ಬರದಲ್ಲೂ ದಸರಾ ಆಚರಣೆ ಏಕೆ?: ತುಮಕೂರು ದಸರಾ ಉದ್ಘಾಟಿಸಿ ಜಿ.ಪರಮೇಶ್ವರ ಕೊಟ್ಟ ಸಂದೇಶವೇನು
ತುಮಕೂರು: ಮೈಸೂರು ದಸರಾಗೆ ಅದ್ಧೂರಿ ದಸಾರ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಬೆನ್ನಲ್ಲೆ ತುಮಕೂರಿನಲ್ಲು ದಸರಾ ಹಬ್ಬಕ್ಕೆ ಚಾಲನೆ ನೀಡಲಾಯಿತು. 'ತಾಯಿ ಚಾಮುಂಡೇಶ್ವರಿ ಆರಾಧನೆ ಮೂಲಕ ಸುಭಿಕ್ಷ ನಾಡು, ಜನರ ಶಾಂತಿ ಮತ್ತು ನೆಮ್ಮದಿಗಾಗಿ ದಸರಾ ಉತ್ಸವ ಆಚರಿಸಲಾಗುತ್ತಿದೆ. ರಾಜ್ಯದಿಂದ ಬರಗಾಲ ದೂರವಾಗಿ ರೈತರಿಗೆ ಉತ್ತಮ ಕಾಲ ಬರಲಿ' ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪ್ರಾರ್ಥಿಸಿದರು.
ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 11-21ರವರೆಗೆ ಹಮ್ಮಿಕೊಂಡಿರುವ ತುಮಕೂರು ದಸರಾ ಉತ್ಸವಕ್ಕೆ ಭಾನುವಾರ ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯ ಜನರು ತುಮಕೂರು ದಸರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನರೆಲ್ಲರೂ ಒಟ್ಟಾಗಿ ಆಚರಿಸುವ ಹಬ್ಬವಾಗಿ ತುಮಕೂರು ದಸರಾ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ದಸರಾ ಬರೀ ಉತ್ಸವವಲ್ಲ, ಐತಿಹಸಿಕ ಪರಂಪರೆ
ಮೈಸೂರು ದಸರಾ ನಮ್ಮ ರಾಜ್ಯದ ಅತ್ಯಂತ ಮಹತ್ವದ ಐತಿಹಾಸಿಕ ಪರಂಪರೆಯಾಗಿದೆ. ಹಿಂದಿನ ಕಾಲದಲ್ಲಿ ಮಹಾರಾಜರು ನಡೆಸಿಕೊಂಡು ಬಂದಿದ್ದು, ಅವರ ನಂತರ ಸರ್ಕಾರವು ಅದನ್ನು ಮುನ್ನಡೆಸಿಕೊಂಡು ಬಂದಿದೆ. ಪ್ರತಿವರ್ಷ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸಿ, ಪೂಜೆ ಸಲ್ಲಿಸಿ, ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತದೆ ಎಂದರು.
ದಸರಾ ಕೇವಲ ಉತ್ಸವವಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸಂದೇಶವನ್ನು ಸಾರುವ ನಾಡಹಬ್ಬವಾಗಿದೆ. ಮೈಸೂರಿನಲ್ಲಿ ಎಂದಿನಂತೆ ವಿಜೃಂಭಣೆಯಿಂದ ತಾಯಿ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಬರಗಾಲ: ದಸರಾ ಆಚರಣೆ ಏಕೆ?
ಬರಗಾಲದಲ್ಲಿಯೂ ದಸರಾ ಆಚರಣೆ ಏಕೆಂಬ ಕೂಗು ಕೇಳಿ ಬರುತ್ತಿದೆ. ನಾಡಿನಲ್ಲಿ ಉದ್ಭವವಾಗಿರುವ ಅನಾವೃಷ್ಠಿಯನ್ನು ಹೋಗಲಾಡಿಸಲು ಚಾಮುಂಡಿ ದೇವಿಯ ಅನುಗ್ರಹ ನಮಗೆ ಅಗತ್ಯವಿದೆ. ನಾಡಿನ ಮಳೆ-ಬೆಳೆ ಪರಿಸ್ಥಿತಿ ಉತ್ತಮವಾಗಲೆಂದು ಈ ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಪೂಜಿಸುವುದನ್ನು ಹಿರಿಯರು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಹಿರಿಯರ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದೇ ನಮ್ಮ ಈ ಪ್ರಯತ್ನವಾಗಿದೆ ಎಂದು ಹೇಳಿದರು.
