Breaking:ತುಂಗಭದ್ರಾ ಯೋಜನೆ ಆಂಧ್ರದಲ್ಲಿದೆ, ಸಿಬಿಎಸ್‌ಇ ಪಠ್ಯದಲ್ಲಿ ತಪ್ಪು ಮಾಹಿತಿ: ಎಎಪಿ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕದ ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ. ಹೀಗೆಂದು ಸಿಬಿಎಸ್ಇ ಪಠ್ಯ ಪುಸ್ತಕದಲ್ಲಿ ತಪ್ಪು ಮಾಹಿತಿ ನೀಡಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ.
ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಈ ಕುರಿತು ಟ್ವೀಟ್ ಮಾಡಿ ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. ಸಿಬಿಎಸ್ಇ ನಾಲ್ಕನೇ ತರಗತಿ ಪಠ್ಯಪುಸ್ತಕದಲ್ಲಿ ದೇಶದ ಪ್ರಮುಖ ವಿವಿಧೋದ್ದೇಶ ನದಿ ಯೋಜನೆಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ಬರೋಬ್ಬರಿ 135 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟು ಅಥವಾ ಪಂಪ ಸಾಗರವನ್ನು ಆಂಧ್ರ ಪ್ರದೇಶದಲ್ಲಿರುವ ಯೋಜನೆ ಎಂದು ಮಕ್ಕಳಿಗೆ ಕಲಿಸುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ಮಗನ ಪಠ್ಯಪುಸ್ತಕದ ನೀರಿನ ಸಂಪನ್ಮೂಲಗಳು ಪಾಠದಲ್ಲಿ ತುಂಗಭದ್ರ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ. ಇಂದೆಂತಹಾ ನಾಚಿಕೆಯ ವಿಷಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲೂ ಹರಿಯುವ ತುಂಗಭದ್ರಾ ನದಿಗೆ ಸಂಬಂಧಿಸಿದ ಯೋಜನೆ ಬಗ್ಗೆಯೇ ತಪ್ಪು ಮಾಹಿತಿ ನೀಡಲಾಗಿದೆ ಎಂದು ಮೋಹನ್ ದಾಸರಿ ಕುಟುಕಿದ್ದಾರೆ. ಈ ಕುರಿತ ಸಿಬಿಎಸ್‌ಇ ಪುಸ್ತಕ ಸಂಬಂಧಿತ ವಿಷಯವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications