V Ravichandran: ಕ್ರೇಜಿಸ್ಟಾರ್ ರಾಜಕೀಯ ಪ್ರವೇಶ; ಬಾಲ್ಯದ ಗೆಳೆಯನಿಗೆ ಡಿಕೆಶಿ ಬಿಗ್ ಗಿಫ್ಟ್; ರವಿಚಂದ್ರನ್‌ಗೆ MLC ಸ್ಥಾನ?
V Ravichandran: ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ಎಂದೇ ಖ್ಯಾತರಾಗಿರುವ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ. ರವಿಚಂದ್ರನ್ ಇದೀಗ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಾಲ್ಯದ ಗೆಳಯ ವಿ ರವಿಚಂದ್ರನ್ ಅವರಿಗೆ ಕಾಂಗ್ರೆಸ್ ಸರ್ಕಾರವು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
V Ravichandran: ಡಿಕೆಶಿ-ರವಿಚಂದ್ರನ್ ಭೇಟಿ
ಇತ್ತೀಚೆಗೆ ರವಿಚಂದ್ರನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಈ ಭೇಟಿಯ ಬೆನ್ನಲ್ಲೇ ರವಿಚಂದ್ರನ್ ಅವರಿಗೆ MLC ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರವಿಚಂದ್ರನ್ ಹಾಗೂ ಡಿ.ಕೆ. ಶಿವಕುಮಾರ್ ಅವರು ಶಾಲಾ ದಿನಗಳಿಂದಲೂ ಪರಿಚಿತರು ಹಾಗೂ ಬಾಲ್ಯದ ಸ್ನೇಹಿತರು ಎನ್ನಲಾಗಿದೆ. ಹೀಗಾಗಿ ಇಬ್ಬರ ಭೇಟಿಗೆ ರಾಜಕೀಯ ಆಯಾಮವೂ ಇರಬಹುದೇ ಎಂಬ ಚರ್ಚೆ ಶುರುವಾಗಿದೆ.

ಕಲಾ ಕ್ಷೇತ್ರದ ಕೋಟಾದಲ್ಲಿ ಸ್ಥಾನ?
ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡುವ ನಾಮನಿರ್ದೇಶನದ ಕೋಟಾದಡಿ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಪ್ರಸ್ತಾಪವಿದೆ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ದೀರ್ಘಕಾಲದ ಕೊಡುಗೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ನಟನೆಯಷ್ಟೇ ಅಲ್ಲದೆ, ನಿರ್ದೇಶನ, ನಿರ್ಮಾಣ, ಸಂಗೀತ ಮತ್ತು ಚಿತ್ರರಂಗದ ವಿವಿಧ ತಾಂತ್ರಿಕ ವಿಭಾಗಗಳಲ್ಲೂ ರವಿಚಂದ್ರನ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರ ಅನುಭವವನ್ನು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಯಾಗಿ ಬಳಸಿಕೊಳ್ಳುವ ಉದ್ದೇಶವಿದೆ ಎನ್ನಲಾಗಿದೆ.
'ಪ್ರೇಮಲೋಕ'ದಿಂದ ವಿಧಾನ ಪರಿಷತ್‌ವರೆಗೆ?
ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಪ್ರಯೋಗಗಳು, ಅದ್ಧೂರಿ ನಿರ್ಮಾಣ, ಸಂಗೀತ ಮತ್ತು ವಿಭಿನ್ನ ಕಥನಶೈಲಿಗೆ ಹೆಸರುವಾಸಿಯಾಗಿದ್ದಾರೆ. 'ಪ್ರೇಮಲೋಕ' ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಒಂದು ವೇಳೆ MLC ಸ್ಥಾನ ದೊರೆತರೆ, ಚಿತ್ರರಂಗದ ಅನುಭವ ಹೊಂದಿರುವ ರವಿಚಂದ್ರನ್ ಅವರಿಗೆ ಸಾರ್ವಜನಿಕ ಜೀವನದಲ್ಲಿ ಇದು ಹೊಸ ಅಧ್ಯಾಯವಾಗಲಿದೆ.
ಕಲೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಅವಕಾಶವಿದೆ. ಈ ಬಾರಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನಟ ವಿ. ರವಿಚಂದ್ರನ್ ಅವರನ್ನು ಕಲಾ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ ರವಿಚಂದ್ರನ್ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ತಮ್ಮ ನೆಚ್ಚಿನ ನಟ ಶೀಘ್ರದಲ್ಲೇ ಎಂಎಲ್‌ಸಿ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರವಿಚಂದ್ರನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಲವು ಬಾರಿ ಭೇಟಿ ಮಾಡಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ನಿವಾಸದಲ್ಲಿಯೂ ರವಿಚಂದ್ರನ್ ಅವರು ಭೇಟಿ ಮಾಡಿದ್ದರು ಎನ್ನಲಾಗಿದ್ದು, ಈ ಬೆಳವಣಿಗೆಗಳ ಬೆನ್ನಲ್ಲೇ ಅವರ ಎಂಎಲ್‌ಸಿ ನಾಮನಿರ್ದೇಶನದ ಸುದ್ದಿ ಹರಿದಾಡುತ್ತಿದೆ.
ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ತಮ್ಮನ್ನು ಬೆಂಬಲಿಸಿದವರಿಗೆ ಗೌರವ ನೀಡುವ ಕುರಿತು ಪ್ರಸ್ತಾಪಿಸಿದ್ದರು. ವರ್ಷಗಳಿಂದ ತಮ್ಮೊಂದಿಗೆ ಇದ್ದ ನಟ ಸಾಧು ಕೋಕಿಲ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದೂ ಅವರು ಹೇಳಿದ್ದರು.
ಕೆಲ ತಿಂಗಳ ಹಿಂದೆ ನಡೆದಿದ್ದ 'ಮದ್ದೂರಮ್ಮ ಉತ್ಸವ'ದಲ್ಲಿ ಭಾಗವಹಿಸಿದ್ದ ರವಿಚಂದ್ರನ್, ಡಿ.ಕೆ. ಶಿವಕುಮಾರ್ ಅವರ ಕುರಿತು ಭಾವುಕರಾಗಿ ಮಾತನಾಡಿದ್ದರು. ತಾವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಸಹಾಯಕ್ಕೆ ನಿಂತಿದ್ದರು ಎಂದು ಸ್ಮರಿಸಿದ್ದ ಅವರು, ಜೀವನಪರ್ಯಂತ ಅವರ ಋಣದಲ್ಲಿರುತ್ತೇನೆ ಎಂಬ ಮಾತನ್ನೂ ಹೇಳಿದ್ದರು.
ಅಷ್ಟೇ ಅಲ್ಲದೆ, ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ರವಿಚಂದ್ರನ್ ಮೆಚ್ಚಿಕೊಂಡಿದ್ದರು. ಅವರನ್ನು ದೇಶದ ಡೈನಮಿಕ್ ನಾಯಕರಲ್ಲಿ ಒಬ್ಬರು ಎಂದು ಕೊಂಡಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ರವಿಚಂದ್ರನ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ದೊರೆಯುವ ಸಾಧ್ಯತೆ ಕುರಿತು ಚರ್ಚೆ ಜೋರಾಗಿದೆ.


Click it and Unblock the Notifications
