ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಾಗಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಮತ್ತು ಆಂತರಿಕ ಕಾದಾಟದ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಹಂಚಿಕೆಯ ಜಗಳದಲ್ಲಿ ರಾಜ್ಯದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವವರೆಗೆ ಅದು ಗ್ಯಾರಂಟಿ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜೀನಾಮೆ ನೀಡುವವರೆಗೂ ನಂಬಲು ಸಾಧ್ಯವಿಲ್ಲ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, "ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಹಳೆಯ ಹುಲಿ. ಅವರು ಯಾವಾಗ, ಯಾವ ಸಮಯದಲ್ಲಿ, ಎಂತಹ ಆಟ ಆಡುತ್ತಾರೆ ಎನ್ನುವುದನ್ನು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಸ್ವತಃ ರಾಜೀನಾಮೆ ಕೊಡುವವರೆಗೂ ಅವರು ಕುರ್ಚಿ ಬಿಡುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

"ಇದು ಅವರ ಪಕ್ಷದ ಆಂತರಿಕ ವಿಚಾರ ಇರಬಹುದು. ಆದರೆ, ರಾಜ್ಯದ ಜನತೆ ಅವರನ್ನು ಗೆಲ್ಲಿಸಿರುವುದು ಜನರ ಸೇವೆ ಮಾಡುವುದಕ್ಕಾಗಿಯೇ ಹೊರತು ಕೇವಲ ಕುರ್ಚಿಗಾಗಿ ಕಾದಾಟ ನಡೆಸುವುದಕ್ಕಲ್ಲ. ಪ್ರಸ್ತುತ ಸರ್ಕಾರದಲ್ಲಿ ಜನರ ಕೆಲಸ ಸಂಪೂರ್ಣವಾಗಿ ನಿಂತುಹೋಗಿದೆ. ಯಾರು ಡಿಸಿಎಂ ಆಗಬೇಕು? ಯಾರು ಮುಂದಿನ ಮಂತ್ರಿಯಾಗಬೇಕು? ಎನ್ನುವ ವಿಷಯಗಳಿಗಾಗಿಯೇ ಪ್ರತಿದಿನ ಕಾದಾಟ ನಡೆಯುತ್ತಿದೆ" ಎಂದು ಅವರು ಟೀಕಿಸಿದ್ದಾರೆ.
ಜನರ ಸಮಸ್ಯೆ ಬಿಟ್ಟು ಕುರ್ಚಿ ಉಳಿಸಿಕೊಳ್ಳುವ ಜಗಳ
ಕಾಂಗ್ರೆಸ್ ನಾಯಕರ ಅಧಿಕಾರದ ಹಪಾಹಪಿತನದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಂಕಷ್ಟಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ರಾಜ್ಯದ ಒಂದೆಡೆ ಬರಗಾಲದ ಪರಿಸ್ಥಿತಿ ಇದ್ದರೆ, ಮತ್ತೊಂದೆಡೆ ಹಲವೆಡೆ ನೆರೆ ಹಾವಳಿ ಸೃಷ್ಟಿಯಾಗುತ್ತಿದೆ. ಸದ್ಯ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣ ಮುಳುಗಡೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಸದ ನಿರ್ವಹಣೆಯ ಹೆಸರಿನಲ್ಲಿ ಅತಿ ದೊಡ್ಡ ಹಗರಣ ನಡೆದಿದೆ ಎಂದು ದೂರಿದ್ದಾರೆ.
"ಇಷ್ಟೆಲ್ಲ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿದ್ದರೂ, ಇವರು ಮಾತ್ರ ಪ್ರತಿದಿನ ಸಿಎಂ ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದೇ ದೊಡ್ಡ ಚಿಂತೆಯಾದರೆ, ಇತ್ತ ಡಿ.ಕೆ. ಶಿವಕುಮಾರ್ ಅವರಿಗೆ ಹೇಗಾದರೂ ಮಾಡಿ ಆ ಕುರ್ಚಿಯನ್ನು ಪಡೆಯಬೇಕು ಎನ್ನುವ ಹಂಬಲ. ಇವರಿಬ್ಬರ ಈ ಸ್ವಾರ್ಥ ಜಗಳದ ಮಧ್ಯೆ ಸಿಲುಕಿ ರಾಜ್ಯದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ" ಎಂದು ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದ್ದಾರೆ.
ಯಾವುದೇ ಇಲಾಖೆ ಕೆಲಸ ಮಾಡುತ್ತಿಲ್ಲ
ರಾಜ್ಯದಲ್ಲಿ ಸದ್ಯ ಆಡಳಿತ ಯಂತ್ರ ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ದೂರಿದ ಅವರು, "ಸದ್ಯ ಕರ್ನಾಟಕದಲ್ಲಿ ಯಾವುದೇ ಇಲಾಖೆಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅಭಿವೃದ್ಧಿ ಕುಂಠಿತಗೊಂಡಿದೆ. ಇನ್ನಾದರೂ ಈ ಕುರ್ಚಿ ಉಳಿಸಿಕೊಳ್ಳುವ ಮತ್ತು ಕಸಿದುಕೊಳ್ಳುವ ಹೋರಾಟವನ್ನು ಬಿಟ್ಟು, ರಾಜ್ಯದ ಜನರ ಕಡೆಗೆ ಹಾಗೂ ಅವರ ಸಮಸ್ಯೆಗಳ ಕಡೆಗೆ ಗಮನ ಕೊಡಿ" ಎಂದು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.













Click it and Unblock the Notifications