UPSC ಪರೀಕ್ಷೆಯಲ್ಲಿ 42ನೇ ರ‍್ಯಾಂಕ್‌! ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಮಂಗಳೂರಿನ ಪ್ರಜ್ವಲ್‌ ಶೆಟ್ಟಿ ಸಾಧನೆ

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಮತ್ತೊಂದು ಹೆಮ್ಮೆಯ ಗರಿ. ಹೌದು, ಮಂಗಳೂರಿನ ಯುವಕ, ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಭಾರತೀಯ ವಾಯುಪಡೆಯ ಬಲಿಷ್ಠ ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಅಸಾಧಾರಣ ಸಾಧನೆ ಮೆರೆದಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ನಮೋ ಘಾಟ್ ಬಳಿ ಗಂಗಾ ನದಿಯ ಮೇಲ್ಭಾಗದಲ್ಲಿ ನಡೆದ ವಾಯುಪಡೆಯ 94ನೇ ವಾರ್ಷಿಕೋತ್ಸವದ ವಿಂಗ್ಸ್ ಓವರ್ ಗಂಗಾಸ್ ವೈಮಾನಿಕ ಪ್ರದರ್ಶನದಲ್ಲಿ ಅವರು ಪಾಲ್ಗೊಂಡು ಇಡೀ ದೇಶದ ಗಮನ ಸೆಳೆದರು.

UPSC 42nd Ranker to Rafale Pilot Mangaluru s Flight Lieutenant Prajwal Shetty s Inspiring Journey

ಅಕ್ಟೋಬರ್ 25ರಂದು ನಡೆದ ಈ ಶೋನಲ್ಲಿ, ಮೂರು ರಫೇಲ್ ವಿಮಾನಗಳನ್ನೊಳಗೊಂಡ ಅತ್ಯಾಕರ್ಷಕ ನೀಲಕಂಠ ರಚನೆಯ ಮಧ್ಯಭಾಗದಲ್ಲಿ ಹಾರಾಟ ನಡೆಸುವ ಮೂಲಕ ಪ್ರಜ್ವಲ್ ತಮ್ಮ ನೈಪುಣ್ಯತೆಯನ್ನ ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ದೇಶದ ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಯುಪಿಎಸ್‌ಸಿಯಲ್ಲಿ 42ನೇ ರ‍್ಯಾಂಕ್‌ ಹಾಗೂ ಎನ್‌ಡಿಎ ಪ್ರವೇಶ

ಪಿಯುಸಿ ಶಿಕ್ಷಣವನ್ನ ಮುಗಿಸಿದ ಕೂಡಲೇ, ದೇಶಸೇವೆಗೆ ಸೇರುವ ಗುರಿಯೊಂದಿಗೆ ಪ್ರಜ್ವಲ್ ಅವರು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಈ ಕಠಿಣ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್‌ ಗಳಿಸುವ ಮೂಲಕ ಪುಣೆಯ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶಿಸಿದರು. ಅಲ್ಲಿ ಸತತ ಮೂರು ವರ್ಷಗಳ ಕಾಲ ತರಬೇತಿ ಪಡೆದ ಅವರು, ಸೂಪರ್ ಡಿಮೋನಾ ವಿಮಾನದ ಮೂಲಕ ಹಾರಾಟದ ಮೊದಲ ಪಾಠಗಳನ್ನ ಕಲಿತರು.

ಆ ನಂತರ, ಹೈದರಾಬಾದ್‌ನ ಏರ್ ಫೋರ್ಸ್ ಅಕಾಡೆಮಿಯಲ್ಲಿ (ಎಎಫ್‌ಎ) ಒಂದು ವರ್ಷದ ಸುದೀರ್ಘ ಹಾರಾಟ ತರಬೇತಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಅವಧಿಯಲ್ಲಿ ಅವರು 'ಪಿಲಾಟಸ್' ಹಾಗೂ 'ಕಿರಣ್' ವಿಮಾನಗಳನ್ನು ಯಶಸ್ವಿಯಾಗಿ ಹಾರಿಸಿದರು.

ಕೇವಲ ಪ್ರಾಯೋಗಿಕ ತರಬೇತಿ ಮಾತ್ರವಲ್ಲದೆ, ವಾಯುಯಾನ ವಿಷಯಗಳ ಅಧ್ಯಯನದಲ್ಲೂ ಪ್ರಥಮ ಸ್ಥಾನ ಗಳಿಸಿದ ಹೆಗ್ಗಳಿಕೆ ಇವರದ್ದು. ಜೊತೆಗೆ ಬಿ.ಟೆಕ್ ಪದವಿಯನ್ನೂ ಎಎಫ್‌ಎ ಅಕಾಡೆಮಿಯಲ್ಲಿಯೇ ಪಡೆದುಕೊಂಡರು.

