುಸುಕಿದ ಹಾದಿಯಲ್ಲಿ ಹಾವಿನಂತೆ ಬಳುಕುತ್ತಾ ಸಾಗುವ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿನ ಅದ್ಭುತ ದೃಶ್ಯವನ್ನಾ ಡ್ರೋನ್ ಕ್ಯಾಮೆರದಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, "ನ್ಯೂ ಏಜ್ ಟ್ರೈನ್ಸ್! ಮೇಕ್ ಮೋರ್ ಇನ್ ಇಂಡಿಯಾ" ಎಂದು ಬರೆದುಕೊಂಡಿದ್ದಾರೆ.

ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣವೇ ಒಂದು ಅದ್ಭುತ ಅನುಭವ ಎನ್ನಬಹುದು. ಅದರಲ್ಲಿಯೂ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವಿನ ಘಾಟ್ ಸೆಕ್ಷನ್ ಭಾರತದ ಅತ್ಯಂತ ಸವಾಲಿನ ರೈಲು ಮಾರ್ಗಗಳಲ್ಲಿ ಒಂದಾಗಿದೆ. ದಟ್ಟವಾದ ಅರಣ್ಯ, ಕಡಿದಾದ ಇಳಿಜಾರುಗಳು, ಆಳವಾದ ಕಂದಕಗಳು, ಸುರಂಗಗಳು ಹಾಗೂ ದೊಡ್ಡ ದೊಡ್ಡ ಸೇತುವೆಗಳ ನಡುವೆ ಈ ರೈಲುಗಳು ಸಾಗುತ್ತದೆ.
ಇಂತಹ ಮಾರ್ಗದಲ್ಲಿ ಅತ್ಯಾಧುನಿಕ ಸೆಮಿ ಹೈಸ್ಪೀಡ್ ರೈಲು ಸಾಗುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. 2026ರ ಆಗಸ್ಟ್ ಮಧ್ಯಭಾಗದಲ್ಲಿ ಈ ಘಾಟ್ ಭಾಗದಲ್ಲಿ ವಂದೇ ಭಾರತ್ ಕಾರ್ಯಾಚರಣೆಯ ಸುರಕ್ಷತಾ ಪ್ರಯೋಗ ಅಂದರೆ ಟ್ರೈಯಲ್ ಆರಂಭವಾಗಿವೆ. ಈಗಂತೂ ಮುಂಗಾರು ಮಳೆಗೆ ಮೈತೊಳೆದು ನಿಂತಿರುವಂತೆ ಕಾಣುತ್ತಿರುವ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ನಡುವೆ ಕೆಸರಿ ಬಣ್ಣದ ವಂದೇ ಭಾರತ್ ರೈಲು ಸಾಗುವ ಈ ದೃಶ್ಯವಂತೂ ಸಿನಿಮೀಯ ದೃಶ್ಯಗಳನ್ನ ಕೂಡ ಮೀರಿಸುವಂತಿದೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸೌಂದರ್ಯವನ್ನ ಕೊಂಡಾಡುತ್ತಿದ್ದಾರೆ. ಅನೇಕರು ಕಾಮೆಂಟ್ ಸೆಕ್ಷನ್‌ನಲ್ಲಿ ಶಿರಾಡಿ ಘಾಟ್‌ನ ಸೌಂದರ್ಯ ಅಂತೂ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು, ಭಾರತದ ರೈಲು ಪ್ರಯಾಣವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಆಕರ್ಷಣೆಯಾಗಿ ಬೆಳೆಸುವ ಬಗ್ಗೆ ಸಲಹೆ ನೀಡಿದ್ದಾರೆ.
ಪಶ್ಚಿಮ ಘಟ್ಟಗಳು, ಕಾಶ್ಮೀರ, ಕೇರಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇರುವಂತಹ ಇಂತಹ ಪ್ರಕೃತಿಯ ರಮಣೀಯ ರೈಲು ಮಾರ್ಗಗಳನ್ನ ವಿದೇಶಿ ಪ್ರವಾಸಿಗರಿಗೆ ಆಕರ್ಷಿಸುವಂತೆ ಪ್ರಚಾರ ಮಾಡಬಹುದು ಎಂಬುದು ಹಲವರ ಅಭಿಪ್ರಾಯ. ತಂತ್ರಜ್ಞಾನ ಮತ್ತು ಪ್ರಕೃತಿಯ ಈ ಸಮ್ಮಿಲನ ನೋಡುಗರಿಗೆ ರೋಮಾಂಚನ ಮೂಡಿಸುತ್ತಿದೆ.
New age trains! Make more in India 🇮🇳 pic.twitter.com/TUjZup3iKz
— Ashwini Vaishnaw (@AshwiniVaishnaw) August 23, 2026
ರೈಲ್ವೆ ಎಂಜಿನಿಯರಿಂಗ್‌ಗೆ ಮೆಚ್ಚುಗೆ
ಸೌಂದರ್ಯದ ಆಸ್ವಾದನೆಯ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಗಂಭೀರ ಚರ್ಚೆಗಳೂ ನಡೆದಿವೆ. ಈ ಅರಣ್ಯ ಪ್ರದೇಶದಲ್ಲಿ ಹಳಿಗಳನ್ನ ನಿರ್ಮಿಸಿ, ಆಧುನಿಕ ರೈಲನ್ನ ಓಡಿಸುತ್ತಿರುವ ಭಾರತೀಯ ರೈಲ್ವೆ ಎಂಜಿನಿಯರ್‌ಗಳ ಸಾಧನೆಯನ್ನ ಹಲವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಷ್ಟೊಂದು ದಟ್ಟ ಕಾಡಿನೊಳಗೆ ಉಪಕರಣಗಳನ್ನ ಹೇಗೆ ತರಲಾಯಿತು ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಸಾರ್ವಜನಿಕ ನೈರ್ಮಲ್ಯದ ಬಗ್ಗೆಯೂ ಕಳಕಳಿ ವ್ಯಕ್ತವಾಗಿದೆ. ಕೇವಲ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಿದರೆ ಸಾಲದು, ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು, ರೈಲಿನೊಳಗೆ ಉಗುಳುವುದು, ಕಸ ಎಸೆಯುವವರಿಗೆ ಭಾರಿ ದಂಡ ವಿಧಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಮಳೆಗಾಲದಲ್ಲಿ ಮಂಜು, ಜಲಪಾತಗಳು ಹಾಗೂ ಹಸಿರಿನಿಂದ ಕಂಗೊಳಿಸುವ ಈ ಮಾರ್ಗದಲ್ಲಿ ಪ್ರಯಾಣಿಸುವುದೇ ಒಂದು ಮರೆಯಲಾಗದ ಅನುಭವ ಎಂಬುದನ್ನು ಈ ವೈರಲ್ ವಿಡಿಯೋ ಸಾರಿ ಸಾರಿ ಹೇಳುತ್ತಿದೆ.


Click it and Unblock the Notifications
