ಕೆಜಿಎಫ್-2 ಸಂಗೀತ ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ನಿರ್ಬಂಧ, ವಾಣಿಜ್ಯ ಕೋರ್ಟ್ ಆದೇಶದಲ್ಲೇನಿದೆ?
ಬೆಂಗಳೂರು ನ.7: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋಯಾತ್ರೆಯ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನ.21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಕೋರ್ಟ್ ಆದೇಶದಲ್ಲಿ ಏನಿದೆ? ಟ್ವಿಟ್ಟರ್ ಖಾತೆ ಮೇಲೆ ನಿರ್ಬಂಧ ಹೇರಿದ್ದೇಕೆ? ಈ ಬಗ್ಗೆ ವರದಿ ಇಲ್ಲಿದೆ.
ಈ ಪ್ರಕರಣದಿಂದಾಗಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಿದ್ದಂತೂ ಸತ್ಯ. ಜೊತೆಗೆ ಪಕ್ಷದ ಪ್ರಮುಖ ಪಾದಯಾತ್ರೆಗೆ ಸಂಬಂಧಿಸಿದ ಟ್ವಿಟ್ಟರ್ ಅಕೌಂಟ್ ತಾತ್ಕಾಲಿಕ ಬಂದ್ ಆಗಲಿದೆ. ಅದು ಕೆಜಿಎಫ್-2 ಚಿತ್ರದ ಸಂಗೀತ ಬಳಸಿಕೊಂಡಿರುವುದು ಈ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಅನುಮತಿ ಪಡೆಯದೇ ಕೆಜಿಎಫ್ ಸಿನಿಮಾ ಮ್ಯೂಸಿಕ್ ಬಳಸಿಕೊಂಡಿರುವುದಕ್ಕೆ ಬೆಲೆ ತೆರಬೇಕಾಗಿದೆ. ಅಲ್ಲದೆ, ಕೆಜಿಎಫ್-2 ಚಿತ್ರದ ಸಂಗೀತವನ್ನು ಅನಧಿಕೃತವಾಗಿ ಬಳಸಿಕೊಂಡ ವಿಚಾರದಲ್ಲಿ ವಿದ್ಯುನ್ಮಾನ ಪರಿಶೋಧನೆ ಮಾಡಬೇಕಿದೆ.

ಅದರಂತೆ ಐಎನ್‌ಸಿಇಂಡಿಯಾದ ಟ್ವಿಟ್ಟರ್, ಭಾರತ್‌ಜೋಡೋ ಯಾತ್ರೆಯ ಟ್ವಿಟರ್, ಫೇಸ್‌ಬುಕ್, ಯೂಟೂಬ್, ಇನ್‌ಸ್ಟ್ರಾಗ್ರಾಂ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿರುವ 'ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು' ಸಂಬಂಧಿಸಿದ ಸಾಮಾಗ್ರಿಗಳನ್ನು ವಿದ್ಯುನ್ಮಾನ ಪರಿಶೋಧನೆ ನಡೆಸಲು ವಾಣಿಜ್ಯ ನ್ಯಾಯಲಯದ ಕಂಪೂಟರ್ ವಿಭಾಗದ ಜಿಲ್ಲಾ ಸಿಸ್ಟೆಮ್ ಆಡಳಿತಾಧಿಕಾರಿ ಆಗಿರುವ ಎಸ್.ಎನ್. ವೆಂಕಟೇಶ ಮೂರ್ತಿ ಅವರನ್ನು ಸ್ಥಳೀಯ ಕಮೀಷನರ್ ಆಗಿ ನೇಮಕ ಮಾಡಿ ನ್ಯಾಯಾಲಯ ಆದೇಶಿಸಿದೆ.