ಫ್ಲೈಟ್ ಲೆಫ್ಟಿನೆಂಟ್ ಆಗಿ ವಾಯುಪಡೆ ಸೇರ್ಪಡೆ

2022ರ ಡಿಸೆಂಬರ್‌ನಲ್ಲಿ ಪ್ರಜ್ವಲ್ ಅವರು ಭಾರತೀಯ ವಾಯುಪಡೆಯ ಫೈಟರ್ (ಯುದ್ಧವಿಮಾನ) ವಿಭಾಗಕ್ಕೆ ಅಧಿಕೃತವಾಗಿ ನಿಯೋಜನೆಗೊಂಡರು. ನಂತರ ಪಶ್ಚಿಮ ಬಂಗಾಳದ ಕಲೈಕುಂಡ ವಾಯುನೆಲೆಯಲ್ಲಿ 'ಹಾಕ್ ಎಂಕೆ 132' (Hawk Mk 132) ವಿಮಾನವನ್ನ ಚಲಾಯಿಸುವ ಮೂಲಕ ಮತ್ತೊಂದು ವರ್ಷದ ಕಠಿಣ ಯುದ್ಧವಿಮಾನ ತರಬೇತಿಯನ್ನ ಪೂರ್ಣಗೊಳಿಸಿದರು. ಈ ಹಂತದ ತರಬೇತಿಯಲ್ಲೂ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.

ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಮಂಗಳೂರು ಯುವಕನ ಸಾಧನೆ

ತಮ್ಮ ಅದ್ಭುತ ಕೌಶಲ್ಯದ ಆಧಾರದ ಮೇಲೆ, ಹರಿಯಾಣದ ಅಂಬಾಲಾದಲ್ಲಿರುವ ವಾಯುಪಡೆಯ ಪ್ರತಿಷ್ಠಿತ 17ನೇ ಸ್ಕ್ವಾಡ್ರನ್ 'ಗೋಲ್ಡನ್ ಆರೋಸ್' ವಿಭಾಗಕ್ಕೆ ಅವರು ಆಯ್ಕೆಯಾದರು. ಅಲ್ಲಿ ವಿಶ್ವದ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಕನ್ವರ್ಶನ್ ಟ್ರೈನಿಂಗ್ ಅನ್ನಾ ಯಶಸ್ವಿಯಾಗಿ ಮುಗಿಸಿ, ರಫೇಲ್ ಅನ್ನು ನಿರಾಯಾಸವಾಗಿ ನಿರ್ವಹಿಸುವ ಸಂಪೂರ್ಣ ಕಾರ್ಯಾಚರಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾರೆ.

ರಫೇಲ್ ಯುದ್ಧವಿಮಾನವು ಭಾರತೀಯ ವಾಯುಪಡೆಯ ಅತ್ಯಂತ ಶಕ್ತಿಶಾಲಿ ಮತ್ತು ಆಧುನಿಕ ಯುದ್ಧವಿಮಾನಗಳಲ್ಲಿ ಒಂದಾಗಿದ್ದು, ಇದನ್ನು ಹಾರಿಸಲು ಅಸಾಧಾರಣ ಕೌಶಲ್ಯ ಹಾಗೂ ಮಾನಸಿಕ ಸ್ಥೈರ್ಯದ ಅಗತ್ಯವಿದೆ. ಕರಾವಳಿ ಭಾಗದ ಯುವಕನೊಬ್ಬ ಇಂತಹ ಕಠಿಣ ಸವಾಲನ್ನ ಯಶಸ್ವಿಯಾಗಿ ಎದುರಿಸಿ, ದೇಶದ ಭದ್ರತೆಯ ಮುಂಚೂಣಿಯಲ್ಲಿ ನಿಂತಿರುವುದು ಸಾಮಾನ್ಯ ಸಾಧನೆಯಲ್ಲ.

ಪ್ರಜ್ವಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಉಳಿದೊಟ್ಟು ನಿವಾಸಿ ರಮೇಶ್ ಶೆಟ್ಟಿ ಮತ್ತು ಕೋಡೆತ್ತೂರು ಮೂಡುದೇವಸ್ಯದ ಸೀತಾ ಆರ್. ಶೆಟ್ಟಿ ದಂಪತಿಯ ಹೆಮ್ಮೆಯ ಪುತ್ರ. ಎನ್‌ಡಿಎಯಿಂದ ಆರಂಭವಾಗಿ ಗೋಲ್ಡನ್ ಆರೋಸ್‌ವರೆಗಿನ ಅವರ ಈ ಪಯಣ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ಹೆಮ್ಮೆಯ ವಿಚಾರವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಬಯಸುವ ಲಕ್ಷಾಂತರ ಯುವಜನರಿಗೆ ಪ್ರಜ್ವಲ್ ಶೆಟ್ಟಿ ಅವರ ಸಾಧನೆ ನಿಜಕ್ಕೂ ದೊಡ್ಡ ಸ್ಫೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+