ಮೊದಲು ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆ
ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಉತ್ಸವದ ಬಗ್ಗೆ ಬಂದ ಕೆಲವು ಟೀಕೆ-ಟಿಪ್ಪಣಿಗಳನ್ನು ಸ್ವೀಕರಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಂಡು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಪ್ರಜೆಗಳನ್ನು ಅನೀತಿ ಹಾದಿಯಲ್ಲಿ ಸಾಗದಂತೆ ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಕಟ್ಟಿಹಾಕುವ ದೃಷ್ಟಿಯಿಂದ ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆ ಪ್ರಾರಂಭವಾಯಿತು.
Temple: ದೇವಸ್ಥಾನಗಳ ₹800 ಕೋಟಿ ಬಿಡುಗಡೆಗೆ ಆಗ್ರಹ, ಶ್ಲೋಕ ಹೇಳುವವರಿಂದ ಹಿಂದೂ ವಿರೋಧಿ ನಿಲುವು
ವಿಜಯನಗರ ಸಾಮ್ರಾಜ್ಯ ಅಳಿವಿನ ಅಂಚಿಗೆ ಬಂದ ಸಂದರ್ಭದಲ್ಲಿ ಉತ್ಸವ ಆಚರಣೆಯನ್ನು ಮೈಸೂರು ಸಂಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಅನೀತಿ, ಅಧರ್ಮ ಅಳಿದು ಧರ್ಮಕ್ಕೇ ಜಯ ಸಿಗಬೇಕೆಂದು ದೇವಿಯನ್ನು ಆರಾಧಿಸಲು ಪ್ರಾರಂಭವಾದ ಮೈಸೂರು ದಸರಾ ಇಂದು ವಿಶ್ವಪ್ರಸಿದ್ಧವಾಗಿದೆ. ಮೈಸೂರು ದಸರಾ ಉತ್ಸವದ ಸಂಭ್ರಮವನ್ನು ವೀಕ್ಷಿಸಲು ಸಾಧ್ಯವಾಗದವರು ತುಮಕೂರಿನಲ್ಲಿ ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಲು ಪ್ರಾರಂಭಿಸಲಾಯಿತು ಎಂದು ಅವರು ವಿವರಿಸಿದರು.

ತುಮಕೂರು ದಸರಾ ವೈಶಿಷ್ಟ್ಯಗಳು
ದಸರಾ ಮಹೋತ್ಸವದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಹೆಲಿರೈಡ್ ಸೇರಿದಂತೆ ಹಲವು ಆಕರ್ಷಣೆಗಳೊಂದಿಗೆ ತುಮಕೂರು ದಸರಾ ನಡೆಯುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪೂಜ್ಯ ಸ್ವಾಮೀಜಿಗಳು ಹೆಲಿರೈಡ್ನಲ್ಲಿ ಪಾಲ್ಗೊಂಡು ಒಂದು ಸುತ್ತು ಪ್ರಯಾಣಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಬೆಳಗ್ಗೆಯಿಂದಲೇ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ತಾಯಿಗೆ ಪೂಜೆ ಸಲ್ಲಿಸಲಾಗಿದೆ. ಧಾರ್ಮಿಕ ವಿಧಿವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ದಸರಾ ಎಲ್ಲರ ಹಬ್ಬವಾಗಲಿ ಹಾಗೂ ಜನರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಲಿ ಎಂದು ಆಶಿಸಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ದೂರವಾಗಿ ರೈತರಿಗೆ ಒಳ್ಳೆಯ ಕಾಲ ಬರಬೇಕು. ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆದು ನಾಡಿನಲ್ಲಿ ಸುಭೀಕ್ಷತೆ ನೆಲೆಸಬೇಕು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ತಾಯಿ ನಮ್ಮ ಪ್ರಾರ್ಥನೆಯನ್ನು ಆಲಿಸಿ ಆಶೀರ್ವದಿಸುತ್ತಾಳೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ತುಮಕೂರು ಜನರಲ್ಲಿ ಡಿಸಿಎಂ ಮನವಿ
ಜಿಲ್ಲೆಯ ಜನತೆ ದಸರಾ ಉತ್ಸವದ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭವ್ಯವಾಗಿ ನಿರ್ಮಿಸಿರುವ ಶ್ರೀ ಡಾ: ಶಿವಕುಮಾರ ಮಹಾಸ್ವಾಮೀಜಿ ಧಾರ್ಮಿಕ ಮಹಾಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ತಾಯಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಮಾತನಾಡಿ, ಮನುಷ್ಯನ ಅಂತರಂಗ-ಬಹಿರಂಗ ಶುದ್ಧಿಗಾಗಿ ಇಂತಹ ಹಬ್ಬಗಳ ಆಚರಣೆ ಅತ್ಯಾವಶ್ಯಕ. ಇಲ್ಲಿ ಪೂಜಿಸುವ ಶಕ್ತಿರೂಪಿಣಿ ಚಾಮುಂಡೇಶ್ವರಿಯ ಆಶೀರ್ವಾದ ಜಿಲ್ಲೆಗೆ ದೊರೆಯಲಿ ಎಂದು ತಿಳಿಸಿದರು.
ಎಲೆರಾಂಪುರ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀ ಡಾ. ಹನುಮಂತನಾಥ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತುಮಕೂರು ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದಸರಾ ಉತ್ಸವ ಆಚರಣೆಯಲ್ಲಿ ತುಮಕೂರು ಎರಡನೇ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳನ್ನೊಳಗೊಂಡ ಈ ದಸರಾ ಆಚರಣೆ ಮನೆ-ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ನುಡಿದರು.
ಸುಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಮಠದ ಶ್ರೀ ಷ: ಬ್ರ: ವೀರಭದ್ರ ಶಿವಾಚಾರ್ಯ ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ತಾಯಿ ಚಾಮುಂಡೇಶ್ವರಿಯು ದುಷ್ಟಶಕ್ತಿಯನ್ನು ಸಂಹರಿಸಿದಂತೆ ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರವನ್ನು ಸಂಹಾರ ಮಾಡಿಕೊಳ್ಳಬೇಕೆಂಬುದೇ ನವರಾತ್ರಿಯ ಆಚರಣೆ ಪ್ರತೀಕವೆಂದು ಮಾರ್ಮಿಕವಾಗಿ ಹೇಳಿದರು.
ಬೆಳ್ಳಾವಿ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಮಾತನಾಡಿ ಜಿಲ್ಲಾ ದಸರಾ ಉತ್ಸವವು ತುಮಕೂರು ದಸರಾ-ಎಷ್ಟೊಂದು ಸುಂದರ" ಎನ್ನುವಂತೆ ಮಾಡಿದೆ. ಬರಗಾಲವಿದ್ದರೂ ದಸರಾ ಆಚರಣೆ ಮೂಲಕ ಜಿಲ್ಲೆಯಲ್ಲಿ ಉಂಟಾಗಿರುವ ಬರಪರಿಸ್ಥಿತಿಯಿಂದ ಪಾರು ಮಾಡೆಂದು ದೇವಿಸ್ತುತಿ ಮಾಡುವುದು ತಪ್ಪಲ್ಲವೆಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನ: ಸ್ವಾಮೀಜಿಗಳ ಆಶೀರ್ವಾದ
ಸ್ವಾಮೀಜಿಗಳು ತಾವು ಮುಖ್ಯಮಂತ್ರಿ ಆಗಲಿ ಎಂದು ಆಶೀರ್ವದಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಸ್ವಾಮೀಜಿಗಳು ಆಶೀರ್ವದಿಸುವುದು ಹಾಗೂ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಹಜ. ಜನರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಲಾಷೆ ಇರಬಹುದು. ಆದರೆ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಪದ್ಧತಿಗಳು, ನಿಯಮಗಳು ಹಾಗೂ ಪಕ್ಷದ ವ್ಯವಸ್ಥೆಗಳಿದ್ದು, ಅವುಗಳ ಅನುಸಾರವೇ ಎಲ್ಲವೂ ನಡೆಯಬೇಕು ಎಂದು ಹೇಳಿದರು.


Click it and Unblock the Notifications