ಮೇಲ್ನೋಟಕ್ಕೆ ಸಾಬೀತು: ಕೆಜಿಎಫ್-2 ಚಿತ್ರದ ಸಂಗೀತದ ಹಕ್ಕು ಸ್ವಾಮ್ಯ ಪಡೆದುಕೊಂಡಿರುವ ಎಂಆರ್‌ಟಿ ಮ್ಯೂಸಿಕ್ ಕಂಪನಿ ದಾಖಲಿಸಿರುವ ಅಸಲು ದಾವೆಯ ವಿಚಾರಣೆ ನಡೆಸಿರುವ ನಗರದ 86ನೇ ಕಮರ್ಷಿಯಲ್ ಕೋರ್ಟ್ ಈ ಆದೇಶ ಮಾಡಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ ಭಾರತ್ ಜೋಡೋಯಾತ್ರೆ ವೇಳೆ ಅರ್ಜಿದಾರರು ಹಕ್ಕು ಸ್ವಾಮ್ಯ ಹೊಂದಿರುವ ಕೆಜಿಎಫ್-2 ಚಿತ್ರದ ಸಂಗೀತವವನ್ನು ಅಧಿಕೃತವಾಗಿ ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅದನ್ನು ತಡೆಯದೆ ಹೋದರೆ ಅರ್ಜಿದಾರಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ ಮತ್ತು ಪೈರಸಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸ್ಥಳೀಯ ಕಮೀಷನರ್ ಅವರು ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ತಾಲತಾಣಗಳ ಖಾತೆಯಲ್ಲಿರುವ ಸಾಮಾಗ್ರಿಗಳನ್ನು ಪರಿಶೀಲನೆ ನಡೆಸಬೇಕು. ಅದನ್ನು ನ್ಯಾಯಾಲಯದ ಸಿಸ್ಟೆಮ್ಯಾಂಡ್‌ನಲ್ಲಿ ಪ್ರತ್ಯೇಕ ಕಾಂಪಾಕ್ಟ್ ಡಿಸ್ಕ್ (ಸಿಡಿ) ರೂಪದಲ್ಲಿ ಸಂಗ್ರಹಣೆ ಮಾಡಬೇಕು ಎಂದು ನಿರ್ದೇಶಿಸಿದೆ.

ಪ್ರತಿವಾದಿಗಳಿಗೆ ನೋಟಿಸ್ ಜಾರಿ: ಕಮೀಷನರ್ ಅವರೊಂದಿಗೆ ತೆರಳಲು ಅರ್ಜಿದಾರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಕಮೀಷನರ್ ನಡೆಸುವ ಪ್ರಕ್ರಿಯೆಯ ಫೋಟೋ ಹಾಗೂ ವಿಡಿಯೋ ದಾಖಲಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ ನ್ಯಾಯಾಲಯವ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.21ಕ್ಕೆ ಮುಂದೂಡಿದೆ.
ಎಂಆರ್‌ಟಿಸಿ ಮ್ಯೂಸಿಕ್ ಕಂಪನಿಯು ಕೆಜಿಎಫ್ ಸಿನಿಮಾದ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋ ಹಾಗೂ ಮ್ಯೂಸಿಕ್ ಹಕ್ಕು ಹೊಂದಿದೆ. ಆದರೆ, ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ನಮ್ಮ ಅನುಮತಿ ಪಡೆಯದೇ ಕೆಜಿಎಫ್ ಸಿನಿಮಾ ಮ್ಯೂಸಿಕ್ ಬಳಸಿಕೊಳ್ಳಲಾಗಿದೆ.
ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೊ ಹಾಗೂ ಪೋಸ್ಟ್ ಹಾಕಲಾಗಿದೆ. ಈ ಮುಖಾಂತರ ಕಾಂಗ್ರೆಸ್ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರೆಸಲು, ಮಾರ್ಕೆಟಿಂಗ್ ಹಾಗೂ ಪ್ರಚಾರಕ್ಕಾಗಿ ನಮ್ಮ ಹಕ್ಕು ಸ್ವಾಮ್ಯ ಹಾಗೂ ಬೌದ್ಧಿಕ ಆಸ್ತಿ ಹಕ್ಕನ್ನು ಉಲ್ಲಂಘಿಸಿದ್ದು, ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications