ಕೆಜಿಎಫ್-2 ಹಾಡು ಬಳಕೆ; ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್
ಬೆಂಗಳೂರು, ಡಿಸೆಂಬರ್ 04; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಹಾಡು ಬಳಕೆ ವಿವಾದ ಇನ್ನೂ ಮುಗಿದಿಲ್ಲ.
ಇದೀಗ ಹಾಡು ತೆಗೆಯದೇ ಇದ್ದುದಕ್ಕೆ ನ್ಯಾಯಾಂಗ ನಿಂದನೆ ಎದುರಿಸುವಂತಾಗಿದ್ದು, ಕರ್ನಾಟಕ ಹೈಕೋರ್ಟ್ ರಾಹುಲ್ ಗಾಂಧಿ ಸೇರಿ ಪಕ್ಷದ ಹಲವು ನಾಯಕರಿಗೆ ನೋಟಿಸ್ ಜಾರಿಗೊಳಿಸಿದೆ.
ಕೆಜಿಎಫ್-2 ಸಂಗೀತ ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ನಿರ್ಬಂಧ, ವಾಣಿಜ್ಯ ಕೋರ್ಟ್ ಆದೇಶದಲ್ಲೇನಿದೆ?ಹಕ್ಕು
ಸ್ವಾಮ್ಯ ಉಲ್ಲಂಘಿಸಿ ಬಳಸಿಕೊಂಡಿದ್ದ ಕೆಜಿಎಫ್ ಚಾಪ್ಟರ್-2 ಚಿತ್ರದ ಹಾಡಿನ ಸಂಗೀತವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕುವಂತೆ ಕೋರ್ಟ್ ನೀಡಿದ್ದ ಆದೇಶ ಪಾಲಿಸದ ಆರೋಪದಲ್ಲಿ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಹಾಡುಗಳ ಹಕ್ಕು ಸ್ವಾಮ್ಯ ಹೊಂದಿರುವ ಎಂಆರ್‌ಟಿ ಮ್ಯೂಸಿಕ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಆರೋಪಿಗಳಾದ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹಾಗೂ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜ.12ಕ್ಕೆ ಮುಂದೂಡಿತು.
ಭರವಸೆಯಂತೆ ನಡೆದುಕೊಂಡಿಲ್ಲ: ಕಾಂಗ್ರೆಸ್ ಪಕ್ಷದ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೆಜಿಎಫ್-2 ಸಿನಿಮಾದ ಹಾಡು ತೆರವುಗೊಳಿಸುವುದಾಗಿ ಹೈಕೋರ್ಟ್‌ಗೆ ಈ ಹಿಂದೆ ಭರವಸೆ ನೀಡಿತ್ತಾದರೂ ಈವರೆಗೂ ಅದನ್ನು ತೆಗೆದುಹಾಕಿಲ್ಲ. ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ತಪ್ಪು ಒಪ್ಪಿಕೊಂಡಿದ್ದ ಕಾಂಗ್ರೆಸ್: ಹಕ್ಕು ಸ್ವಾಮ್ಯ ಉಲ್ಲಂಘಿಸಿ ಕೆಜಿಎಫ್ ಚಿತ್ರದ ಹಾಡು ಬಳಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಭಾರತ್ ಜೋಡೋ ಯಾತ್ರೆಯ ಅಧಿಕೃತ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನ.7ರಂದು ಟ್ವಿಟರ್ ಕಂಪನಿಗೆ ನಗರದ ವಾಣಿಜ್ಯ ಕೋರ್ಟ್ ಆದೇಶ ನೀಡಿತ್ತು.
ತಪ್ಪು ಒಪ್ಪಿಕೊಂಡಿದ್ದ ಕಾಂಗ್ರೆಸ್ ವಿವಾದಿತ ಹಾಡನ್ನು ಪಕ್ಷದ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗುವುದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಗೆ ಒದಗಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.
ಅದನ್ನು ಪರಿಗಣಿಸಿದ್ದ ಕರ್ನಾಟಕ ಹೈಕೋರ್ಟ್ ವಿವಾದಿತ ಹಾಡನ್ನು ತೆಗೆದುಹಾಕಬೇಕೆಂಬ ಷರತ್ತಿಗೆ ಒಳಪಟ್ಟಂತೆ ವಾಣಿಜ್ಯ ಕೋರ್ಟ್ ಆದೇಶ ರದ್ದುಪಡಿಸಿ ನ.8ರಂದು ಆದೇಶ ನೀಡಿತ್ತು.
ಆದರೆ, ಈವರೆಗೂ ಹಾಡುಗಳನ್ನು ತೆಗೆಯದೇ ಹೈಕೋರ್ಟ್ ಆದೇಶವನ್ನು ಕಾಂಗ್ರೆಸ್ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಎಂಆರ್‌ಟಿ ಮ್ಯೂಸಿಕ್, ಆರೋಪಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಡಿಯಲಿ ಕ್ರಮ ಜರುಗಿಸಬೇಕೆಂದು ಕೋರಿದೆ.












Click it and Unblock the Notifications