ಸಿದ್ದರಾಮಯ್ಯ ಪುತ್ರನ ಸಾವಿಗೆ ಆ ಸಚಿವನೇ ಕಾರಣ: ಶೋಭಾ ಆರೋಪ ಯಾರ ಮೇಲೆ?
ರಾಜ್ಯ ರಾಜಕಾರಣದಲ್ಲಿ ಪಕ್ಷಗಳ ನಡುವಿನ ವಾಕ್ಸಮರವು ಸದ್ಯ ಕುಟುಂಬಸ್ಥರ ಸಾವಿನ ವಿಚಾರಗಳನ್ನು ಮೆಲುಕು ಹಾಕುವ ಮಟ್ಟಕ್ಕೆ ತಲುಪಿದೆ. ಸದ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್ ಸಚಿವ ಬೈರತಿ ಸುರೇಶ್ ಅವರ ನಡುವೆ ಟಾಕ್‌ವಾರ್ ನಡೆಯುತ್ತಲೇ ಇದೆ. ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುತ್ತಾ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.
ಶೋಭಾ ಅವರ ಬಗ್ಗೆ ಗಂಭೀರ ಆರೋಪ ಮಾಡಿದ್ದ ಬೈರತಿ ಸುರೇಶ್ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿಯ ಸಾವಿನ ಹಿಂದೆ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎನ್ನುವ ಅನುಮಾನವಿದೆ ಎಂದು ಬಾಂಬ್ ಸಿಡಿಸಿದ್ದರು. ಇದರ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಅವರು ಕೂಡ ಗಂಭೀರ ಆರೋಪವೊಂದನ್ನು ಬೈರತಿ ಸುರೇಶ್ ಮೇಲೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಾನು ಹೇಳಬೇಕಾ? ಎಂದು ಸಚಿವೆ ಶೋಭಾ ಕರಂದ್ಲಾಜೆ ಸವಾಲ್ ಹಾಕಿದ್ದಾರೆ. ಕೌರವರನ್ನು ಮುಗಿಸಲು ಅಂದು ಶಕುನಿ ಸೇರಿಕೊಂಡಿದ್ದ. ಇಂದು ಸಿದ್ದರಾಮಯ್ಯ ಅವರನ್ನು ಮುಗಿಸಲು ಬೈರತಿ ಸುರೇಶ್ ಸೇರಿಕೊಂಡಿದ್ದಾರೆ ಎಂದು ಹೋಲಿಕೆ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಈಗಾಗಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ದರೋಡೆಕೋರರು ಹಾಗೂ ಭಯೋತ್ಪಾದಕರನ್ನು ಪೊಲೀಸರು ಹಿಡೀತಾರೆ. ಆಗ ಪೊಲೀಸರ ಮೇಲೆ ಅವರು ತಮ್ಮ ರಕ್ಷಣೆಗೆ ಪ್ರತಿದಾಳಿ ಮಾಡುತ್ತಾರೆ. ಸದ್ಯ ಬೈರತಿ ಸುರೇಶ್ ಅವರ ಕಥೆಯೂ ಅದೇ ಆಗಿದೆ. ನಾನು ಮುಡಾ ಫೈಲ್ ಸುಟ್ಟು ಹಾಕಿದ್ರು ಎಂದಿದ್ದೆ. ಅದಕ್ಕೆ ಪ್ರತಿಯಾಗಿ ಸುರೇಶ್ ಅವರು ಇಂತಹ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಯಾಕೆ ಇಂತವರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿದ್ದಾರೆ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ರಾಜಕಾರಣವನ್ನು ಅದೇ ರೀತಿಯಲ್ಲೆ ಎದುರಿಸಿದ್ದೇನೆ. ನಾನು ಆರೋಪಗಳಿಂದ ಓಡಿ ಹೋಗುವ ಅಥವಾ ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿ ಅಲ್ಲ ಎಂದಿದ್ದಾರೆ. ಹೆಬ್ಬಾಳದಿಂದ ಬೈರತಿ ಸುರೇಶ್ ಅವರನ್ನೇ ಓಡಿಸುತ್ತೇವೆ. ಭಾರಿ ಮಳೆಯಿಂದ ಬೆಂಗಳೂರು ಮುಳುಗಿದೆ. ನಿಮ್ಮ ಕೈಯಲ್ಲಿ ಅದನ್ನು ಸರಿ ಮಾಡಲು ಆಯ್ತಾ? ಅಭಿವೃದ್ಧಿ ಕೆಲಸ ಮಾಡೋದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ನನ್ನ ಮೇಲೆ ಆರೋಪ ಮಾಡಲು ಏನೂ ವಿಷಯ ಸಿಕ್ಕಿಲ್ಲ ಎಂದು ಬೈರತಿ ಸುರೇಶ್ ಈ ರೀತಿ ನಾಲಿಗೆ ಹರಿಬಿಟ್ಟಿದ್ದಾರೆ. ಆದರೆ, ಈ ಶೋಭಾ ಕರಂದ್ಲಾಜೆ ಓಡಿ ಹೋಗುವವಳಲ್ಲ. ಬೈರತಿ ಸುರೇಶ್ ತಮ್ಮ ನಾಲಿಗೆ, ಬಾಯಿ ಬಿಗಿಹಿಡಿದು ಮಾತನಾಡಿದರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಬೈರತಿ ಸುರೇಶ್ ಅವರ ಬಗ್ಗೆ ಮುಡಾ ಕೇಸ್ ವಿಚಾರವಾಗಿ ಹಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬೈರತಿ ಸುರೇಶ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿಯ ಸಾವಿನಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎನ್ನುವ ಅನುಮಾನವಿದೆ ಎಂದಿದ್ದಾರೆ. ಸದ್ಯ ಸುರೇಶ್ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನವಿದ್ದು, ಇದರ ಬಗ್ಗೆಯೂ ತನಿಖೆಯಾಗಲಿ ಎಂದು ಬೈರತಿ ಸುರೇಶ್ ಹೇಳಿದ್ದಾರೆ. ಇದಕ್ಕೆ ಶೋಭಾ ಕರಂದ್ಲಾಜೆ ಅವರೂ ಕೌಂಟರ್ ಕೊಟ್ಟಿದ್ದಾರೆ.












Click it and Unblock the Notifications