Tomato Price: ಚಿಕ್ಕಮಗಳೂರಿನಲ್ಲಿ 26 ಕೆ.ಜಿ. ಟೊಮ್ಯಾಟೋ 5000 ರೂಪಾಯಿಗೆ ಹರಾಜು! ಬೆಂಗಳೂರಿನಲ್ಲಿ ಗಗನಕ್ಕೇರಿದ ಬೆಲೆ
ದೇಶಾದ್ಯಂತ ಟೊಮ್ಯಾಟೋ ದರ ಮತ್ತೆ ಹೆಚ್ಚಳವಾಗಿದೆ. ಭಾನುವಾರ ತಮಿಳುನಾಡಿನ ಹಲವು ನಗರಗಳಲ್ಲಿ ಟೊಮ್ಯಾಟೋ ದರ ಕೆಜಿಗೆ 200 ರೂಪಾಯಿ ಗಡಿ ದಾಟಿತ್ತು, ಇದೀಗ ರಾಜ್ಯದಲ್ಲಿ ಕೂಡ ದರ ಗಗನಕ್ಕೇರಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಂಪು ಸುಂದರಿಯ ದರ ಮುಗಿಲು ಮುಟ್ಟಿದೆ. 26 ಕೆ.ಜಿ. ಒಂದು ಬಾಕ್ಸ್ ಟೊಮೆಟೋ ಬರೋಬ್ಬರಿ 5000 ರೂಪಾಯಿಗೆ ಹರಾಜಾಗಿದೆ. ಈವರೆಗೂ ಇಷ್ಟೊಂದು ಬೆಲೆಗೆ ಟೊಮ್ಯಾಟೋ ಮಾರಾಟವಾಗಿದ್ದನ್ನು ಜೀವನದಲ್ಲೇ ಕಂಡಿಲ್ಲ ಎಂದಿದ್ದಾರೆ ದಲ್ಲಾಳಿಗಳು, ಮಾರಾಟಗಾರರು. ಉತ್ತರ ಭಾರತದಲ್ಲಿ ಚಿಕ್ಕಮಗಳೂರಿನಲ್ಲಿ ಬೆಳೆಯುವ ಟೊಮ್ಯಾಟೋಗೆ ಭಾರಿ ಬೇಡಿಕೆ ಇರುವ ಕಾರಣ ಬೆಲೆ ಇಷ್ಟೊಂದು ಹೆಚ್ಚಾಗಿದೆ.

ಚಿಲ್ಲರೆ ದರ 200 ರೂಪಾಯಿ ದಾಟಿದ್ದು, ಜನ ಟೊಮ್ಯಾಟೊ ಬೆಲೆ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಇತ್ತ ರೈತರು ಭಾರಿ ಮಳೆಯಿಂದ ಕೈಗೆ ಬಂದ ಬೆಳೆಯನ್ನು ಉಳಿಸಿಕೊಳ್ಳಲು ಕಷ್ಟ ಪಡುವಂತಾಗಿದೆ. ಅಧಿಕ ಬೆಲೆ ಇರುವ ಕಾರಣ ಕಳ್ಳರ ಕಾಟ ಹೆಚ್ಚಾಗಿದೆ. ಇನ್ನೊಂದು ಕಡೆ ಮಳೆಯಿಂದ ಬೆಳೆ ನಷ್ಟವಾಗುತ್ತಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕಾರಣ ಟೊಮ್ಯಾಟೋ ಬೆಳೆ ನಷ್ಟವಾಗಿದೆ. ಇದರಿಂದ ಪೂರೈಕೆ ಮತ್ತಷ್ಟು ಕಡಿಮೆಯಾಗಿದ್ದು ಬೆಲೆ ಇನ್ನಷ್ಟು ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 150 ರೂಪಾಯಿ ದಾಟಿದ ಟೊಮ್ಯಾಟೋ
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಟೊಮ್ಯಾಟೋ ದರ 80-100 ರೂಪಾಯಿ ಆಸುಪಾಸಿನಲ್ಲಿತ್ತು. ಆದರೆ ಇಂದು ದಿಢೀರನೆ ಬೆಲೆ ಏರಿಕೆಯಾಗಿದ್ದು 150-160 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಹೆಚ್ಚಳದಿಂದ ಮಾರಾಟಗಾರರು ಕೂಡ ನಷ್ಟ ಅನುಭವಿಸುವಂತಾಗಿದೆ.
ಹೆಚ್ಚಿನ ಬೆಲೆ ಇರುವ ಕಾರಣ ಗ್ರಾಹಕರು ಟೊಮ್ಯಾಟೋ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚು ದಿನ ಇಟ್ಟರೆ ಟೊಮ್ಯಾಟೋ ಹಾಳಾಗುವ ಕಾರಣ, ಖರೀದಿ ಮಾಡಿದ್ದಕ್ಕಿಂತ ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟ ಮಾಡುತ್ತಿದ್ದಾರೆ ವ್ಯಾಪಾರಿಗಳು.
ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ?
ರಾಜ್ಯದ ಹವಾಮಾನ ಬದಲಾವಣೆ, ಹೊಸ ರೋಗಗಳ ಕಾಟದಿಂದ ಹಲವು ರೈತರು ಟೊಮ್ಯಾಟೋ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಸಾಕಷ್ಟು ರೈತರಿಗೆ ಟೊಮ್ಯಾಟೋ 2-3 ಬಾರಿ ಕಟಾವು ಮಾಡುವಷ್ಟರಲ್ಲಿ ರೋಗಬಾಧೆಯಿಂದ ಬೆಳೆ ಹಾಳಾಗಿದೆ. ಕೋಲಾರ ದೇಶದಲ್ಲಿ ಪ್ರಮುಖ ಟೊಮ್ಯಾಟೋ ಮಾರುಕಟ್ಟೆಯಾಗಿದ್ದು ಇಲ್ಲಿಗೆ ಬರುವ ಟೊಮ್ಯಾಟೋ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಬೆಲೆ ಮತ್ತೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಮತ್ತೆ ಮಳೆ ಹೆಚ್ಚಾದರೆ ಈಗ ಇರುವ ಬೆಳೆಯೂ ಹಾಳಾಗಲಿದ್ದು ಮುಂದಿನ ದಿನಗಳಲ್ಲಿ ಟೊಮ್ಯಾಟೋ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications