Tomato Price: ಟೊಮೆಟೊ ಬೆಲೆ ₹200 ಅಲ್ಲ ಈಗ ಬರೀ ₹40!
ಬೆಂಗಳೂರು: ಅತ್ತೆಗೆ ಒಂದು ಕಾಲ, ಸೊಸೆಗು ಒಂದು ಕಾಲ ಅನ್ನೋ ಮಾತು ಟೊಮೆಟೊ ಬೆಳೆಗೆ ಅನ್ವಯಿಸಿತ್ತು. ಬೆಲೆಯೇ ಇಲ್ಲದೆ ರೈತರು ಕಂಗಾಲಾಗಿದ್ದಾಗ ದಿಢೀರ್ ಟೊಮೆಟೊಗೆ ಭಾರಿ ರೇಟ್ ಬಂದಿತ್ತು. ರೈತರು ಕೂಡ ಟೊಮೆಟೊ ಬೆಲೆ ಹೆಚ್ಚಾದಾಗ ಖುಷಿ ಖುಷಿಯಾಗಿ ಲಕ್ಷ ಲಕ್ಷ ಎಣಿಸಿದ್ದರು. ಆದರೆ ಅದೆಲ್ಲಾ ಈಗ ಮುಗಿದ ಅಧ್ಯಾಯ, ಟೊಮೆಟೊ ಬೆಲೆ ಈಗ ದಿಢೀರ್ ₹40 ರೂಪಾಯಿಗೆ ಕುಸಿದಿದೆ. ದೇಶದ ವಿವಿಧೆಡೆ ಮುಗಿಲು ಮುಟ್ಟಿದ್ದ ಟೊಮೆಟೊ ಬೆಲೆ ರೈತರಿಗೆ ದೊಡ್ಡ ಆಘಾತ ನೀಡುತ್ತಿದೆ.
ಟೊಮೆಟೊ ಬೆಲೆ ಸೇಬು ಬೆಲೆಯನ್ನೂ ಮೀರಿಸಿ ಬೆಳೆದಿತ್ತು. ಹೀಗೆ 300 ರೂಪಾಯಿ ಕಡೆಗೆ ರೇಟ್ ಮುಖ ಮಾಡಿತ್ತು. ಇದು ತಿಂಗಳ ಕಥೆಯಲ್ಲ ಕೆಲ ವಾರದ ಹಿಂದೆ ಇದ್ದ ಸ್ಥಿತಿ. ಹೀಗೆ ಟೊಮೆಟೊ ಪ್ರತಿ ಕೆಜಿಗೆ 200-250ರ ಆಸುಪಾಸಿಂದ ಕುಸಿದಿದೆ. ಹೀಗೆ ದಿಢೀರ್ ಬೆಲೆ ಕುಸಿತ ಕಂಡು ರೈತರು ಕಂಗಾಲಾಗಿದ್ರೆ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರದ ಮನ್ಮಾಡ್ & ನಾಸಿಕ್ ಮಾರುಕಟ್ಟೆಗಳಲ್ಲೂ ಕಳೆದ ತಿಂಗಳಿಂದ ಭಾರಿ ಬೆಲೆ ಬಂದಿತ್ತು. ಈಗ ಅದೆಲ್ಲಾ ಮುಗಿದು ಹೋದ ಕಥೆ ಟೊಮೆಟೊ ಬೆಲೆ ಇದೇ ರೀತಿ ಮತ್ತಷ್ಟು ಕುಸಿಯುವುದು ಪಕ್ಕಾ.

ಬೇರೆ ದೇಶದಿಂದ ಟೊಮೆಟೊ ಎಂಟ್ರಿ
ಟೊಮೆಟೊ ಬೆಲೆ ಏರಿಕೆಗೆ ಹಲವು ಕಾರಣ ಇತ್ತು. ಇದರಲ್ಲಿ ಪ್ರಮುಖವಾಗಿ ಬೆಳೆ ಕೊರತೆ & ಸರಬರಾಜು ವ್ಯತ್ಯಾಸ ಬೆಲೆ ಏರಿಕೆಗೆ ಕಾರಣವಾಗಿತ್ತು. ಹಾಗೇ ಪ್ರಾಕೃತಿಕ ವಿಕೋಪ ಕೂಡ ಟೊಮೆಟೊ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿತ್ತು. ಇದೀಗ ಹೊಸ ಟೊಮೆಟೊ ಬೆಳೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಮಾರುಕಟ್ಟೆಗೆ ಹೊಸ ಟೊಮೆಟೋ ಆಗಮನ ಪರಿಣಾಮ ಒಳಹರಿವು ಹೆಚ್ಚಿರುವುದರಿಂದ ಟೊಮೆಟೊ ಬೆಲೆ ಕುಸಿಯುತ್ತ ಸಾಗಿದೆ. ಇದರ ಜೊತೆ ಇನ್ನೂ ಒಂದು ಆಕ್ರೋಶವೂ ಮೊಳಗಿದ್ದು, ನೆರೆಯ ದೇಶಗಳಿಂದ ಟೊಮೆಟೊ ಆಮದಿಗೆ ರೈತರು ಆಕ್ರೋಶ ಹೊರಹಾಕಿದ್ದಾರೆ.

ನೇಪಾಳದಿಂದ ದಿಢೀರ್ ಟೊಮೆಟೊ ಎಂಟ್ರಿ
ಅಂದಹಾಗೆ ನೆರೆ ದೇಶ ನೇಪಾಳದಿಂದ ಭಾರಿ ಪ್ರಮಾಣದ ಟೊಮೆಟೊ ತರಿಸಿಕೊಳ್ಳಲಾಗ್ತಿದೆ. ದೇಶದಲ್ಲಿ ಟೊಮೆಟೊ ಬೆಲೆ ಭಾರಿ ಏರಿಕೆ ಕಂಡಿತ್ತು. ಅದರಲ್ಲೂ ಉತ್ತರ ಭಾರತದಲ್ಲಿ ಈ ಬೆಲೆ ಏರಿಕೆ ಸಾಕಷ್ಟು ಸದ್ದು ಮಾಡಿತ್ತು. ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುತ್ತಿದ್ದು ನೇಪಾಳದಿಂದ ಉತ್ತರ ಪ್ರದೇಶಕ್ಕೆ 10 ಟನ್ ಟೊಮೆಟೊ ತರಿಸಿಕೊಳ್ಳಲು ನಿರ್ಧರಿಸಲಾಗಿದೆ ಹೀಗೆ ಟೊಮೆಟೊ ಬೆಳೆದ ನಮ್ಮ ರೈತರಿಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ. ಇನ್ನೂ ಉತ್ತಮ ಬೆಲೆ ಬಂತು ಅನ್ನುವಾಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಅದ್ರಲ್ಲೂ ನೆರೆಯ ದೇಶದಿಂದ ಟೊಮೆಟೊ ಬಂದ್ರೆ ಇದು ಮತ್ತಷ್ಟು ಬರೆ ಹಾಕಲಿದೆ ಅನ್ನೋದು ರೈತರ ಬೇಸರ.

ಕರ್ನಾಟಕದಲ್ಲಿ 14 ಕೆಜಿ ತೂಕದ ಬಾಕ್ಸ್‌ಗೆ ಇಂದು ಸರಾಸರಿ 550 ರೂಪಾಯಿ ರೇಟ್ ಸಿಕ್ಕಿದ್ದು, ರೈತರು ಆತಂಕದಲ್ಲಿದ್ದಾರೆ. ಕಳೆದ ಕೆಲ ತಿಂಗಳಲ್ಲಿ 14 ಕೆಜಿ ತೂಕದ ಬಾಕ್ಸ್‌ಗೆ 2500 ರೂ. ಬೆಲೆ ಬಂದಿತ್ತು. ಕಳೆದ ಸೋಮವಾರ ಕುಸಿತದ ಹಾದಿ ಹಿಡಿದ ಟೊಮೆಟೊ ಬೆಳೆ ಮೊದಲಿಗೆ ₹1700ಕ್ಕೆ ಕುಸಿದಿತ್ತು. ಬಳಿಕ ಬೆಲೆ 1550ಕ್ಕೆ ಕುಸಿತ ಕಂಡಿತ್ತು. 1200 ರೂಪಾಯಿಗೆ ಬಿದ್ದಿದ್ದ ಬೆಲೆಯು 800 ರೂಪಾಯಿಗೆ ಬಂದು ನಿಂತಿತ್ತು. ಆದ್ರೆ ಕೆಲ ದಿನದಿಂದ ನಿರಂತರ 1000 ರೂ. ಆಸುಪಾಸಿನಲ್ಲಿ ರೇಟ್ ಇತ್ತು. ಇಂದು ಬೆಲೆ ದಿಢೀರ್ ಕುಸಿದು ಸರಾಸರಿ 550 ರೂಪಾಯಿ ಬಂದು ನಿಂತಿದೆ. ಈ ಮೂಲಕ ವಿದೇಶಿ ಟೊಮೆಟೊ ಅಬ್ಬರ ಕೂಡ ಜೋರಾಗುತ್ತಿದೆ. ಹೀಗಾಗಿ ಸರ್ಕಾರವು ಬೇರೆ ದೇಶದಿಂದ ಟೊಮೆಟೊ ಆಮದು ಮಾಡಬಾರದು ಎಂದು ರೈತರು ಆಗ್ರಹಿಸಿದ್ದಾರೆ.












Click it and Unblock the Notifications