Vande Bharat: ಬೆಂಗಳೂರು-ಮಂಗಳೂರು ಪ್ರಯಾಣಿಕರಿಗೆ ಗುಡ್‌ನ್ಯೂಸ್; ವಂದೇ ಭಾರತ್ ಟ್ರಯಲ್ ರನ್ ಸಕ್ಸಸ್! ಸಂಚಾರ ಯಾವಾಗ?
Vande Bhara: ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ ರೈಲು ಸಂಚಾರ ಆರಂಭಿಸಲು ಸಿದ್ಧತೆಗಳು ವೇಗ ಪಡೆದಿವೆ. ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಸಂಶೋಧನೆ, ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (RDSO) ಹಾಸನ-ಮಂಗಳೂರು ರೈಲು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ.
ಆಗಸ್ಟ್ 12ರಿಂದ 19ರವರೆಗೆ ನಡೆದ ಈ ಪ್ರಾಯೋಗಿಕ ಪರೀಕ್ಷೆಯಿಂದ ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ರೈಲು ಸೇವೆ ಆರಂಭವಾಗುವ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಆದರೆ, ಈ ರೈಲಿನ ಅಂತಿಮ ಮಾರ್ಗ, ಸಂಚಾರದ ಸಮಯ ಹಾಗೂ ನಿಲ್ದಾಣಗಳ ಕುರಿತು ರೈಲ್ವೆ ಸಚಿವಾಲಯ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

Vande Bhara: 20 ಕೋಚ್‌ಗಳ ವಂದೇ ಭಾರತ್‌ನಲ್ಲಿ ಸಂಚಾರ
ಆಗಸ್ಟ್ 12ರಿಂದ 14 ಮತ್ತು ಆಗಸ್ಟ್ 17ರಿಂದ 19ರವರೆಗೆ RDSO ತಂಡವು ಲಖನೌದಿಂದ ಆಗಮಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಈ ವೇಳೆ 20 ಕೋಚ್‌ಗಳ ವಂದೇ ಭಾರತ್ ರೈಲು ಬಳಸಲಾಗಿದ್ದು, ರೈಲಿಗೆ ಸ್ವಯಂಚಾಲಿತ ತುರ್ತು ಬ್ರೇಕ್ (AEB) ವ್ಯವಸ್ಥೆ ಅಳವಡಿಸಲಾಗಿತ್ತು.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ಮಾರ್ಗವು ತೀವ್ರ ಇಳಿಜಾರನ್ನು ಹೊಂದಿದ್ದು, ಈ ವಿಭಾಗದಲ್ಲಿ ರೈಲಿನ ವೇಗ ಗಂಟೆಗೆ 30 ಕಿ.ಮೀ. ಮೀರದಂತೆ ತಡೆಯಲು AEB ವ್ಯವಸ್ಥೆ ಅಗತ್ಯವಾಗಿದೆ. ರೈಲ್ವೆ ಸುರಕ್ಷತಾ ನಿಯಮಗಳ ಪ್ರಕಾರ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿದೆ.
16 ಕೋಚ್‌ಗಳ ಹೊಸ ರೈಲಿಗಾಗಿ ನಿರೀಕ್ಷೆ
ಪ್ರಾಯೋಗಿಕ ಸಂಚಾರಕ್ಕೆ ಬಳಸಿದ 20 ಕೋಚ್‌ಗಳ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ನಿಯಮಿತ ಸೇವೆಗಾಗಿ ಉದ್ದೇಶಿತವಾಗಿರಲಿಲ್ಲ. ಆದ್ದರಿಂದ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ICF) AEB ವ್ಯವಸ್ಥೆ ಹೊಂದಿರುವ 16 ಕೋಚ್‌ಗಳ ವಂದೇ ಭಾರತ್ ರೈಲು ಆಗಮಿಸುವ ನಿರೀಕ್ಷೆಯಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು ಇದ್ದಾರೆ. ಮೈಸೂರು ವಿಭಾಗದ ವ್ಯಾಪ್ತಿಯಲ್ಲಿರುವ ಈ ಮಾರ್ಗದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಘಾಟ್ ಮಾರ್ಗವೇ ದೊಡ್ಡ ಸವಾಲು
ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಅತ್ಯಂತ ವೇಗವಾಗಿ ಸಂಚರಿಸಲಿದೆ ಎಂಬ ನಿರೀಕ್ಷೆ ಇದ್ದರೂ, ಘಾಟ್ ವಿಭಾಗದ ವೇಗ ಮಿತಿಯಿಂದ ಪ್ರಯಾಣದ ಅವಧಿಯಲ್ಲಿ ದೊಡ್ಡ ಮಟ್ಟದ ಕಡಿತವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ವಿಭಾಗವನ್ನು ದಾಟಲು ಮಾತ್ರ ಸುಮಾರು ಎರಡೂವರೆ ಗಂಟೆ ಬೇಕಾಗಬಹುದು. ಬೆಂಗಳೂರು-ಸಕಲೇಶಪುರ ಪ್ರಯಾಣಕ್ಕೆ ಸುಮಾರು ಮೂರೂವರೆ ಗಂಟೆ ಹಾಗೂ ಸುಬ್ರಹ್ಮಣ್ಯ ರಸ್ತೆ-ಮಂಗಳೂರು ನಡುವೆ ಸುಮಾರು ಎರಡು ಗಂಟೆ ಬೇಕಾಗುವ ನಿರೀಕ್ಷೆಯಿದೆ.
ಹೀಗಾಗಿ, ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ಪ್ರಯಾಣಕ್ಕೆ ಕನಿಷ್ಠ 8 ಗಂಟೆಗಳಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಸಾಮಾನ್ಯ ರೈಲುಗಳಲ್ಲಿ ಇದೇ ಪ್ರಯಾಣಕ್ಕೆ ಸುಮಾರು 9 ಗಂಟೆ 30 ನಿಮಿಷಗಳು ಬೇಕಾಗುತ್ತವೆ.
ಅಂತಿಮ ಮಾರ್ಗ ಇನ್ನೂ ಘೋಷಣೆಯಾಗಿಲ್ಲ
ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಅಂತಿಮ ಮಾರ್ಗ, ರೈಲಿನ ನಿಲ್ದಾಣಗಳು ಮತ್ತು ವೇಳಾಪಟ್ಟಿ ಕುರಿತು ರೈಲ್ವೆ ಸಚಿವಾಲಯ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ರೈಲು ಸೇವೆಯನ್ನು ಕೇವಲ ಬೆಂಗಳೂರು ಮತ್ತು ಮಂಗಳೂರು ನಡುವೆ ಮಾತ್ರ ನಡೆಸಬೇಕು ಎಂಬ ಬೇಡಿಕೆ ಒಂದು ಕಡೆಯಿದ್ದರೆ, ಕರಾವಳಿ ಕರ್ನಾಟಕದ ಸಂಪೂರ್ಣ ಭಾಗವನ್ನು ಸಂಪರ್ಕಿಸುವ ಉದ್ದೇಶದಿಂದ ರೈಲನ್ನು ಕಾರವಾರ ಅಥವಾ ಮಡಗಾಂವ್‌ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.
ಇದಲ್ಲದೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ರೈಲು ಸೇವೆಯನ್ನು ಪ್ರಸ್ತಾವಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ಸೇವೆಯೊಂದಿಗೆ ಸಂಯೋಜಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಅಧಿಕೃತ ಘೋಷಣೆಗೆ ಕಾದಿರುವ ಪ್ರಯಾಣಿಕರು
ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಕರಾವಳಿ ಕರ್ನಾಟಕ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭದ ನಿರೀಕ್ಷೆ ಹೆಚ್ಚಾಗಿದೆ. ಆದರೆ, ರೈಲಿನ ಅಧಿಕೃತ ಆರಂಭದ ದಿನಾಂಕ, ಮಾರ್ಗ, ನಿಲ್ದಾಣಗಳು ಮತ್ತು ವೇಳಾಪಟ್ಟಿಯ ಕುರಿತು ರೈಲ್ವೆ ಸಚಿವಾಲಯದ ಅಂತಿಮ ಘೋಷಣೆಗೆ ಪ್ರಯಾಣಿಕರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications
